ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ (James Cameron) ಅವರು ಮಾಡುವ ಪ್ರತಿ ಸಿನಿಮಾಗಳು ದಾಖಲೆ ಬರೆಯುತ್ತವೆ. ಗ್ರಾಫಿಕ್ಸ್ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಅವರಿಗೆ ಬೇರಾರೂ ಸಾಟಿ ಇಲ್ಲ ಎನ್ನಬಹುದು. ಹಾಲಿವುಡ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾ ಮಾಡುವ ಎದೆಗಾರಿಕೆ ತೋರಿದ ಅವರು ಈಗ ‘ಅವತಾರ್: ದಿ ವೇ ಆಫ್ ವಾಟರ್’ (Avatar: The Way of Water) ಸಿನಿಮಾ ಮೂಲಕ ಗೆದ್ದು ಬೀಗುತ್ತಿದ್ದಾರೆ. ವಿಶ್ವಾದ್ಯಂತ ಈ ಸಿನಿಮಾ 1.5 ಬಿಲಿಯನ್ ಡಾಲರ್ಗಿಂತಲೂ ಅಧಿಕ ಕಲೆಕ್ಷನ್ ಮಾಡಿದೆ. ಈ ಕಲೆಕ್ಷನ್ನಿಂದಾಗಿ ಚಿತ್ರತಂಡಕ್ಕೆ ಭರವಸೆ ಮೂಡಿದೆ. ಹಾಗಾಗಿ ‘ಅವತಾರ್’ ಸಿನಿಮಾದ 3, 4 ಮತ್ತು 5ನೇ ಸೀಕ್ವೆಲ್ಗಳನ್ನು ಮಾಡಲು ಜೇಮ್ಸ್ ಕ್ಯಾಮೆರಾನ್ ಮುಂದೆಬಂದಿದ್ದಾರೆ.
‘ಅವತಾರ್ 2’ ಸಿನಿಮಾ 2022ರ ಡಿಸೆಂಬರ್ 16ರಂದು ತೆರೆಕಂಡಿತು. ಈ ಸಿನಿಮಾದ ರಿಲೀಸ್ಗೂ ಮುನ್ನ ಜೇಮ್ಸ್ ಕ್ಯಾಮೆರಾನ್ ಒಂದು ಮಾತು ಹೇಳಿದ್ದರು. ಒಂದು ವೇಳೆ ‘ಅವತಾರ್ 2’ ಸೋತರೆ ಇನ್ನುಳಿದ ಸೀಕ್ವೆಲ್ಗಳನ್ನು ಮಾಡುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ ಈಗ ‘ಅವತಾರ್ 2’ ಚಿತ್ರ ಗೆದ್ದಿರುವುದರಿಂದ ‘ಅವತಾರ್ 3’ ಸಿನಿಮಾ ಮಾಡುವುದು ಅನಿವಾರ್ಯ ಆಗಿದೆ ಎಂದಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಇದನ್ನೂ ಓದಿ: ‘ಅವತಾರ್ 2’ ಚಿತ್ರವನ್ನು ಕೇವಲ 200 ರೂಪಾಯಿಗೆ ನೋಡಬಹುದು; ಹೊಸ ನಿಯಮ ಜಾರಿಗೆ ತರಲು ಚಿಂತನೆ
‘ಈ ಸಿನಿಮಾಗೆ ಹಾಕಿದ ಬಂಡವಾಳ ಇನ್ನು ಕೆಲವೇ ದಿನಗಳಲ್ಲಿ ವಾಪಸ್ ಬರಲಿದೆ ಎನಿಸುತ್ತದೆ. ಹಾಗಾಗಿ ನಾನು ಇನ್ನುಳಿದ ಸೀಕ್ವೆಲ್ಗಳನ್ನು ಮಾಡಲೇಬೇಕಾಗಿದೆ. ಮುಂದಿನ 6 ಅಥವಾ 7 ವರ್ಷಗಳ ಕಾಲ ನಾನು ಏನು ಮಾಡುತ್ತೇನೆ ಎಂಬುದು ನನಗೆ ತಿಳಿದಿದೆ’ ಎಂದು ಜೇಮ್ಸ್ ಕ್ಯಾಮೆರಾನ್ ಹೇಳಿದ್ದಾರೆ. ಮೂರನೇ ಸೀಕ್ವೆಲ್ ಸಲುವಾಗಿ ಅವರು ನಿರ್ಮಾಣ ಸಂಸ್ಥೆಯ ಮುಖ್ಯಸ್ಥರ ಜೊತೆ ಶೀಘ್ರದಲ್ಲೇ ಮೀಟಿಂಗ್ ಮಾಡಲಿದ್ದಾರೆ.
ಅಚ್ಚರಿ ಎಂದರೆ, ‘ಅವತಾರ್ 3’ ಸಿನಿಮಾದ ಬಹುತೇಕ ದೃಶ್ಯಗಳನ್ನು ಅವರು ಈಗಾಗಲೇ ಚಿತ್ರಿಸಿಕೊಂಡಿದ್ದಾರೆ. ಇನ್ನೇನಿದ್ದರೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳತ್ತ ಗಮನ ಹರಿಸಬೇಕಷ್ಟೇ. ಗ್ರಾಫಿಕ್ಸ್ ಕೆಲಸಗಳು ಹೆಚ್ಚಿರುವುದರಿಂದ ಅದಕ್ಕೆ ಜಾಸ್ತಿ ಸಮಯ ಹಿಡಿಯಲಿದೆ. ಇನ್ನುಳಿದಂತೆ ‘ಅವತಾರ್ 4’ ಮತ್ತು ‘ಅವತಾರ್ 5’ ಚಿತ್ರಗಳಿಗೆ ಈಗಾಗಲೇ ಅವರು ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ.
‘ಅವತಾರ್ 2’ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತದೆ ಎಂಬ ಬಗ್ಗೆ ಜೇಮ್ಸ್ ಕ್ಯಾಮೆರಾನ್ ಅವರಿಗೆ ಅನುಮಾನ ಇತ್ತು. ಒಂದು ವೇಳೆ ಸಿನಿಮಾ ಸೋತರೆ ಸೀಕ್ವೆಲ್ಗಳ ಸಹವಾಸ ಬೇಡ ಎಂದು ಅವರು ಆಲೋಚಿಸಿದ್ದರು. ಆದರೆ ಈಗ ‘ಅವತಾರ್ 2’ ಸಿನಿಮಾ ಗೆದ್ದಿರುವುದರಿಂದ ಅವರ ಆತ್ಮವಿಶ್ವಾಸ ಹೆಚ್ಚಿದಂತಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.