ತೆರಿಗೆ ವಂಚನೆ ಆರೋಪ: ತಮಿಳು ನಟನ ಮೇಲೆ ಇಲಾಖೆ ದಾಳಿ
Actor Arya: ತಮಿಳಿನ ಸ್ಟಾರ್ ನಟ ಆರ್ಯ ಅವರು ನಟರಾಗಿರುವ ಜೊತೆಗೆ ನಿರ್ಮಾಪಕ ಹಾಗೂ ಉದ್ಯಮಿಯೂ ಆಗಿದ್ದಾರೆ. ಆರ್ಯ ಅವರು ಸೀ ಶೆಲ್ ಹೆಸರಿನ ರೊಸ್ಟೆರೆಂಟ್ ಚೈನ್ ಅನ್ನು ಹೊಂದಿದ್ದಾರೆ. ಆರ್ಯ ಅವರು ತೆರಿಗೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಇಂದು ಬೆಳ್ಳಂಬೆಳಿಗ್ಗೆ ತೆರಿಗೆ ಅಧಿಕಾರಿಗಳು ಆರ್ಯ ಹೋಟೆಲ್ ಮೇಲೆ ದಾಳಿ ಮಾಡಿದ್ದಾರೆ.

‘ರಾಜಾ ರಾಣಿ’, ‘ಅವನ್-ಇವನ್’, ‘ಸರ್ಪಟ್ಟ ಪರಂಬರೈ’, ‘ನಾನ್ ಕಡವುಲ್’, ‘ಕಾದಲ್ ಸೊಲ್ಲ ವಂದೆನ್’ ಇನ್ನೂ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಸ್ಟಾರ್ ನಟ ಆರ್ಯ ವಿರುದ್ಧ ತೆರಿಗೆ ಕದ್ದ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ಇಂದು (ಜೂನ್ 18) ರಂದು ಆರ್ಯ ಅವರ ಮಾಲೀಕತ್ವದ ಹೋಟೆಲ್ ಚೈನ್ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಟ ಮತ್ತು ನಿರ್ಮಾಪಕರೂ ಆಗಿರುವ ಆರ್ಯ ‘ಸೀ ಶೆಲ್’ ಹೆಸರಿನ ಹೋಟೆಲ್ ರೆಸ್ಟೊರೆಂಟ್ ಚೈನ್ ಅನ್ನು ಸಹ ಹೊಂದಿದ್ದಾರೆ. ಈ ಹೋಟೆಲ್ ಚೈನ್ನಿಂದ ದೊಡ್ಡ ಮೊತ್ತದ ಆದಾಯವನ್ನು ಆರ್ಯ ಪಡೆಯುತ್ತಿದ್ದು, ಆದರೆ ಆದಾಯವನ್ನು ಸರ್ಕಾರದಿಂದ ಮುಚ್ಚಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆರ್ಯ ಅವರಿಗೆ ಸೇರಿದ ಸೀ ಶೆಲ್ ರೆಸ್ಟೋರೆಂಟ್ನ ಹಲವಾರು ಬ್ರ್ಯಾಂಚ್ಗಳ ಮೇಲೆ ಏಕಕಾಲಕ್ಕೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಣ್ಣಾ ನಗರ್, ವೆಲ್ಲಾಚೆರಿ, ಕುಟ್ಟಿವಾಕಂ, ಕಿಲ್ಪಾಕ್ ಇನ್ನೂ ಕೆಲವೆಡೆ ಆರ್ಯ ಅವರಿಗೆ ಸೇರಿದ ಹೋಟೆಲ್ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ತೆರಿಗೆ ಅಧಿಕಾರಿಗಳು. ಇದು ಮಾತ್ರವೇ ಕೊಚ್ಚಿಯಲ್ಲಿ ಸಹ ಆರ್ಯ ಅವರಿಗೆ ಸೇರಿದ ಕೆಲ ಸ್ಥಳಗಳು, ಉದ್ಯಮಗಳು, ಹೋಟೆಲ್ಗಳ ಮೇಲೆ ದಾಳಿ ನಡೆಸಿದ್ದು, ಸತತ ಪರಿಶೀಲನೆ ನಡೆಸುತ್ತಿದ್ದಾರೆ. ಹೋಟೆಲ್ಗಳು ಇಂದು ಬೆಳಿಗ್ಗೆ ಆರಂಭ ಆಗುವುದಕ್ಕೆ ಮುಂಚೆಯೇ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಲೆಕ್ಕಪತ್ರಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಕೆಎಸ್ಸಿಎಗೆ ಮತ್ತೊಂದು ಸಂಕಷ್ಟ: 10 ಕೋಟಿ ರೂ ಜಾಹೀರಾತು ತೆರಿಗೆ ಬಾಕಿ, ವಸೂಲಿಗೆ ಮುಂದಾದ ಬಿಬಿಎಂಪಿ
ತಮಿಳಿನ ಹಲವು ನಟರು ನಟನೆಯ ಜೊತೆಗೆ ಬೇರೆ ಬೇರೆ ಉದ್ಯಮಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದರಂತೆ ಆರ್ಯ ಸಹ ಹೋಟೆಲ್ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮವನ್ನೂ ಸಹ ಅವರು ಹೊಂದಿದ್ದಾರೆ.
ಆರ್ಯ, ಜನಪ್ರಿಯ ತಮಿಳು ನಟನಾಗಿರುವ ಜೊತೆಗೆ ನಿರ್ಮಾಪಕ ಹಾಗೂ ಉದ್ಯಮಿಯೂ ಹೌದು. ತಮಿಳು ಹಾಗೂ ಮಲಯಾಳಂನ 11 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಎರಡು ವೆಬ್ ಸರಣಿ ಹಾಗೂ ಟಿವಿ ಶೋ ಅನ್ನೂ ನಿರ್ಮಾಣ ಮಾಡಿದ್ದಾರೆ. ಇದರ ಜೊತೆಗೆ ಹಲವು ಸಿನಿಮಾಗಳಲ್ಲಿ ನಟನೆ ಸಹ ಮಾಡುತ್ತಿದ್ದಾರೆ. ಆರ್ಯ, ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ. ಕನ್ನಡದ ‘ರಾಜರಥ’ ಸಿನಿಮಾನಲ್ಲಿ ನಟಿಸಿದ್ದಾರೆ. ಆರ್ಯ ಪ್ರಸ್ತುತ ‘ಮಿಸ್ಟರ್ ಎಕ್ಸ್’ ಮತ್ತು ‘ಅನಂತನ್ ಕಾಡು’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




