ಹಾಲಿವುಡ್ ಸಿನಿಮಾಗಳಿಗೆ ವಿಶ್ವಾದ್ಯಂತ ಮಾರುಕಟ್ಟೆ ಇದೆ. ಅದ್ದೂರಿ ಬಜೆಟ್ನಲ್ಲಿ ಮೂಡಿಬರುವ ಇಂಗ್ಲಿಷ್ ಸಿನಿಮಾಗಳನ್ನು ಪ್ರಪಂಚದಾದ್ಯಂತ ಇರುವ ಪ್ರೇಕ್ಷಕರು ಇಷ್ಟಪಡುತ್ತಾರೆ. ಈಗ ‘ಅವತಾರ್ 2’ (Avatar 2) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಡಿಸೆಂಬರ್ 16ರಂದು ಪ್ರಪಂಚದ ಸಾವಿರಾರು ಚಿತ್ರಮಂದಿರಗಳಲ್ಲಿ ಈ ಚಿತ್ರ ಅಬ್ಬರಿಸಲಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಹೊಸ ದಾಖಲೆ ಬರೆಯುವುದು ಖಚಿತ ಎಂಬುದಕ್ಕೆ ಸೂಚನೆ ಸಿಗುತ್ತಿದೆ. 24 ದಿನಗಳ ಮುನ್ನವೇ ‘ಅವತಾರ್ 2’ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕಿಂಗ್ (Avatar 2 Advance Booking) ಓಪನ್ ಆಗಿದೆ. ಬೆಂಗಳೂರು, ಮುಂಬೈ ಸೇರಿದಂತೆ ಭಾರತದ ಹಲವು ನಗರಗಳಲ್ಲಿ ವೇಗವಾಗಿ ಎಲ್ಲ ಟಿಕೆಟ್ಗಳು ಸೋಲ್ಡ್ ಔಟ್ ಆಗುತ್ತಿವೆ.
ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವರು ‘ಅವತಾರ್ 2’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅವರ ಮೇಲೆ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಭರವಸೆ ಇದೆ. 13 ವರ್ಷಗಳ ಹಿಂದೆ ‘ಅವತಾರ್’ ಚಿತ್ರ ತೆರೆಕಂಡು ದಾಖಲೆ ಬರೆದಿತ್ತು. ಬಳಿಕ ಆ ಚಿತ್ರಕ್ಕೆ ಸೀಕ್ವೆಲ್ ಅನೌನ್ಸ್ ಆಯಿತು. ಈಗ ‘ಅವತಾರ್ 2’ ಚಿತ್ರವನ್ನು ನೋಡುವ ಸಮಯ ಹತ್ತಿರವಾಗುತ್ತಿದೆ. ಈ ಸಿನಿಮಾ ಮೇಲೆ ಜನರಿಗೆ ಎಷ್ಟು ನಿರೀಕ್ಷೆ ಇದೆ ಎಂಬುದಕ್ಕೆ ಟಿಕೆಟ್ ಬುಕಿಂಗ್ ಆಗುತ್ತಿರುವುದೇ ಸಾಕ್ಷಿ.
ಪ್ರಪಂಚದ ಹಲವು ಭಾಷೆಗಳಿಗೆ ಡಬ್ ಆಗಿ ‘ಅವತಾರ್ 2’ ತೆರೆಕಾಣುತ್ತಿದೆ. ಭಾರತದಲ್ಲಿ ಹಿಂದಿ, ಇಂಗ್ಲಿಷ್, ಕನ್ನಡ, ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಕನ್ನಡದಲ್ಲಿ ರಿಲೀಸ್ ಮಾಡಲು ನಿರ್ಮಾಣ ಸಂಸ್ಥೆ ಹಿಂದೇಟು ಹಾಕಿತ್ತು. ಆದರೆ ಕರ್ನಾಟಕದಲ್ಲಿನ ಪ್ರೇಕ್ಷಕರಿಂದ ಕಟು ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕನ್ನಡದಲ್ಲೂ ಈಗ ಬಿಡುಗಡೆ ಮಾಡಲಾಗುತ್ತಿದೆ.
3ಡಿ, ಇಮ್ಯಾಕ್ಸ್ 3ಡಿ, 4ಡಿಎಕ್ಸ್ ಮುಂತಾದ ವರ್ಷನ್ನಗಳಲ್ಲಿ ‘ಅವತಾರ್ 2’ ಪ್ರದರ್ಶನ ಆಗಲಿದೆ. ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳುವಲ್ಲಿ ಫೇಮಸ್ ಆದವರು ಜೇಮ್ಸ್ ಕ್ಯಾಮೆರಾನ್. ದಶಕಗಳ ಹಿಂದೆಯೇ ಅವರು ದೊಡ್ಡ ಪರದೆಯಲ್ಲಿ ಜಾದೂ ಮಾಡಿದ್ದರು. ಈಗ ಅವರು ಪ್ರೇಕ್ಷಕರ ಎದುರು ಹೊಸ ಲೋಕವನ್ನೇ ತೆರೆದಿಡಲು ಸಜ್ಜಾಗಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಮತ್ತು ಟ್ರೇಲರ್ ಗಮನ ಸೆಳೆದಿದೆ. ಫೈನಲ್ ಟ್ರೇಲರ್ ಕೂಡ ಇತ್ತೀಚೆಗೆ ಬಿಡುಗಡೆ ಆಗಿದ್ದು, ಸಿನಿಮಾ ಮೇಲಿನ ಕೌತುಕ ಹೆಚ್ಚಿಸಿದೆ.
24 ದಿನಗಳಿಗೂ ಮುನ್ನವೇ ‘ಅವತಾರ್ 2’ ಚಿತ್ರದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಬೆಂಗಳೂರಿನ ಹಲವು ಪರದೆಗಳಲ್ಲಿ ಈಗಾಗಲೇ ಟಿಕೆಟ್ ಸೋಲ್ಟ್ ಔಟ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.