ಸಾಯುವ ಮುಂಚೆ ‘ದೇವರ’ ನೋಡಬೇಕು: ಎನ್ಟಿಆರ್ ಅಭಿಮಾನಿ ಕೊನೆ ಆಸೆ
Jr NTR: ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಜೂ ಎನ್ಟಿಆರ್ ಅಭಿಮಾನಿಯೊಬ್ಬ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾಯುವ ಮುನ್ನ ‘ದೇವರ’ ಸಿನಿಮಾ ನೋಡುವ ಇಚ್ಛೆ ವ್ಯಕ್ತಪಡಿಸಿದ್ದಾನೆ.
ಜೂ ಎನ್ಟಿಆರ್ ಎಂದರೆ ಜೀವ ಕೊಡುವ ಲಕ್ಷಾಂತರ ಅಭಿಮಾನಿಗಳಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಅತ್ಯಂತ ಹುಚ್ಚ ಅಭಿಮಾನಿ ಹೊಂದಿರುವ ಇಬ್ಬರು ನಟರೆಂದರೆ ಜೂ ಎನ್ಟಿಆರ್ ಮತ್ತು ಪವನ್ ಕಲ್ಯಾಣ್. ಪ್ರಭಾಸ್ಗೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರಾದರೂ ಅವರನ್ನು ತುಸು ಎ ಅಥವಾ ಬಿ ಕ್ಲಾಸ್ ಅಭಿಮಾನಿಗಳೆನ್ನಬಹುದು. ಆದರೆ ಅಪ್ಪಟ ದೇಸಿ ಅಭಿಮಾನಿಗಳಿರುವುದು ಪವನ್ ಹಾಗೂ ಜೂ ಎನ್ಟಿಆರ್ಗೆ ಮಾತ್ರ. ಇದೀಗ ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ನಡುವೆ ಹಾಸಿಗೆಯಲ್ಲಿ ಮಲಗಿ ಸಾವಿಗೆ ಎದುರು ನೋಡುತ್ತಿರುವ ಅಭಿಮಾನಿಯೊಬ್ಬ ತನ್ನ ಕೊನೆಯ ಆಸೆಯಾಗಿ ‘ದೇವರ’ ಸಿನಿಮಾ ನೋಡುವ ಆಸೆ ವ್ಯಕ್ತಪಡಿಸಿದ್ದಾನೆ.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ರಕ್ತ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿರುವ ತಿರುಪತಿಯ ಕೌಶಿಕ್ ಹೆಸರಿನ ಜೂ ಎನ್ಟಿಆರ್ ಅಭಿಮಾನಿ, ತಾನು ಸಾಯುವ ಮುನ್ನ ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ನೋಡುವ ಆಸೆ ವ್ಯಕ್ತಪಡಿಸಿದ್ದಾನೆ. ತನ್ನ ಪೋಷಕರ ಬಳಿ ಈ ಬಗ್ಗೆ ಹೇಳಿಕೊಂಡಿರುವ ಕೌಶಿಕ್, ‘ನಾನು ಆದಷ್ಟು ಬೇಗ ಸಾಯುತ್ತೇನೆ ನಾನು ಸಾಯುವ ಮುನ್ನ ‘ದೇವರ’ ಸಿನಿಮಾ ನೋಡಬೇಕು’ ಎಂದಿದ್ದಾನಂತೆ.
ಇದನ್ನೂ ಓದಿ:ಅಮೆರಿದಲ್ಲಿ ದೂಳೆಬ್ಬಿಸುತ್ತಿದೆ ಜೂ ಎನ್ಟಿಆರ್ ‘ದೇವರ’
ತಿರುಪತಿಯಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿರುವ ಕೌಶಿಕ್ ಪೋಷಕರು ‘ಜೂ ಎನ್ಟಿಆರ್ ಹಾಗೂ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ನನ್ನ ಮಗನ ಮನವಿ ಆಲಿಸಬೇಕು ಎಂದಿದ್ದಾರೆ. ಪೋಷಕರು ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ವಿಡಿಯೋ ಹಂಚಿಕೊಳ್ಳುತ್ತಿರುವ ನೆಟ್ಟಿಗರು, ಜೂ ಎನ್ಟಿಆರ್ ತಮ್ಮ ಅಭಿಮಾನಿಯ ಮನವಿಗೆ ಸ್ಪಂದಿಸಬೇಕು ಎಂದಿದ್ದಾರೆ.
ಅಂದಹಾಗೆ ಜೂ ಎನ್ಟಿಆರ್ ನಟಿಸಿರುವ ‘ದೇವರ’ ಸಿನಿಮಾ ಸೆಪ್ಟೆಂಬರ್ 27ಕ್ಕೆ ತೆರೆಗೆ ಬರಲಿದೆ. ನಿನ್ನೆಯಷ್ಟೆ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ನಲ್ಲಿ ಜೂ ಎನ್ಟಿಆರ್ ಭರ್ಜರಿಯಾಗಿ ಅಬ್ಬರಿಸಿದ್ದಾರೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದು, ನಾಯಕಿಯಾಗಿ ಜಾನ್ಹವಿ ಕಪೂರ್ ನಟಿಸಿದ್ದಾರೆ. ವಿಲನ್ ಆಗಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಸಿನಿಮಾಕ್ಕೆ ಜೂ ಎನ್ಟಿಆರ್ ಸಹೋದರ ಕಲ್ಯಾಣ್ ರಾಮ್ ಬಂಡವಾಳ ಹೂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ