ನಟ ವಿಲ್ ಸ್ಮಿತ್ (Will Smith) ಅವರು ಹಾಲಿವುಡ್ನಲ್ಲಿ ಸಖತ್ ಜನಪ್ರಿಯತೆ ಹೊಂದಿದ್ದಾರೆ. ಸಿನಿಮಾ, ಕಿರುತೆರೆ ಮತ್ತು ಸಂಗೀತ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದಾರೆ. ಇತ್ತೀಚೆಗೆ ನಡೆದ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅವರು ‘ಕಿಂಗ್ ರಿಚರ್ಡ್’ ಚಿತ್ರಕ್ಕಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ಪಡೆದುಕೊಂಡರು. ಅದೇ ರೀತಿ ವಿವಾದ ಮಾಡಿಕೊಳ್ಳುವ ಮೂಲಕವೂ ಸುದ್ದಿಯಾದರು. ಒಟ್ಟಾರೆ ಪ್ರಕರಣದ ಬಗ್ಗೆ ಈಗ ವಿಲ್ ಸ್ಮಿತ್ ಅವರ ತಾಯಿ ಕೆರೋಲಿನ್ ಸ್ಮಿತ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮಗನ ಸ್ವಭಾವದ ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಲ್ ಸ್ಮಿತ್ ಅವರಿಗೆ ಈಗ 53 ವರ್ಷ ವಯಸ್ಸು. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಪತ್ನಿ ಜೇಡಾ ಪಿಂಕೆಟ್ ಸ್ಮಿತ್ (Jada Pinkett Smith) ಜೊತೆ ಅವರು ಭಾನುವಾರ (ಮಾ.27) ಆಸ್ಕರ್ ಸಮಾರಂಭಕ್ಕೆ ಬಂದಿದ್ದರು. ಆಗ ಪತ್ನಿ ಬಗ್ಗೆ ಹಾಸ್ಯ ನಟ ಕ್ರಿಸ್ ರಾಕ್ (Chris Rock) ಮಾಡಿದ ಜೋಕ್ ಕೇಳಿ ವಿಲ್ ಸ್ಮಿತ್ ಕೋಪಗೊಂಡರು. ಆ ಘಟನೆ ಬಗ್ಗೆ ಹಲವು ಬಗೆಯ ಚರ್ಚೆ ನಡೆಯುತ್ತಿದೆ. ವಿಲ್ ಸ್ಮಿತ್ ಮಾಡಿದ್ದು ಸರಿ ಅಂತ ಕೆಲವರು ಹೇಳಿದರೆ, ಇನ್ನೂ ಕೆಲವರು ಈ ಘಟನೆಯ ಬಗ್ಗೆ ಕಟು ಟೀಕೆ ಮಾಡಿದ್ದಾರೆ. ಈಗ ವಿಲ್ ಸ್ಮಿತ್ ತಾಯಿ ಕೂಡ ಪ್ರತಿಕ್ರಿಯಿಸಿದ್ದಾರೆ.
ವಿಲ್ ಸ್ಮಿತ್ ಕುರಿತು ಅವರ ತಾಯಿ ಕೆರೋಲಿನ್ ಸ್ಮಿತ್ ಅವರು ಹೊಂದಿರುವ ಭಾವನೆಯೇ ಬೇರೆ. ‘ಆತ ತುಂಬ ಸ್ನೇಹಜೀವಿ. ಎಲ್ಲರ ಜೊತೆ ಬೆರೆಯುತ್ತಾನೆ. ಅವನು ಈ ರೀತಿ ವರ್ತಿಸಿದ್ದನ್ನು ನಾನು ಕಂಡಿದ್ದು ಇದೇ ಮೊದಲು. ಅವನ ಜೀವನದಲ್ಲೇ ಇದು ಮೊದಲ ಬಾರಿ ಆಗಿರುವುದು. ಈ ಘಟನೆಯಿಂದ ನನಗೆ ಅಚ್ಚರಿ ಆಗಿದೆ. ಅವನು ಎಂದೂ ಕೂಡ ಈ ರೀತಿ ಮಾಡಿರಲಿಲ್ಲ’ ಎಂದು ಕೆರೋಲಿನ್ ಸ್ಮಿತ್ ಹೇಳಿದ್ದಾರೆ.
ಘಟನೆಯ ಕುರಿತು ಜೇಡಾ ಪಿಂಕೆಟ್ ಸ್ಮಿತ್ ಅವರು ಯಾವುದೇ ನೇರ ಪ್ರತಿಕ್ರಿಯೆ ನೀಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅವರು ಸೂಚ್ಯವಾಗಿ ಕೆಲವು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ‘ಇದು ಚೇತರಿಸಿಕೊಳ್ಳುವ ಕಾಲ. ಅದಕ್ಕಾಗಿಯೇ ನಾನು ಇಲ್ಲಿದ್ದೇನೆ’ ಎಂಬ ಸಾಲನ್ನು ಅವರು ಪೋಸ್ಟ್ ಮಾಡಿದ್ದಾರೆ.
ಏನಿದು ಘಟನೆ?
ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಎಂದಿನಂತೆ ಖುಷಿಖುಷಿಯಾಗಿ ನಡೆಯುತ್ತಿತ್ತು. ವೇದಿಕೆ ಮೇಲೆ ಹಾಸ್ಯ ನಟ ಕ್ರಿಸ್ ರಾಕ್ ಮಾತನಾಡುತ್ತಿದ್ದರು. ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿಯನ್ನು ವಿತರಿಸಲು ಕ್ರಿಸ್ ರಾಕ್ ಅವರನ್ನು ವೇದಿಕೆಗೆ ಕರೆಯಲಾಗಿತ್ತು. ಈ ವೇಳೆ ಅವರು ಸುಮ್ಮನಿರಲಾರದೇ ಜೇಡಾ ಪಿಂಕೆಟ್ ಸ್ಮಿತ್ ಅವರ ಬೋಳು ತಲೆಯ ಬಗ್ಗೆ ಕಾಮಿಡಿ ಮಾಡಿದರು. ಅದು ವಿಲ್ ಸ್ಮಿತ್ ಅವರಿಗೆ ಸರಿ ಎನಿಸಲಿಲ್ಲ. ಕ್ರಿಸ್ ರಾಕ್ ಅವರ ಮಾತು ಕೇಳಿ ಇಡೀ ಸಭಾಂಗಣ ಜೋರಾಗಿ ನಕ್ಕಿತು. ಕೂಡಲೇ ವೇದಿಕೆ ಏರಿದ ವಿಲ್ ಸ್ಮಿತ್ ಅವರು ಕ್ರಿಸ್ ರಾಕ್ ಮುಖಕ್ಕೆ ಬಾರಿಸಿದರು. ಇಡೀ ಸಭಾಂಗಣದಲ್ಲಿ ಮೌನ ಆವರಿಸಿತು. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.
ಇದೇ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡುವಾಗ ವಿಲ್ ಸ್ಮಿತ್ ಸಿಕ್ಕಾಪಟ್ಟೆ ಭಾವುಕರಾಗಿ ಕಣ್ಣೀರು ಸುರಿದರು. ‘ಕಿಂಗ್ ರಿಚರ್ಡ್’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರು ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದರು. ಅತಿರೇಕದಿಂದ ವರ್ತಿಸಿದ್ದಕ್ಕಾಗಿ ಅವರು ನಂತರ ಕ್ಷಮೆ ಕೇಳಿದರು.
ಇದನ್ನೂ ಓದಿ:
Oscars 2022 Winners: ವಿಲ್ ಸ್ಮಿತ್ಗೆ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿ; ‘ಕೋಡಾ’ ಅತ್ಯುತ್ತಮ ಸಿನಿಮಾ
ಕೆನ್ನೆಗೆ ಹೊಡೆದು ವಿಲ್ ಸ್ಮಿತ್ ರಂಪಾಟ ಮಾಡಿದ ಪ್ರಕರಣ; ಆಸ್ಕರ್ ಪ್ರಶಸ್ತಿ ಹಿಂಪಡೆಯಲಿದೆ ಅಕಾಡೆಮಿ?
Published On - 9:26 am, Wed, 30 March 22