Matthew Perry: ‘ಫ್ರೆಂಡ್ಸ್’ ಖ್ಯಾತಿಯ ನಟ ಮ್ಯಾಥ್ಯು ಪೆರ್ರಿ ನಿಧನ; ಅನುಮಾನ ಮೂಡಿಸಿದ ಸಾವು
Matthew Perry Death: ಖ್ಯಾತ ನಟ ಮ್ಯಾಥ್ಯು ಪೆರ್ರಿ ಅವರಿಗೆ 54 ವರ್ಷ ವಯಸ್ಸಾಗಿತ್ತು. ಅವರ ನಿಧನದ ಸುದ್ದಿ ಕೇಳಿ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ನಟನ ಸಾವಿನ ಬಗ್ಗೆ ಕೆಲವು ಅನುಮಾನಗಳು ಮೂಡಿವೆ. ಈ ಬಗ್ಗೆ ತನಿಖೆಯ ಬಳಿಕ ಸ್ಪಷ್ಟ ಚಿತ್ರಣ ಸಿಗಬೇಕಿದೆ. ವಿಶ್ವಾದ್ಯಂತ ಇರುವ ಅವರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಅಮೆರಿಕದ ಜನಪ್ರಿಯ ಟೆಲಿವಿಷನ್ ಸೀರಿಸ್ ‘ಫ್ರೆಂಡ್ಸ್’ (Friends) ಮೂಲಕ ಭಾರಿ ಪ್ರಸಿದ್ಧಿ ಪಡೆದಿದ್ದ ನಟ ಮ್ಯಾಥ್ಯು ಪೆರ್ರಿ ಅವರು ನಿಧನರಾಗಿದ್ದಾರೆ. ಶನಿವಾರ (ಅಕ್ಟೋಬರ್ 28) ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಹಾಟ್ ಟಬ್ನಲ್ಲಿ ಅವರ ಮೃತದೇಹ ಪತ್ತೆ ಆಗಿದೆ. ಮ್ಯಾಥ್ಯು ಪೆರ್ರಿ (Matthew Perry) ಅವರಿಗೆ 54 ವರ್ಷ ವಯಸ್ಸಾಗಿತ್ತು. ಅವರ ನಿಧನದ ಸುದ್ದಿ ಕೇಳಿ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ನಟನ ಸಾವಿನ ಬಗ್ಗೆ ಕೆಲವು ಅನುಮಾನಗಳು ಮೂಡಿವೆ. ಈ ಬಗ್ಗೆ ತನಿಖೆಯ ಬಳಿಕ ಸ್ಪಷ್ಟ ಚಿತ್ರಣ ಸಿಗಬೇಕಿದೆ. ಕಿರುತೆರೆ ಮಾತ್ರವಲ್ಲದೇ ಸಿನಿಮಾಗಳಲ್ಲೂ ಅವರು ನಟಿಸಿದ್ದರು. ‘ಫೂಲ್ಸ್ ರಶ್ ಇನ್’, ‘ದಿ ಹೋಲ್ ನೈನ್ ಯಾರ್ಡ್ಸ್’ ಸೇರಿದಂತೆ ಒಂದಷ್ಟು ಹಾಲಿವುಡ್ (Hollywood) ಸಿನಿಮಾಗಳಲ್ಲಿ ಮ್ಯಾಥ್ಯು ಪೆರ್ರಿ ಅವರು ಅಭಿನಯಿಸಿ ಫೇಮಸ್ ಆಗಿದ್ದರು. ವಿಶ್ವಾದ್ಯಂತ ಅವರು ಅಭಿಮಾನಿಗಳನ್ನು ಹೊಂದಿದ್ದರು.
10 ಸೀಸನ್ಗಳಲ್ಲಿ ‘ಫ್ರೆಂಡ್ಸ್’ ಸೀರಿಸ್ ಪ್ರಸಾರ ಕಂಡಿತ್ತು. ಅದರಲ್ಲಿ ಮ್ಯಾಥ್ಯು ಪೆರ್ರಿ ಮಾಡಿದ್ದ ಚಾಂಡ್ಲರ್ ಬೇಂಗ್ ಪಾತ್ರ ಬಹಳ ಜನಪ್ರಿಯತೆ ಗಳಿಸಿತ್ತು. ಆ ಮೂಲಕ ವಿಶ್ವಾದ್ಯಂತ ಅವರು ಖ್ಯಾತಿ ಪಡೆದಿದ್ದರು. ಅಮೆರಿಕದ ಕಿರುತೆರೆ ಲೋಕದಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದರು. ಲಾಸ್ ಏಂಜಲೀಸ್ನ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ. ಹಾಟ್ ಟಬ್ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರು ಮತ್ತೆ ಏಳಲೇ ಇಲ್ಲ. ಅವರಿಗೆ ಹೃದಯಾಘಾತ ಆಗಿರಬಹುದು ಎಂದು ಹೇಳಲಾಗುತ್ತಿದೆ.
View this post on Instagram
ಸೆಲೆಬ್ರಿಟಿಗಳು ಈ ರೀತಿ ನಿಧನರಾದಾಗ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತವೆ. ನಟಿ ಶ್ರೀದೇವಿ ಕೂಡ ವಿದೇಶಕ್ಕೆ ತೆರಳಿದ್ದಾಗ ಬಾತ್ ಟಬ್ನಲ್ಲಿ ಮುಳುಗಿ ಸಾವಿಗೆ ಈಡಾಗಿದ್ದು ಚರ್ಚೆ ಹುಟ್ಟು ಹಾಕಿತ್ತು. ಈಗ ಮ್ಯಾಥ್ಯು ಪೆರ್ರಿ ಕೂಡ ಅದೇ ರೀತಿ ಇಹಲೋಕ ತ್ಯಜಿಸಿದ್ದಾರೆ. ಮೂಲಗಳ ಪ್ರಕಾರ ಯಾವುದೇ ರೀತಿಯ ಕೊಲೆ ಪ್ರಯತ್ನ ನಡೆದ ಕುರುಹು ಕಾಣಿಸಿಲ್ಲ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಅಜಿತ್ ಕುಮಾರ್ ನಟನೆಯ ಹೊಸ ಸಿನಿಮಾದ ಶೂಟಿಂಗ್ ವೇಳೆ ಕಲಾ ನಿರ್ದೇಶಕ ಹೃದಯಾಘಾತದಿಂದ ನಿಧನ
ಮ್ಯಾಥ್ಯು ಪೆರ್ರಿ ಅವರು ಪೇನ್ಕಿಲ್ಲರ್ ಮತ್ತು ಮದ್ಯಪಾನಕ್ಕೆ ದಾಸರಾಗಿದ್ದರು. ಈ ವ್ಯಸನದಿಂದಾಗಿ ಅವರು ಸಾಕಷ್ಟು ಕಷ್ಟ ಅನುಭವಿಸಬೇಕಾಯಿತು. ಅನೇಕ ಬಾರಿ ಅವರಿಗೆ ಆರೋಗ್ಯ ಕೈಕೊಟ್ಟಿತ್ತು. ಚಿಕಿತ್ಸೆಗಾಗಿ ಅವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದರು. ಶಸ್ತ್ರ ಚಿಕಿತ್ಸೆ ಸಲುವಾಗಿ ಹಲವು ತಿಂಗಳ ಕಾಲ ಅವರು ಆಸ್ಪತ್ರೆಯಲ್ಲಿ ಇದ್ದರು. ಶನಿವಾರ (ಅ.28) ಅವರು ನಿಧನರಾದ ಸ್ಥಳದಲ್ಲಿ ಯಾವುದೇ ಡ್ರಗ್ಸ್ ಪತ್ತೆ ಆಗಿಲ್ಲ ಎಂದು ಹೇಳಲಾಗುತ್ತಿದೆ. ಮ್ಯಾಥ್ಯು ಪೆರ್ರಿ ನಿಧನಕ್ಕೆ ವಿಶ್ವಾದ್ಯಂತ ಇರುವ ಅವರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.