4.5 ಕೋಟಿ ರೂ.ಗೆ ಬಾಲಯ್ಯ ಚಿತ್ರದ ಹಕ್ಕು ಪಡೆದ ‘ಜನ ನಾಯಗನ್’; ಗುಟ್ಟು ರಟ್ಟಾಯ್ತು
ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರ ಬಾಲಯ್ಯ ಅವರ ‘ಭಗವಂತ್ ಕೇಸರಿ’ಯ ರಿಮೇಕ್ ಎಂಬ ಸುದ್ದಿ ದೃಢಪಟ್ಟಿದೆ. 4.5 ಕೋಟಿ ರೂಪಾಯಿಗೆ ರಿಮೇಕ್ ಹಕ್ಕು ಖರೀದಿಸಲಾಗಿದೆ. ಆದರೆ, ಇದು ಯಥಾವತ್ ನಕಲು ಅಲ್ಲ, ಕೆಲವು ದೃಶ್ಯಗಳನ್ನು ಮಾತ್ರ ಸ್ಫೂರ್ತಿಯಾಗಿ ಬಳಸಲಾಗುವುದು ಎಂದು ಹೇಳಲಾಗುತ್ತಿದೆ.

‘ಜನ ನಾಯಗನ್’ (Jana Nayagan Movie) ಚಿತ್ರದ ಬಗ್ಗೆ ಹುಟ್ಟಿಕೊಂಡ ವದಂತಿಗಳು ಒಂದೆರಡಲ್ಲ. ಈ ಚಿತ್ರ ಬಾಲಯ್ಯ ನಟನೆಯ ‘ಭಗವಂತ್ ಕೇಸರಿ’ ಚಿತ್ರದ ರಿಮೇಕ್ ಎನ್ನುವ ಸುದ್ದಿ ಹರಿದಾಡಿತ್ತು. ಈಗ ಈ ವಿಚಾರ ಅಧಿಕೃತ ಆಗಿದೆ. ಏಕೆಂದರೆ, ‘ಭಗವಾನ್ ಕೇಸರಿ’ ಚಿತ್ರದ ರಿಮೇಕ್ ಹಕ್ಕನ್ನು ‘ಜನ ನಾಯಗನ್’ ತಂಡದವರು ಬರೋಬ್ಬರಿ 4.5 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದೆ. ಈ ವಿಚಾರ ಕೇಳಿ ವಿಜಯ್ ಫ್ಯಾನ್ಸ್ಗೆ ಬೇಸರ ಆಗಿದೆ. ಇದು ವಿಜಯ್ ಕೊನೆಯ ಚಿತ್ರ. ಹೀಗಾಗಿ, ಒರಿಜಿನಲ್ ಕಥೆ ಇಟ್ಟುಕೊಂಡೇ ಸಿನಿಮಾ ಮಾಡಬಹುದಿತ್ತಲ್ಲ ಎನ್ನುತ್ತಿದ್ದಾರೆ ಕೆಲವರು.
2023ರಲ್ಲಿ ‘ಭಗವಂತ್ ಕೇಸರಿ’ ಸಿನಿಮಾ ರಿಲೀಸ್ ಆಯಿತು. ಈ ಸಿನಿಮಾಗೆ ಬಾಲಯ್ಯ ಹೀರೋ. ಈ ಚಿತ್ರದಲ್ಲಿ ಸಖತ್ ಆ್ಯಕ್ಷನ್ ದೃಶ್ಯಗಳು ಇದ್ದವು. ಅನಿಲ್ ರವಿಪುಡಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ 130 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಈ ಚಿತ್ರದ ರಿಮೇಕ್ ‘ಜನ ನಾಯಗನ್’ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ರಿಮೇಕ್ ಹಕ್ಕು ಪಡೆದ ವಿಚಾರ ಹೊರ ಬಿದ್ದಿದೆ.
ಹಾಗಾದರೆ, ‘ಭಗವಂತ್ ಕೇಸರಿ’ಯ ಯಥಾವತ್ತು ನಕಲಾಗಿ ‘ಜನ ನಾಯಗನ್’ ಸಿನಿಮಾ ಮೂಡಿ ಬರಲಿದೆಯೇ? ಖಂಡಿತವಾಗಿಯೂ ಇಲ್ಲ. ಗುಡ್ ಟಚ್ ಬ್ಯಾಡ್ ಟಚ್ನ ಒಂದು ದೃಶ್ಯ ಬರುತ್ತದೆ. ಈ ದೃಶ್ಯವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಸಿನಿಮಾ ರಿಲೀಸ್ ಆದ ಬಳಿಕ ಈ ಬಗ್ಗೆ ಯಾವುದೇ ಟೀಕೆ ಬರಬಾರದು ಎನ್ನುವ ಕಾರಣಕ್ಕೆ ವಿಜಯ್ ಅವರೇ ‘ಭಗವಂತ್ ಕೇಸರಿ’ ಚಿತ್ರದ ರಿಮೇಕ್ ಹಕ್ಕನ್ನು ಪಡೆಯುವಂತೆ ಹೇಳಿದ್ದಾರೆ ಎನ್ನಲಾಗಿದೆ.
2026ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರಲ್ಲಿ ವಿಜಯ್ ಅವರ ಪಕ್ಷವೂ ಸ್ಪರ್ಧಿಸಲಿದೆ. ಒಂದೊಮ್ಮೆ ‘ಜನ ನಾಯಗನ್’ ಸಿನಿಮಾ ವಿರುದ್ಧ ಕೃತಿ ಚೌರ್ಯದ ಆರೋಪ ಕೇಳಿ ಬಂದರೆ ಅವರ ವೃತ್ತಿ ಜೀವನಕ್ಕೆ ತೊಂದರೆ ಆದರೂ ಆಗಬಹುದು. ಈ ಕಾರಣಕ್ಕೆ ವಿಜಯ್ ಅವರು ಹಣ ಖರ್ಚಾರದೂ ತೊಂದರೆ ಇಲ್ಲ ಎಂದು ಈ ನಿರ್ಧಾರಕ್ಕೆ ಬಂದಿದ್ದಾರೆ.
ಇದನ್ನೂ ಓದಿ: ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ ನಿರಾಕರಿಸಿದ್ದೇಕೆ ಸಾಯಿ ಪಲ್ಲವಿ
‘ಜನ ನಾಯಗನ್’ ಸಿನಿಮಾ 2026ರ ಜನವರಿ 9ರಂದು ರಿಲೀಸ್ ಆಗಲಿದೆ. ಇದನ್ನು ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಪಕ್ಕಾ ರಾಜಕೀಯದ ಕಥೆಯನ್ನು ಹೊಂದಿರಲಿದೆಯಂತೆ. ‘ಭಗವಂತ್ ಕೇಸರಿ’ ಯಾವುದೇ ರಾಜಕೀಯ ಕಥೆ ಹೊಂದಿರಲಿಲ್ಲ. ಹೀಗಾಗಿ, ಈ ಸಿನಿಮಾ ಯಥವಾತ್ತು ನಕಲು ಎಂದು ಹೇಳಲು ಸಾಧ್ಯವಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:58 pm, Tue, 20 May 25








