ವೀಕೆಂಡ್ ವಿತ್ ರಮೇಶ್ (Weekend With Ramesh) ಕುರ್ಚಿಯ ಮೇಲೆ ಕೂತು ತಮ್ಮ ಸ್ಟ್ರಗಲ್ಗಳನ್ನು ನೆನಪಿಸಿಕೊಳ್ಳುವ ಸ್ಟಾರ್ ಗಳು, ಹೇಳುವ ಕಾಮನ್ ಡೈಲಾಗ್ ಗಳೆಂದರೆ, ನಮಗೆ ಯಾರೂ ಸಪೋರ್ಟ್ ಮಾಡಲಿಲ್ಲ, ತಿನ್ನಲು ಊಟಕ್ಕೂ ಗತಿ ಇರಲಿಲ್ಲ, ಬಸ್ ನಿಲ್ದಾಣಗಳಲ್ಲಿ ಮಲಗಿದ್ದೆ, ಗೆಳೆಯರಿಂದ ಸಾಲ ಪಡೆದೆ ಇತ್ಯಾದಿಗಳನ್ನು ಹೇಳಿ ಸಿಂಪತಿ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಒಬ್ಬ ಸೂಪರ್ ಸ್ಟಾರ್ ಇದ್ದಾರೆ, ಅವರು ನಟರಾಗಲು ಮಾತ್ರವಲ್ಲ ಸೂಪರ್ ಸ್ಟಾರ್ ಆಗುವ ಗುರಿಯಿಂದಲೇ ಕಾರ್ಪೆಂಟರ್ ಆಗಿದ್ದರು, ತಮ್ಮ ಯೋಜನೆಯಂತೆ ಸೂಪರ್ ಸ್ಟಾರ್ ಆದರು ಸಹ.
ಹಾಲಿವುಡ್ (Hollywood) ಸಿನಿಮಾ ನೋಡುವವರಿಗೆ, ಇಂಡಿಯಾನಾ ಜೋನ್ಸ್, ಸ್ಟಾರ್ ವಾರ್ಸ್ ಸಿನಿಮಾಗಳ ಬಗ್ಗೆ ವಿಶೇಷ ಪೀಠಿಕೆ ಹಾಕುವ ಅಗತ್ಯವಿಲ್ಲ. ಹಾಲಿವುಡ್ ಅನ್ನು ವಿಶ್ವಮಟ್ಟದಲ್ಲಿ ಜನಪ್ರಿಯಗೊಳಿಸಿದ ಸಿನಿಮಾ ಸರಣಿಗಳಲ್ಲಿ ಇವು ಪ್ರಮುಖವಾದುದು. ಈ ಎರಡು ಸಿನಿಮಾ ಸರಣಿಗಳಲ್ಲಿ ಪ್ರಮುಖ ಮಾತ್ರದಲ್ಲಿ ನಟಿಸಿರುವ ಹ್ಯಾರಿಸನ್ ಫೋರ್ಡ್, ಸ್ಟಾರ್ ನಟರಾಗುವ ಮುಂಚೆ ಕಾರ್ಪೆಂಟರ್ ವೃತ್ತಿ ಮಾಡುತ್ತಿದ್ದರು ಇವರು.
1964 ರಲ್ಲಿ ಹ್ಯಾರಿಸನ್ ಫೋರ್ಡ್ ನಟನಾಗುವ ಆಸೆಯಿಂದ ಹಾಲಿವುಡ್ ಗೆ ಬಂದರು. ಆದರೆ ಹಾಲಿವುಡ್ ನಲ್ಲಿ ಅದಾಗಲೇ ದೊಡ್ಡ ಸಂಖ್ಯೆಯ ಯುವಕರು ಸ್ಟಾರ್ ಆಗುವ ಕನಸು ಹೊತ್ತು ಓಡಾಡುತ್ತಿದ್ದರು. ಎಲ್ಲರಿಗೂ ನಟನಾಗುವ ಆಸೆ. ಎಲ್ಲರಿಗೂ ಸೂಪರ್ ಸ್ಟಾರ್ ಆಗಬೇಕಿತ್ತು. ತಮ್ಮ ವಾರಗೆಯ ಕನಸುಗಣ್ಣಿನ ಹುಡುಗರೊಟ್ಟಿಗೆ ಮಾತನಾಡಿದ ಹ್ಯಾರಿಸನ್ ಫೋರ್ಡ್, ಗಮನಿಸಿದ ವಿಷಯವೆಂದರೆ ಎಲ್ಲರಿಗೂ ಸ್ಟಾರ್ ಆಗುವ ಆಸೆ ಆದರೆ ಯಾರ ಬಳಿಯೂ ಹೆಚ್ಚು ಸಮಯವಿರಲಿಲ್ಲ. ಅವರು ಮಾತನಾಡಿಸಿದ ಹಲವರಿಗೆ ತಾಳ್ಮೆ ಇರಲಿಲ್ಲ. ಆಗಲೇ ಫೋರ್ಡ್ಗೆ ಅರ್ಥವಾಯಿತು, ತಾವು ತುಸು ತಾಳ್ಮೆಯಿಂದ ಆರಂಭದ ಹಿನ್ನಡೆಗಳನ್ನು ಸಹಿಸಿಕೊಂಡರೆ ಸ್ಟಾರ್ ಆಗುವುದು ಪಕ್ಕಾ ಎಂದು.
ಹಾಲಿವುಡ್ನಲ್ಲಿ ಬಹಳ ಸಮಯ ಉಳಿಯಲು, ಆರಂಭದಲ್ಲಿ ಎದುರಾಗುವ ಹಿನ್ನಡೆಗಳನ್ನು ಸಹಿಸಿಕೊಂಡು ರೇಸ್ನಲ್ಲಿ ಉಳಿದುಕೊಳ್ಳಬೇಕೆಂದರೆ ನಟನೆಯ ಜೊತೆಗೆ ಜೀವನೋಪಾಯಕ್ಕೆ ಬೇರೆ ವೃತ್ತಿಯಲ್ಲಿಯೂ ತೊಡಗಿಕೊಳ್ಳಬೇಕು ಎಂದು ಅರ್ಥ ಮಾಡಿಕೊಂಡ ಫೋರ್ಡ್ ಆರಿಸಿಕೊಂಡಿದ್ದು ಬಡಗಿ ವೃತ್ತಿಯನ್ನು. ಹಾಲಿವುಡ್ನಲ್ಲಿ ಎಲ್ಲ ದೊಡ್ಡ ಕೆಲಸಗಳಿಗೆ ಕೆಲಗಾರರಿದ್ದರು, ಕಂಪೆನಿಗಳಿದ್ದವು ಆದರೆ ಕಾರ್ಪೆಂಟರ್, ನಲ್ಲಿ ರಿಪೇರಿ ಮಾಡುವವರು ಇರಲಿಲ್ಲ ಹಾಗಾಗಿ ಫೋರ್ಡ್ ಬಡಗಿ ವೃತ್ತಿಯನ್ನು ಹಾಲಿವುಡ್ನಲ್ಲಿ ಪ್ರಾರಂಭಿಸಿದರು. ಕೆಲವೇ ದಿನಗಳಲ್ಲಿ ಸ್ಟಾರ್ ನಟರ ಬಡಗಿ ಎಂದು ಹೆಸರುಗಳಿಸುವಷ್ಟರ ಮಟ್ಟಿಗೆ ಪ್ರಖ್ಯಾತರಾದರು. ಇದರಿಂದ ಅವರ ಕುಟುಂಬ ನಿರ್ವಹಣೆ ಸುಲಭವಾಯಿತು. ಹಾಲಿವುಡ್ನಲ್ಲಿಯೇ ಇದ್ದು ಪರಿಚಯಗಳನ್ನು ಬೆಳೆಸಿಕೊಂಡು ಹೆಚ್ಚು ಆಡಿಷನ್ ನೀಡಲು ಸಾಧ್ಯವಾಯಿತು.
ಇದನ್ನೂ ಓದಿ:7ನೇ ಮಗುವಿಗೆ ತಂದೆಯಾದ ಖುಷಿಯಲ್ಲಿ 79ನೇ ವಯಸ್ಸಿನ ಹಾಲಿವುಡ್ ನಟ
ಹೀಗೆಯೇ ಒಮ್ಮೆ ನಿರ್ದೇಶಕ ಫ್ರ್ಯಾನ್ಸಿಸ್ ಫೋರ್ಡ್ ಕೊಪೊಲಾ ಕಚೇರಿಯಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ನಿರ್ದೇಶಕ ಜಾರ್ಜ್ ಲೂಕಸ್ ಬಂದಿದ್ದಾರೆ. ಸ್ಟಾರ್ ವಾರ್ಸ್ ಸಿನಿಮಾ ನಿರ್ದೇಶನಕ್ಕೆ ತಯಾರಿ ನಡೆಸುತ್ತಿದ್ದ ಜಾರ್ಜ್ ಲೂಕಸ್ ಬಳಿ ಅವಕಾಶಕ್ಕೆ ಕೇಳಿದ್ದಾರೆ, ಆಗ ಆಡಿಷನ್ ನೀಡುವಂತೆ ಜಾರ್ಜ ಹೇಳಿದ್ದಾರೆ. ಇತರೆ 300 ಕಲಾವಿದರೊಟ್ಟಿಗೆ ಫೋರ್ಡ್ ಸಹ ಆಡಿಷನ್ ನೀಡಿದ್ದಾರೆ. ಅದ್ಭುತವೆಂದರೆ ಫೋರ್ಡ್ಗೆ ಸ್ಟಾರ್ ವಾರ್ಸ್ನ ಪ್ರಧಾನ ಪಾತ್ರ ಹೆನ್ ಸೊಲೊ ಪಾತ್ರ ದೊರತಿದೆ. ಅದಾದ ನಂತರ ಫೋರ್ಡ್ ಹಿಂತಿರುಗಿ ನೋಡಿದ್ದೇ ಇಲ್ಲ. ಹಾಲಿವುಡ್ನ ಕೆಲವೇ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇಂಡಿಯಾನಾ ಜೋನ್ಸ್ ಸರಣಿ, ಬ್ಲೇಡ್ ರನ್ನರ್, ಎಂಪೈರ್ ಸ್ಟ್ರೈಕ್ ಬ್ಯಾಕ್, ಸಿಕ್ಸ್ ಡೇಸ್ ಸೆವೆನ್ ನೈಟ್ಸ್ ಸೇರಿದಂತೆ ಇನ್ನು ಹಲವು ಸೂಪರ್ ಡೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ