
ತಮಿಳು ಚಿತ್ರರಂಗದ ನಿರ್ಮಾಪಕ ಹಾಗೂ ಫೈನಾನ್ಶಿಯರ್ ಅನ್ಬು ಚೆಳಿಯನ್ ಅವರ ಮನೆ ಮತ್ತು ಕಚೇರಿ ಮೇಲೆ ಐಟಿ ದಾಳಿ (IT Raid) ಮಾಡಲಾಗಿದೆ. ಮಂಗಳವಾರ (ಆಗಸ್ಟ್ 2) ಮುಂಜಾನೆ ಈ ದಾಳಿ ನಡೆದಿದ್ದು, ಚೆನ್ನೈ ಮತ್ತು ಮಧುರೈ ಸೇರಿ 50 ಕಡೆಗಳಲ್ಲಿ ಅಧಿಕಾರಿಗಳು ಕಾರ್ಯಚರಣೆ ನಡೆಸುತ್ತಿದ್ದಾರೆ. ಹಲವು ಸಿನಿಮಾಗಳಿಗೆ ಫೈನಾನ್ಸ್ ಮಾಡಿದ ಅನ್ಬು ಚೆಳಿಯನ್ (Anbu Chezhiyan) ಅವರ ಮೇಲೆ ತೆರಿಗೆ ವಂಚನೆ ಆರೋಪ ಇದೆ. ಅಲ್ಲದೇ ಕಾಲಿವುಡ್ನ ಅನೇಕ ಸೆಲೆಬ್ರಿಟಿಗಳ ಮೇಲೆ ಆದಾಯ ತೆರಿಗೆ ಇಲಾಖೆ (Income Tax Department) ಕಣ್ಣಿಟ್ಟಿದೆ. ಅನ್ಬು ಚೆಳಿಯನ್ ಅವರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಅವರ ಜೊತೆ ವ್ಯವಹಾರ ಹೊಂದಿರುವ ಇತರೆ ಸೆಲೆಬ್ರಿಟಿಗಳಿಗೆ ಈಗ ಢವಢವ ಶುರುವಾಗಿದೆ.
ಅನ್ಬು ಚೆಳಿಯನ್ ಮಾತ್ರವಲ್ಲದೇ ಇನ್ನೂ ಅನೇಕ ನಿರ್ಮಾಪಕರು ಹಾಗೂ ವಿತರಕರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆದಿದೆ. ಎಸ್. ಆರ್. ಪ್ರಭು, ಜ್ಞಾನವೇಲ್ ರಾಜಾ ಮುಂತಾದವರು ಹೆಸರು ಈ ಪಟ್ಟಿಯಲ್ಲಿದೆ. ಮುಂಜಾನೆ 6 ಗಂಟೆಗೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ. ಕಾರ್ಯಚರಣೆ ವೇಳೆ ತಮಿಳು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳ ಹೆಸರುಗಳು ಹೊರಬರುವ ಸಾಧ್ಯತೆ ದಟ್ಟವಾಗಿದೆ.
ಅನ್ಬು ಚೆಳಿಯನ್ ಫೈನಾನ್ಶಿಯರ್ ಆಗಿರುವುದು ಮಾತ್ರವಲ್ಲದೇ ಅನೇಕ ಸಿನಿಮಾಗಳನ್ನು ವಿತರಣೆ ಮಾಡಿಯೂ ಲಾಭ ಕಂಡಿದ್ದಾರೆ. ‘ಗೋಪುರಂ ಫಿಲ್ಮ್ಸ್’ ಬ್ಯಾನರ್ ಮೂಲಕ ಕೆಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ಮೇಲೆ ಐಟಿ ದಾಳಿ ನಡೆದಿರುವುದು ಇದೇ ಮೊದಲೇನಲ್ಲ. 2020ರ ಫೆಬ್ರವರಿಯಲ್ಲಿ ಅವರ ಮನೆ ಮೇಲೆ ದಾಳಿ ಮಾಡಲಾಗಿತ್ತು. ಆಗ 65 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿತ್ತು.
‘ದಳಪತಿ’ ವಿಜಯ್ ನಟನೆಯ ‘ಬಿಗಿಲ್’ ಸಿನಿಮಾಗೆ ಅನ್ಬು ಚೆಳಿಯನ್ ಫೈನಾನ್ಸ್ ಮಾಡಿದ್ದರು. ಆ ಚಿತ್ರದ ಹಣಕಾಸಿನ ವಹಿವಾಟಿನ ಮೇಲೆ ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದರು. ನಟ ವಿಜಯ್, ನಿರ್ಮಾಪಕರಾದ ಅಘೋರಂ, ಗಣೇಶ್, ಸುರೇಶ್, ವಿತರಕ ಸುಂದರ್ ಆರುಮುಗಂ ಮುಂತಾದವರ ಮೇಲೆ ಐಟಿ ದಾಳಿ ನಡೆದಿತ್ತು.
Published On - 11:32 am, Tue, 2 August 22