ರಾಜಮೌಳಿ ಸಿನಿಮಾನಲ್ಲಿ ಸ್ಟಾರ್ ನಟಿ ವಿಲನ್? ಯಾರಾಕೆ?
SS Rajamouli: ರಾಜಮೌಳಿ-ಮಹೇಶ್ ಬಾಬು ಕಾಂಬಿನೇಷನ್ನ ಮುಂದಿನ ಸಿನಿಮಾದಲ್ಲಿ ತೆಲುಗಿನ ಸ್ಟಾರ್ ನಟಿಯೊಬ್ಬರು ಖಳನಾಯಕಿಯಾಗಿ ನಟಿಸಲಿದ್ದಾರೆ. ಯಾರು ಆ ನಟಿ?
ಎಸ್ಎಸ್ ರಾಜಮೌಳಿ (SS Rajamouli), ಪ್ರಸ್ತುತ ದೇಶದ ನಂಬರ್ ಸಿನಿಮಾ ನಿರ್ದೇಶಕ. ರಾಜಮೌಳಿ ನಿರ್ದೇಶಿಸಿರುವ ಅಷ್ಟೂ ಸಿನಿಮಾಗಳು ಬ್ಲಾಕ್ ಬಸ್ಟರ್. ಇತ್ತೀಚೆಗಿನ ‘ಆರ್ಆರ್ಆರ್’ ಸಿನಿಮಾದಿಂದ ವಿಶ್ವಮಟ್ಟದಲ್ಲಿ ಖ್ಯಾತಿಗಳಿಸಿರುವ ರಾಜಮೌಳಿ, ತಮ್ಮ ಮುಂದಿನ ಸಿನಿಮಾವನ್ನು ‘ಆರ್ಆರ್ಆರ್’ ಗಿಂತಲೂ ದೊಡ್ಡದಾಗಿ ಕಟ್ಟಿಕೊಡುವ ತಯಾರಿಯಲ್ಲಿದ್ದಾರೆ. ಭಾರತದ ಸಿನಿಮಾ ಪ್ರೇಕ್ಷಕರನ್ನು ಮಾತ್ರವೇ ಅಲ್ಲದೆ ವಿಶ್ವ ಸಿನಿಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಲು ರಾಜಮೌಳಿ ಸಜ್ಜಾಗಿದ್ದಾರೆ. ರಾಜಮೌಳಿ ತಮ್ಮ ಮುಂದಿನ ಸಿನಿಮಾಕ್ಕೆ ಸ್ಟಾರ್ ನಟಿಯೊಬ್ಬರನ್ನು ವಿಲನ್ ಆಗಿ ಹಾಕಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ತೆಲುಗು ಚಿತ್ರರಂಗದಲ್ಲಿ ಅನುಷ್ಕಾ ಶೆಟ್ಟಿ ಬಳಿಕ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ, ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿದ ಕಾಜಲ್ ಅಗರ್ವಾಲ್, ರಾಜಮೌಳಿಯ ಮುಂದಿನ ಸಿನಿಮಾದಲ್ಲಿ ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಕಾಜಲ್ ಅಗರ್ವಾಲ್ ಇತ್ತೀಚೆಗೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗ ರಾಜಮೌಳಿ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ಖಳನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ರಾಜಮೌಳಿ, ತಮ್ಮ ಮುಂದಿನ ಸಿನಿಮಾವನ್ನು ಮಹೇಶ್ ಬಾಬು ಜೊತೆ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ರಾಜಮೌಳಿ ಹಾಗೂ ಮಹೇಶ್ ಬಾಬು ಒಂದಾಗುತ್ತಿದ್ದಾರೆ. ಸಹಜವಾಗಿಯೇ ಈ ಸಿನಿಮಾ ಭಾರಿ ನಿರೀಕ್ಷೆಗಳನ್ನು ಮೂಡಿಸಿದೆ. ಮಹೇಶ್ ಬಾಬು ಸಹ ರಾಜಮೌಳಿ ಸಿನಿಮಾಕ್ಕಾಗಿ ವಿಶೇಷ ರೀತಿಯಲ್ಲಿ ತಯಾರಾಗುತ್ತಿದ್ದಾರೆ. ಈ ಸಿನಿಮಾವು ಸಾಹಸಮಯ ಕತೆಯನ್ನು ಒಳಗೊಂಡಿರಲಿದೆ. ಹಾಲಿವುಡ್ನ ‘ಇಂಡಿಯಾನಾ ಜೋನ್ಸ್’ ಮಾದರಿಯ ಕತೆಯನ್ನು ಒಳಗೊಂಡಿರಲಿದೆ. ಅದರಲ್ಲಿಯೂ ಅರಣ್ಯದಲ್ಲಿ ನಡೆಯುವ ಸಾಹಸಗಳನ್ನು ಈ ಸಿನಿಮಾ ಒಳಗೊಂಡಿರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಗಾಂಧಿ ನಗರಕ್ಕೆ ಎಂಟ್ರಿ ಕೊಟ್ಟ ಮಹೇಶ್ ಬಾಬು: ಏನಿದು ಕತೆ?
ಮಹೇಶ್ ಬಾಬು ಹಾಗೂ ಕಾಜಲ್ ಅಗರ್ವಾಲ್ ಈ ಹಿಂದೆ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ‘ಬ್ಯುಸಿನೆಸನ್’ ಸಿನಿಮಾದಲ್ಲಿ ಮಹೇಶ್ ಬಾಬು ಹೀರೋ, ಕಾಜಲ್ ಹೀರೋಯಿನ್. ಆದರೆ ಈಗ ಹೀರೋ-ವಿಲನ್ ಆಗಿ ಎದುರು-ಬದುರು ಕಾಣಿಸಿಕೊಳ್ಳಲಿದ್ದಾರೆ. ರಾಜಮೌಳಿ ಸಿನಿಮಾಗಳಲ್ಲಿ ವಿಲನ್ಗಳು ಬಹಳ ಪವರ್ಫುಲ್ ಆಗಿರುತ್ತಾರೆ. ಆದರೆ ಕಾಜಲ್ ಅನ್ನು ರಾಜಮೌಳಿ ವಿಲನ್ ಆಗಿ ಆಯ್ಕೆ ಮಾಡಿಕೊಂಡಿರುವ ಬಗ್ಗೆಯೂ ಸಾಕಷ್ಟು ಕುತೂಹಲ ಇದೆ. ಕಾಜಲ್ ಪಾತ್ರವನ್ನು ರಾಜಮೌಳಿ ಹೇಗೆ ಡಿಸೈನ್ ಮಾಡಿದ್ದಾರೆಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.
ರಾಜಮೌಳಿ ಹಾಗೂ ಮಹೇಶ್ ಬಾಬು ಅವರ ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಸಿನಿಮಾ ಇದೆ. ಸಿನಿಮಾಕ್ಕಾಗಿ ಹಲವು ಹಾಲಿವುಡ್ ದೊಡ್ಡ ಸಂಸ್ಥೆಗಳೊಟ್ಟಿಗೆ ರಾಜಮೌಳಿ ಮಾತುಕತೆ ನಡೆಸಿದ್ದಾರೆ. ಮಹೇಶ್ ಬಾಬು ಸಹ ಜಿಮ್ನಲ್ಲಿ ವಿಶೇಷ ತರಬೇತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸಿನಿಮಾದ ಲೊಕೇಶನ್ ಹುಡುಕಾಟವನ್ನು ರಾಜಮೌಳಿ ಮುಗಿಸಿದ್ದು, ಇದೇ ವರ್ಷಾಂತ್ಯಕ್ಕೆ ಸಿನಿಮಾದ ಮುಹೂರ್ತ ನಡೆಯಲಿದೆ ಎನ್ನಲಾಗುತ್ತಿದೆ.
ಇದರ ಹೊರತಾಗಿ ಕಾಜಲ್ ಅಗರ್ವಾಲ್ ಪ್ರಸ್ತುತ ಬಾಲಕೃಷ್ಣ ಜೊತೆಗೆ ‘ಭಗವಂತ ಕೇಸರಿ’, ಕಮಲ್ ಹಾಸನ್ ಜೊತೆಗೆ ‘ಇಂಡಿಯನ್ 2’ ಮಹಿಳಾ ಪ್ರಧಾನ ಸಿನಿಮಾಗಳಾದ ‘ಉಮಾ’ ಹಾಗೂ ‘ಸತ್ಯಭಾಮಾ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಮಹೇಶ್ ಬಾಬು ತ್ರಿವಿಕ್ರಮ್ ನಿರ್ದೇಶನದ ‘ಗುಂಟೂರು ಖಾರಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಹಾಗೂ ಕನ್ನಡತಿ ಶ್ರೀಲೀಲಾ ನಾಯಕಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ