ಕೊವಿಡ್ ನಿಯಮ ಉಲ್ಲಂಘಿಸಿ ಶೂಟಿಂಗ್ ಮಾಡುತ್ತಿದ್ದ ಖ್ಯಾತ ನಟ, ನಿರ್ದೇಶಕನ ಬಂಧನ
Coronavirus: ಕೊವಿಡ್ ಕರ್ಫ್ಯೂ ಜಾರಿಯಾಗಿ ಎರಡು ಗಂಟೆ ಕಳೆದ ಬಳಿಕವೂ ಚಿತ್ರತಂಡದವರು ಶೂಟಿಂಗ್ ನಡೆಸುತ್ತಿದ್ದರು. ಆಗ ಸಮಯ ರಾತ್ರಿ 8 ಗಂಟೆ ಆಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಂಡಿದ್ದಾರೆ.
ಕೊರೊನಾ ವೈರಸ್ನಿಂದಾಗಿ ಇಡೀ ದೇಶವೇ ತತ್ತರಿಸುತ್ತಿದೆ. ಈ ಮಹಾಮಾರಿ ಹರಡುವುದನ್ನು ತಪ್ಪಿಸಲು ಹಲವು ರಾಜ್ಯಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಪರಿಸ್ಥಿತಿ ಇನ್ನಷ್ಟು ಕೈ ಮೀರಬಾರದು ಎಂಬ ಕಾರಣಕ್ಕೆ ಕಠಿಣ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಆದರೆ ಕೆಲವರು ಇದನ್ನೆಲ್ಲ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೆಲವು ಸೆಲೆಬ್ರಿಟಿಗಳು ಕೂಡ ಉಡಾಫೆ ಮನೋಭಾವ ತೋರುತ್ತಿದ್ದಾರೆ. ಕೊವಿಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಶೂಟಿಂಗ್ ಮಾಡಿದ ನಟ ಜಿಮ್ಮಿ ಶೇರ್ಗಿಲ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪಂಜಾಬ್ನಲ್ಲಿ ಈ ಘಟನೆ ನಡೆದಿದೆ. ಒಂದು ವೆಬ್ ಸಿರೀಸ್ ಸಲುವಾಗಿ ನಟ ಜಿಮ್ಮಿ ಶೇರ್ಗಿಲ್ ಮತ್ತು ನಿರ್ದೇಶಕ ಈಶ್ವರ್ ನಿವಾಸ್ ಅವರು ಶೂಟಿಂಗ್ ನಡೆಸುತ್ತಿದ್ದರು. ಈ ಚಿತ್ರೀಕರಣದಲ್ಲಿ 150ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಒಂದು ಖಾಸಗಿ ಶಾಲೆಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಅದಕ್ಕೆ ಯಾವುದೇ ಅನುಮತಿಯನ್ನೂ ಪಡೆದುಕೊಂಡಿರಲಿಲ್ಲ. ಅಲ್ಲದೆ, ಶೂಟಿಂಗ್ನಲ್ಲಿ ಭಾಗವಹಿಸಿದ್ದ ಜನರು ಕೊವಿಡ್ ನಿಯಮಗಳನ್ನೂ ಪಾಲಿಸುತ್ತಿರಲಿಲ್ಲ.
ಕೊವಿಡ್ ಕರ್ಫ್ಯೂ ಜಾರಿಯಾಗಿ ಎರಡು ಗಂಟೆ ಕಳೆದ ಬಳಿಕವೂ ಚಿತ್ರತಂಡದವರು ಶೂಟಿಂಗ್ ನಡೆಸುತ್ತಿದ್ದರು. ಆಗ ಸಮಯ ರಾತ್ರಿ 8 ಗಂಟೆ ಆಗಿತ್ತು. ಆ ಸಂದರ್ಭದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಂಡಿದ್ದಾರೆ. ನಟ ಜಿಮ್ಮಿ ಶೇರ್ಗಿಲ್ ಮತ್ತು ನಿರ್ದೇಶಕ ಈಶ್ವರ್ ನಿವಾಸ್ ಅವರನ್ನು ಬಂಧಿಸಲಾಯಿತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ವರದಿ ಆಗಿದೆ. ಅಲ್ಲದೆ, ಚಿತ್ರತಂಡದ 35 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಚಿತ್ರರಂಗದ ಅನೇಕರಿಗೆ ಕೊವಿಡ್ ಕಾಟ ಕೊಡುತ್ತಿದೆ. ಸಮೀರಾ ರೆಡ್ಡಿ, ಅಲ್ಲು ಅರ್ಜುನ್, ಪೂಜಾ ಹೆಗ್ಡೆ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೊವಿಡ್ 19 ಸೋಂಕಿಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ. ಕೆಲವು ಸೆಲೆಬ್ರಿಟಿಗಳು ಈ ಮಹಾಮಾರಿಗೆ ಬಲಿ ಆಗಿರುವುದು ವಿಪರ್ಯಾಸ. ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೋಟಿ ರಾಮು ಅವರು ಕೊರೊನಾ ಸೋಂಕಿನಿಂದ ಕೊನೆಯುಸಿರೆಳೆದರು.
ರನ್ನ, ಅಣ್ಣಯ್ಯ, ಬಿಂದಾಸ್ ಮುಂತಾದ ಸಿನಿಮಾಗಳ ನಿರ್ಮಾಪಕ ಚಂದ್ರಶೇಖರ್ ಅವರು ಕೂಡ ಗುರುವಾರ (ಏ.29) ಮುಂಜಾನೆ ಕೊವಿಡ್ನಿಂದ ಮೃತಪಟ್ಟರು. ಕೆಲವೇ ದಿನಗಳ ಹಿಂದೆ ಯುವ ನಟ, ನಿರ್ಮಾಪಕ ಡಾ. ಡಿ.ಎಸ್. ಮಂಜುನಾಥ್ ನಿಧನರಾದರು. ಹೀಗೆ ಸೆಲೆಬ್ರಿಟಿಗಳ ವಲಯದಲ್ಲಿ ಕೊರೊನಾದ ಮರಣ ಮೃದಂಗ ಮುಂದುವರಿದಿದೆ.
ಇದನ್ನೂ ಓದಿ: Producer Ramu Death: ಕೊರೊನಾ ಸೋಂಕಿನಿಂದ ನಟಿ ಮಾಲಾಶ್ರೀ ಪತಿ, ಖ್ಯಾತ ನಿರ್ಮಾಪಕ ರಾಮು ನಿಧನ
ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕೊವಿಡ್ 19 ಸೋಂಕಿನಿಂದ ಸಾವು
Published On - 9:01 am, Thu, 29 April 21