ಜೂ ಎನ್ಟಿಆರ್ ಅಭಿಮಾನಿ ಸಾವು, ತಂಗಿ ಮದುವೆ ಜವಾಬ್ದಾರಿ ಹೊತ್ತ ಅಭಿಮಾನಿಗಳು
Jr NTR Fan: ಜೂ ಎನ್ಟಿಆರ್ ಅಭಿಮಾನಿ ಶ್ಯಾಮ್ ಸಾವು ಪ್ರಕರಣ ಆಂಧ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ನಡುವೆ ಜೂ ಎನ್ಟಿಆರ್ ಚಾರಿಟಿ ಹಾಗೂ ಜೂ ಎನ್ಟಿಆರ್ ಅಭಿಮಾನಿ ಸಂಘಗಳು ಶ್ಯಾಮ್ರ ಕುಟುಂಬಕ್ಕೆ ಬೆಂಬಲವಾಗಿ ನಿಂತಿವೆ.

ಜೂ ಎನ್ಟಿಆರ್ (Jr NTR) ಅಭಿಮಾನಿಯ (Fan) ಸಾವು ದೊಡ್ಡ ಸುದ್ದಿಯಾಗಿದೆ. ಪಶ್ಚಿಮ ಗೋಧಾವರಿ ಜಿಲ್ಲೆಯ ಶ್ಯಾಮ್ ಎಂಬಾತ ತಮ್ಮ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈತ ಜೂ ಎನ್ಟಿಆರ್ರ ದೊಡ್ಡ ಅಭಿಮಾನಿಯಾಗಿದ್ದ. ಶ್ಯಾಮ್ ಸಾವು ಅಸಹಜದ್ದು ಎನ್ನಲಾಗಿದ್ದು, ಈ ಕುರಿತು ತನಿಖೆ ಆಗಬೇಕು ಎಂದು ಟಿಡಿಪಿ ಪಕ್ಷ ಸೇರಿದಂತೆ ಜೂ ಎನ್ಟಿಆರ್ ಹಾಗೂ ಇನ್ನಿತರೆ ಸ್ಟಾರ್ ನಟರ ಅಭಿಮಾನಿಗಳು ಆಂಧ್ರ ಪ್ರದೇಶ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ನಡುವೆ ಜೂ ಎನ್ಟಿಆರ್ ಅಭಿಮಾನಿಗಳು ನಿಧನಹೊಂದಿರುವ ಶ್ಯಾಮ್ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ. ಜೂ ಎನ್ಟಿಆರ್ ಚಾರಿಟಿ ವತಿಯಿಂದ ಈಗಾಗಲೇ ಶ್ಯಾಮ್ರ ಕುಟುಂಬವನ್ನು ಸಂಪರ್ಕಿಸಿ ಅವರಿಗೆ ಬೆಂಬಲವಾಗಿ ನಿಲ್ಲುವ ಭರವಸೆ ನೀಡಲಾಗಿದೆ. ಇದರ ಜೊತೆಗೆ ಶ್ಯಾಮ್ರ ಸಹೋದರಿಯ ಮದುವೆ ಜವಾಬ್ದಾರಿಯನ್ನು ತಾವೇ ಹೊರುವುದಾಗಿ ಚಾರಿಟಿ ವತಿಯಿಂದ ಭರವಸೆ ನೀಡಲಾಗಿದೆ.
ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಜೂ ಎನ್ಟಿಆರ್ ಚಾರಿಟಿ ವತಿಯಿಂದ ಬಿಡುಗಡೆ ಮಾಡಲಾಗಿದ್ದು, ಹೋದ ಜೀವವನ್ನು ಮರಳಿ ತರಲಾರೆವು ಆದರೆ ಅವರ ಕುಟುಂಬದ ಜೊತೆಗೆ ಎಲ್ಲ ನೋವು-ನಲಿವುಗಳಲ್ಲಿ ಜೊತೆಯಾಗಿ ನಿಲ್ಲುವ ಭರವಸೆ ನೀಡುತ್ತೇವೆ. ಶ್ಯಾಮ್ ಅವರ ಕುಟುಂಬದ ಬೆನ್ನೆಲುಬಾಗಿದ್ದ ಅವನ ಜಾಗವನ್ನು ನಾವು ತುಂಬಲಾರೆವು ಆದರೆ ಅವನ ಗೈರು ಅನುಭವಾಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಈಗಾಗಲೇ ಶ್ಯಾಮ್ರ ಪೋಷಕರನ್ನು ಸಂಪರ್ಕಿಸಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಶ್ಯಾಮ್ರ ತಂಗಿಯ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ನಾವು ಹೊರಲಿದ್ದೇವೆ” ಎಂದಿದ್ದಾರೆ.
ಇದನ್ನೂ ಓದಿ:ರಾಜಕೀಯ ಚರ್ಚೆ ಎಬ್ಬಿಸಿದ ಜೂ ಎನ್ಟಿಆರ್ ಅಭಿಮಾನಿಯ ಸಾವು: ಕೊಲೆಯಾ? ಆತ್ಮಹತ್ಯೆಯಾ?
ಆಂಧ್ರ, ತೆಲಂಗಾಣದಲ್ಲಿರುವ ಜೂ ಎನ್ಟಿಆರ್ ಅಭಿಮಾನಿಗಳು ಸಂಘಗಳು ಒಟ್ಟಿಗೆ ಸೇರಿ ತಮ್ಮ ತಮ್ಮ ಶಕ್ತಿ ಅನುಸಾರವಾಗಿ ಶ್ಯಾಮ್ ಕುಟುಂಬಕ್ಕೆ ಹಣ ಸಹಾಯ ಮಾಡುವ ನಿರ್ಧಾರವನ್ನು ಸಹ ಮಾಡಲಾಗಿದೆ. ಜೂ ಎನ್ಟಿಆರ್ ಅಭಿಮಾನಿಗಳ ಈ ಮಾನವೀಯ ಕಾರ್ಯಕ್ಕೆ ನೆಟ್ಟಿಗರಿಂದ ಬೆಂಬಲ ವ್ಯಕ್ತವಾಗಿದೆ.
ಇನ್ನು ಶ್ಯಾಮ್ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹುನ್ನಾರವೂ ಆಂಧ್ರದಲ್ಲಿ ನಡೆಯುತ್ತಿದೆ. ಟಿಡಿಪಿ ಪಕ್ಷವು ಶ್ಯಾಮ್ ಸಾವಿಗೆ ವೈಸಿಪಿ ಪಕ್ಷದ ನಾಯಕ ಕಾರಣ ಎಂದು ಆರೋಪಿಸಿವೆ, ಆದರೆ ವೈಸಿಪಿ ಪಕ್ಷವು ಈ ಕುರಿತು ಟ್ವೀಟ್ ಮಾಡಿದ್ದು, ಶ್ಯಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ. ಆದರೆ ವಿಪಕ್ಷದವರು ಸಾವಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಿಎಂ ವೈಎಸ್ ಜಗನ್ ಅವರನ್ನು ನೇರವಾಗಿ ಎದುರಿಸಲಾಗದೆ ಜನರ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಂಥಹಾ ನೀಚ ನಾಯಕ ದೇಶದಲ್ಲೆ ಎಲ್ಲೂ ಇಲ್ಲ ಎಂದು ಚಂದ್ರಬಾಬು ನಾಯ್ಡು ಬಗ್ಗೆ ಟೀಕೆ ಮಾಡಿದ್ದಾರೆ.
ಸಾವಿಗೆ ಮುಂಚೆ ಶ್ಯಾಮ್ ಮಾಡಿದ್ದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶ್ಯಾಮ್ ನಿಧನದ ಬಗ್ಗೆ ಬೇಸರವಿದೆ. ಶ್ಯಾಮ್ ಕುಟುಂಬಕ್ಕೆ ಜೂ ಎನ್ಟಿಆರ್ ಅಭಿಮಾನಿಗಳಿಗೆ ತಮ್ಮ ಸಂತಾಪಗಳು ಆದರೆ ಶ್ಯಾಮ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರವುದಾಗಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ ಎಂದಿದ್ದಾರೆ. ವಿಡಿಯೋಗಳಲ್ಲಿ ತಮ್ಮ ಅಪ್ಪ-ಅಮ್ಮನಿಗೆ ಹಾಗೂ ಗೆಳೆಯರಿಗೆ ಕ್ಷಮೆ ಕೇಳಿರುವ ಶ್ಯಾಮ್, ನನಗೆ ಕೆಲಸ ಮಾಡಲು ಇಷ್ಟವಿಲ್ಲ. ನನಗೆ ಉದ್ಯೋಗ ವ್ಯವಸ್ಥೆ ಬಗ್ಗೆಯೇ ಅಸಮಾಧಾನವಿದೆ” ಎಂದು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ