
ಟಾಲಿವುಡ್ ನಟ ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ (Janhvi Kapoor) ನಟನೆಯ ಬಹುನಿರೀಕ್ಷಿತ ‘ಪೆದ್ದಿ’ (Peddi) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೌಂಡ್ ಮಾಡುತ್ತಿದ್ದರೂ, ಚಿತ್ರದಲ್ಲಿ ಮಹಿಳೆಯರನ್ನು ಬಿಂಬಿಸಿರುವ ರೀತಿಯ ಬಗ್ಗೆ ತೀವ್ರ ವಿವಾದ ವ್ಯಕ್ತವಾಗಿದೆ. ಈ ವಿವಾದದ ಬೆನ್ನಲ್ಲೇ ನಿರ್ದೇಶಕ ಬುಚ್ಚಿ ಬಾಬು ಸನಾ (Buchi Babu Sana) ಇತ್ತೀಚೆಗಷ್ಟೇ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಆದರೆ, ಇದೀಗ ಜಾನ್ವಿ ಕಪೂರ್ ಅವರು ತಮ್ಮ ಫ್ಯಾನ್ ಕ್ಲಬ್‌ಗಳೊಂದಿಗೆ ನಡೆಸಿರುವ ಆಘಾತಕಾರಿ ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳು ಇಂಟರ್ನೆಟ್‌ನಲ್ಲಿ ಲೀಕ್ ಆಗಿದ್ದು, ಸಂಚಲನ ಮೂಡಿಸಿವೆ.
ಚಿತ್ರದಲ್ಲಿ ತಮ್ಮ ಪಾತ್ರವನ್ನು ಆಕ್ಷೇಪಾರ್ಹವಾಗಿ ತೋರಿಸಲಾಗುತ್ತಿದೆ ಎಂದು ಶೂಟಿಂಗ್ ಹಂತದಲ್ಲೇ ಜಾನ್ವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬುದನ್ನು ಈ ಲೀಕ್ ಆದ ಮೆಸೇಜ್‌ಗಳು ಸಾಬೀತುಪಡಿಸುತ್ತಿವೆ. ಅಕ್ಟೋಬರ್ 30ರಂದು ನಡೆದಿರುವ ಚಾಟ್‌ನಲ್ಲಿ ಜಾನ್ವಿ ಕಪೂರ್, ಚಿತ್ರೀಕರಣದ ವೇಳೆ ತಮಗೆ ಮುಜುಗರ ತರುವಂತಹ ಆ್ಯಂಗಲ್‌ಗಳನ್ನು ಬಳಸದಂತೆ ನಿರ್ದೇಶಕರಿಗೆ ಖಡಕ್ ಆಗಿ ಹೇಳಿದ್ದಾಗಿ ಬರೆದುಕೊಂಡಿದ್ದಾರೆ.
‘ನಾನು ನಿರ್ದೇಶಕರಿಗೆ ನನ್ನ ಎದೆ ಮತ್ತು ಸೊಂಟದ ಭಾಗದ ಕ್ಲೋಸಪ್ ಶಾಟ್‌ಗಳನ್ನು ತೆಗೆದುಕೊಳ್ಳಬೇಡಿ ಎಂದು ಸ್ಪಷ್ಟವಾಗಿ ಹೇಳಿದ್ದೆ’ ಎಂದು ಜಾನ್ವಿ ಕಪೂರ್ ಉಲ್ಲೇಖಿಸಿದ್ದಾರೆ. ಇದೇ ಚಾಟ್‌ನಲ್ಲಿ ಜಾನ್ವಿ ಕಪೂರ್ ಅವರು ನಟ ರಾಮ್ ಚರಣ್ ಅವರ ನಡೆಗೆ ಧನ್ಯವಾದ ತಿಳಿಸಿದ್ದಾರೆ. ‘ರಾಮ್ ಸರ್ ತುಂಬಾ ಒಳ್ಳೆಯವರು. ಅವರು ನನ್ನ ಪರವಾಗಿ ನಿಂತು ನಿರ್ದೇಶಕ ಬುಚ್ಚಿ ಬಾಬು ಸನಾ ಅವರಿಗೆ ಬೈದಿದ್ದರು. ಇನ್ನೊಮ್ಮೆ ಆಕೆಯ ಇಂತಹ ಆ್ಯಂಗಲ್‌ಗಳನ್ನು ಶೂಟ್ ಮಾಡಬೇಡಿ ಅಂತ ಗದರಿಸಿದ್ದರು. ಇದರಿಂದಾಗಿ ನಿರ್ದೇಶಕರು ಬೇಸರ ಮಾಡಿಕೊಂಡಿದ್ದರು’ ಎಂದು ಜಾನ್ವಿ ಮೆಸೇಜ್‌ನಲ್ಲಿ ತಿಳಿಸಿದ್ದಾರೆ.
‘ಗೇಮ್ ಚೇಂಜರ್’ ಚಿತ್ರದಲ್ಲಿ ನಟಿ ಕಿಯಾರಾ ಅಡ್ವಾಣಿ ಎದುರಿಸಿದ ಇಂತಹದೇ ಪರಿಸ್ಥಿತಿಯನ್ನು ಅಭಿಮಾನಿಯೊಬ್ಬರು ನೆನಪಿಸಿದಾಗ, ಜಾನ್ವಿ ಬೇಸರದಿಂದಲೇ ಪ್ರತಿಕ್ರಿಯಿಸಿದ್ದಾರೆ. ‘ಇಲ್ಲ, ಪೆದ್ದಿ ಸಿನಿಮಾದಲ್ಲಿ ಅವರು ಶೂಟ್ ಮಾಡುತ್ತಿದ್ದ ಆ್ಯಂಗಲ್‌ಗಳು ಅದಕ್ಕಿಂತಲೂ ಕೆಟ್ಟದಾಗಿದ್ದವು. ಆದರೆ ರಾಮ್ ಸರ್ ತಡೆದರು. ಸೌತ್ ಇಂಡಸ್ಟ್ರಿಯಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಲೇ ಇರುತ್ತವೆ’ ಎಂದು ಜಾನ್ವಿ ಅವರು ದಕ್ಷಿಣದ ಚಿತ್ರರಂಗದ ಬಗ್ಗೆ ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ: ‘ನಟಿಯನ್ನು ಕೀಳಾಗಿ ತೋರಿಸೋ ಉದ್ದೇಶವಿರಲಿಲ್ಲ’; ಜಾನ್ವಿ ಹೊಕ್ಕುಳ ಪ್ರದರ್ಶನದ ಬಗ್ಗೆ ನಿರ್ದೇಶಕರ ಸ್ಪಷ್ಟನೆ
ಕೆಲವು ನಟಿಯರ ಪೋಷಕರು ಶೂಟಿಂಗ್ ಸೆಟ್‌ಗೆ ಬರುವ ಬಗ್ಗೆ ಫ್ಯಾನ್ಸ್ ಪ್ರಸ್ತಾಪಿಸಿದ್ದಾರೆ. ಆದಕ್ಕೆ ಜಾನ್ವಿ ಈ ರೀತಿ ಉತ್ತರಿಸಿದ್ದಾರೆ. ‘ಒಂದು ವೇಳೆ ನನ್ನ ತಂದೆ ಬೋನಿ ಕಪೂರ್ ಸೆಟ್‌ಗೆ ಬಂದರೆ ಪರಿಸ್ಥಿತಿ ಉಗ್ರ ರೂಪ ಪಡೆದುಕೊಳ್ಳುತ್ತದೆ’ ಎಂದಿದ್ದಾರೆ. ಈ ರೀತಿಯ ಘಟನೆಯಿಂದ ಜಾನ್ವಿ ಕಪೂರ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂಬುದು ಚಾಟ್ಸ್‌ನಿಂದ ತಿಳಿಯುತ್ತದೆ. ‘ನಾನು ಇವರೊಂದಿಗೆ ವಾದ ಮಾಡಿ ಸಾಕಾಗಿಹೋಗಿದೆ. ಇನ್ನು ಸಾಕು, ಇನ್ಮುಂದೆ ಸಿನಿಮಾವೇ ಬೇಡ’ ಎಂದು ಜಾನ್ವಿ ಭಾವುಕರಾಗಿ ಮೆಸೇಜ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.