‘ಅಬ್ಸೆಷನ್’ ಚಿತ್ರಕ್ಕೆ ಹೆಚ್ಚು ಶೋ: ತಮ್ಮ ಸಿನಿಮಾಗೆ ಚಿತ್ರಮಂದಿರ ಸಿಗದಿದ್ದಕ್ಕೆ ಅನುರಾಗ್ ಕಶ್ಯಪ್ ಬೇಸರ

ಹಾಲಿವುಡ್‌ ಸಿನಿಮಾ ‘ಅಬ್ಸೆಷನ್’ ಭಾರತದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈಗಾಗಲೇ 60 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೇ ಕಾರಣಕ್ಕೆ ಚಿತ್ರಮಂದಿರಗಳ ಮಾಲೀಕರು ಈ ಚಿತ್ರಕ್ಕೆ ಹೆಚ್ಚಿನ ಪ್ರದರ್ಶನಗಳನ್ನು ನೀಡುತ್ತಿರುವುದು ದೇಶಿ ಚಿತ್ರಗಳ ನಿರ್ಮಾರ್ಪಕರಿಗೆ ಮತ್ತು ನಿರ್ದೇಶಕರಿಗೆ ಅಸಮಾಧಾನ ತಂದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಅಬ್ಸೆಷನ್’ ಚಿತ್ರಕ್ಕೆ ಹೆಚ್ಚು ಶೋ: ತಮ್ಮ ಸಿನಿಮಾಗೆ ಚಿತ್ರಮಂದಿರ ಸಿಗದಿದ್ದಕ್ಕೆ ಅನುರಾಗ್ ಕಶ್ಯಪ್ ಬೇಸರ
Obsession Movie Still
Image Credit source: Blumhouse Productions

Updated on: Jun 14, 2026 | 7:05 AM

ಕಳೆದ ಕೆಲವು ದಿನಗಳಿಂದ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಪ್ರಾದೇಶಿಕ ಸಿನಿಮಾಗಳು ಮತ್ತು ಹಾಲಿವುಡ್ ಚಿತ್ರ ‘ಅಬ್ಸೆಷನ್’ (Obsession) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸದ್ಯ ಚಿತ್ರಮಂದಿರಗಳಲ್ಲಿ ಬರೋಬ್ಬರಿ 14ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಳ್ಳುತ್ತಿದ್ದು, ಪರದೆಗಾಗಿ ಕಸರತ್ತು ನಡೆಸುತ್ತಿವೆ. ಈ ಮಧ್ಯೆ, ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಅವರು ಚಿತ್ರಮಂದಿರಗಳ ಶೋ ಹಂಚಿಕೆ ವಿಚಾರವಾಗಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅವರು ನಿರ್ದೇಶನ ಮಾಡಿರುವ ‘ಬಂದರ್’ ಸಿನಿಮಾಗೆ ಸರಿಯಾದ ಶೋಗಳು ಸಿಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಅನುರಾಗ್ ಕಶ್ಯಪ್, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸೂಪರ್ ಹಿಟ್ ಆಗಿ ಮುನ್ನುಗ್ಗುತ್ತಿರುವ ಹಾಲಿವುಡ್ ಚಿತ್ರ ‘ಅಬ್ಸೆಷನ್’ಗೆ ಪ್ರೈಮ್ ಟೈಮ್ (ಉತ್ತಮ ಪ್ರದರ್ಶನದ ಸಮಯ) ನೀಡಲಾಗುತ್ತಿದೆ, ಆದರೆ ನಮ್ಮದೇ ದೇಶದ ಸಿನಿಮಾಗಳು ಚಿತ್ರಮಂದಿರ ಸಿಗದೇ ಪರದಾಡುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಪ್ರತಿಯೊಬ್ಬರೂ ಅಬ್ಸೆಷನ್ ಸಿನಿಮಾ ನೋಡಲು ಬಯಸುತ್ತಾರೆ ಎಂಬುದನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ. ಆದರೆ ಕಡಿಮೆ ಶೋಗಳೊಂದಿಗೆ ಆ ಸಿನಿಮಾ ದೀರ್ಘಕಾಲ ಓಡಬಹುದು. ನಾವು ನಮ್ಮದೇ ಆದ ಸಿನಿಮಾಗಳಿಗೆ ಆದ್ಯತೆ ನೀಡಿ ಉತ್ತಮ ಪ್ರದರ್ಶನಗಳನ್ನು ನೀಡದಿದ್ದರೆ, ನಮ್ಮ ಚಿತ್ರರಂಗ ಹೇಗೆ ಬೆಳೆಯಲು ಸಾಧ್ಯ?’ ಎಂದು ಅನುರಾಗ್ ಕಶ್ಯಪ್ ಪ್ರಶ್ನೆ ಮಾಡಿದ್​ದಾರೆ.

‘ಕಳೆದ ವಾರ ನನ್ನ ‘ಬಂದರ್’ ಚಿತ್ರಕ್ಕೆ ಹೀಗಾಯಿತು. ಈ ವಾರ ಇಮ್ತಿಯಾಜ್ ಅಲಿ ಅವರ ‘ಮೈ ವಾಪಸ್ ಆವುಂಗಾ’, ‘ಸಿಂಗ್ ಗೀತಂ’ ಮತ್ತು ‘ಗವರ್ನರ್’ ಚಿತ್ರಗಳಿಗೆ ಇದೇ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನಲ್ಲಿ ‘ಮೈ ವಾಪಸ್ ಆವುಂಗಾ’ ಮತ್ತು ‘ಗವರ್ನರ್’ ಚಿತ್ರಗಳಿಗೆ ಕೇವಲ ಒಂದು ಬೆಳಗಿನ ಪ್ರದರ್ಶನ ಸಿಕ್ಕಿದೆ. ಇನ್ನು ‘ಸಿಂಗ್ ಗೀತಂ’ ಚಿತ್ರಕ್ಕೆ ಒಂದೂ ಶೋ ಸಿಕ್ಕಿಲ್ಲ. ಆದರೆ ‘ಅಬ್ಸೆಷನ್’ ಚಿತ್ರಕ್ಕೆ ದಿನಕ್ಕೆ 6 ರಿಂದ 7 ಶೋಗಳನ್ನು ನೀಡಲಾಗುತ್ತಿದೆ’ ಎಂದು ಅನುರಾಗ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಭಾರೀ ಗಳಿಕೆ ಮಾಡಿದ ಹಾಲಿವುಡ್ ಚಿತ್ರ; ಕನ್ನಡ ಸಿನಿಮಾಗಳಿಗೇ ಇಲ್ಲ ಬೇಡಿಕೆ

ಇತ್ತೀಚೆಗಷ್ಟೇ ಬಿಡುಗಡೆಯಾದ ‘ಮೈ ವಾಪಸ್ ಆವುಂಗಾ’, ‘ಭಾರತ್ ಭಾಗ್ಯ ವಿಧಾತ’, ‘ಹಾಂಟೆಡ್ 3ಡಿ’, ‘ಹೀರ್ ಸಾರಾ’, ‘ಡಿಸ್ಕ್ಲೋಸರ್ ಡೇ’ ಸೇರಿದಂತೆ ಹಲವು ಚಿತ್ರಗಳು ಚಿತ್ರಮಂದಿರದಲ್ಲಿವೆ. ಇದರೊಂದಿಗೆ ಕಳೆದ ವಾರ ಬಿಡುಗಡೆಯಾಗಿದ್ದ ಅನುರಾಗ್ ಕಶ್ಯಪ್ ನಿರ್ದೇಶನದ ‘ಬಂದರ್’ ಚಿತ್ರಕ್ಕೆ ಉತ್ತಮ ವಿಮರ್ಶೆ ಸಿಕ್ಕಿದ್ದರೂ, ಶೋಗಳ ಕೊರತೆಯ ನಡುವೆ ಇದುವರೆಗೆ ಕೇವಲ 4 ಕೋಟಿ ರೂ. ಗಳಿಸಲಷ್ಟೇ ಶಕ್ತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us