ಕೆಟ್ಟ ಕಮೆಂಟ್ ಮಾಡೋರಿಗೆ ರ‍್ಯಾಪ್ ಮೂಲಕ ಎಚ್ಚರಿಕೆ ಕೊಟ್ಟ ಇಶಾನಿ
Ishani: ಬಿಗ್ಬಾಸ್ ಮೂಲಕ ಗಮನ ಸೆಳೆದಿರುವ ಇಶಾನಿ ರ‍್ಯಾಪರ್ ಸಹ ಹೌದು. ಇದೀಗ ಇಶಾನಿ ತಮ್ಮ ಹೊಸ ಆಲ್ಬಂ ಬಿಡುಗಡೆ ಮಾಡಿದ್ದಾರೆ. ಮಹಿಳೆಯರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವವರಿಗಾಗಿ ಈ ಆಲ್ಬಂ ಮಾಡಿದ್ದಾರೆ.
ಕನ್ನಡದಲ್ಲಿ ಕೆಲ ರ್ಯಾಪರ್ಗಳಿದ್ದಾರೆ. ಸಿಂಗಲ್ ಆಲ್ಬಂಗಳ ಜೊತೆಗೆ ಸಿನಿಮಾಗಳಿಗೂ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಹಾಡು ಸಹ ಹಾಡಿದ್ದಾರೆ. ಆದರೆ ಕನ್ನಡದಲ್ಲಿ ಮಹಿಳಾ ರ್ಯಾಪರ್ಗಳು ಇಲ್ಲವೇ ಇಲ್ಲ ಎನ್ನುವಂತಾಗಿತ್ತು. ಇದೀಗ ಇಶಾನಿ ಆ ನಿರ್ವಾತ ತುಂಬಿದ್ದಾರೆ. ಇಶಾನಿ ಕನ್ನಡದಲ್ಲಿ ರ‍್ಯಾಪ ಹಾಡುಗಳನ್ನು ಮಾಡುತ್ತಿದ್ದಾರೆ. ಬಿಗ್ಬಾಸ್ನಲ್ಲಿ ಭಾಗವಹಿಸಿ ಜನಪ್ರಿಯರಾದ ಇಶಾನಿ ಇದೀಗ ತಮ್ಮ ಹೊಸ ಆಲ್ಬಂ ಬಿಡುಗಡೆ ಮಾಡಿದ್ದಾರೆ. ಮಹಿಳೆಯರಿಗೆ ಕೆಟ್ಟದಾಗಿ ಮೆಸೇಜ್ ಮಾಡುವವರಿಗೆ ಮಾಡಿದ ರ‍್ಯಾಪ ಇದು.
ಯುವತಿಯರು ಮಾಡ್ರನ್ ಡ್ರೆಸ್ ಹಾಕೋದು, ಬೋಲ್ಡ್ ಆಗಿರುವುದು ತಪ್ಪೇ, ನನ್ನ ಇಷ್ಟದಂತೆ ನಾನಿರೋದನ್ನು ಯಾಕೆ ಸಹಿಸಲ್ಲ ಎಂದು ಇಶಾನಿ ಪ್ರಶ್ನೆ ಮಾಡಿದ್ದಾರೆ. ಮಹಿಳೆಯರನ್ನು ತುಳಿಯುವ ಪ್ರಯತ್ನ ಮಾಡುವ ಪುರುಷರನ್ನು ರ‍್ಯಾಪ್ ಮೂಲಕ ಪ್ರಶ್ನೆ ಮಾಡಿದ್ದಾರೆ, ಬುದ್ಧಿ ಹೇಳಿದ್ದಾರೆ, ಎಚ್ಚರಿಕೆ ಕೊಟ್ಟಿದ್ದಾರೆ ಇಶಾನಿ. ‘ಅಸಲಿ ಬಣ್ಣ’ ಎಂದು ತಮ್ಮ ರ‍್ಯಾಪ್ ಆಲ್ಬಂಗೆ ಹೆಸರಿಟ್ಟಿದ್ದಾರೆ ಇಶಾನಿ.
ಇಶಾನಿಯ ಹುಟ್ಟುಹಬ್ಬ ಇತ್ತೀಚೆಗಷ್ಟೆ ನಡೆದಿದ್ದು ಅದೇ ದಿನ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ‘ಅಸಲಿ ಬಣ್ಣ’ ಹಿಪ್ ಹಾಪ್ ಹಾಡು ಬಿಡುಗಡೆ ಆಗಿದೆ. ರ‍್ಯಾಪ್ ಹಾಡಿನ ವಿಡಿಯೋ ಸಹ ಬಿಡುಗಡೆ ಆಗಿದ್ದು, ಸ್ವತಃ ಇಶಾನಿ ವಿಡಿಯೋನಲ್ಲಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. ವೆಂಕಟ್ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಗಿರಿಗೌಡ ನಿರ್ದೇಶನ ಮಾಡಿದ್ದಾರೆ. ಮಾರ್ಟಿನ್ ಅವರ ಸಾಹಿತ್ಯ, ಕೀರ್ತನ್ ಪೂಜಾರಿ ಅವರ ಕ್ಯಾಮೆರಾ ವರ್ಕ್, ಡಿಜೆ ಲೆಥಲ್ ಅವರ ಸಂಗೀತ ಸಂಯೋಜನೆ ಈ ಹಾಡಿಗಿದೆ.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಫೇಕ್ ಯಾರು? ಈ ಬಾರಿಯ ಫೈನಲಿಸ್ಟ್ ಯಾರು: ಇಶಾನಿ ಉತ್ತರ
ಹಾಡಿನ ಬಗ್ಗೆ ಮಾತನಾಡಿರುವ ಇಶಾನಿ ‘ಇದರ ಮೂಲಕ ಮಹಿಳೆಯರಿಗೆ ಬ್ಯಾಡ್ ಕಾಮೆಂಟ್ ಮಾಡುವವರಿಗೆ ಟಾಂಗ್ ಕೊಟ್ಟಿದ್ದೇನೆ. ಅಂಥವರಿಗೆ ನಮ್ಮ ಫಿಲಿಂಗ್ಸ್ ಅರ್ಥ ಆಗಬೇಕು. ನನ್ನ ಬಗ್ಗೆ ಯಾರೆಲ್ಲ ಪದಗಳನ್ನು ಬಳಸಿದ್ದರೋ ಅದೇ ಪದಗಳನ್ನು ಅವರಿಗೆ ವಾಪಸ್ ಕೊಟ್ಟಿದ್ದೇನೆ. ಬಿಗ್ ಬಾಸ್ ನಡೀತಿರುವಾಗಲೇ ಈ ಹಾಡನ್ನು ಬರೆದಿದ್ದೆ. ನನಗನಿಸಿದ್ದನ್ನು ಹೇಳಿಕೊಳ್ಳಲು ಇದು ಪರ್ಫೆಕ್ಟ್ ವೇ ಅನಿಸಿತು. ಮಾರ್ಟಿನ್ ಇದಕ್ಕೆ ಪೈನಲ್ ಟಚ್ ಕೊಟ್ಟಿದ್ದಾರೆ. ಈ ಹಾಡಿನ ಉದ್ದೇಶ ಶೋಷಣೆಗೆ ಒಳಗಾದ ಹೆಣ್ಣು ಮಕ್ಕಳನ್ನು ಸ್ಟ್ರಾಂಗ್ ಮಾಡುವುದು’ ಎಂದಿದ್ದಾರೆ.
ನಿರ್ದೇಶಕ ಗಿರಿ ಗೌಡ ಮಾತನಾಡಿ ‘ಇಶಾನಿ ಒಳ್ಳೆಯ ರ‍್ಯಾಪರ್, ಇನ್ನೂ ಒಂದಿಷ್ಟು ಗೀತೆಗಳನ್ನು ಅವರ ಜೊತೆ ಮಾಡುತ್ತೇನೆ. ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಒಂದೇ ದಿನದಲ್ಲಿ ಇದನ್ನು ಚಿತ್ರೀಕರಿಸಿದ್ದೇವೆ’ ಎಂದರು. ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸ್ನೇಹಿತೆಯರಾದ ತನಿಷಾ, ಸಿರಿ ಹಾಗೂ ಐಶ್ವರ್ಯ ಶುಭ ಹಾರೈಸಿದರು. ನಮಗೂ ಇಂತಹ ಸಾಕಷ್ಟು ಕೆಟ್ಟ ಅನುಭವ ಆಗಿದೆ ಎಂದು ತನಿಷಾ ಕೂಡ ಹೇಳಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ