IIFA: ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಮಲ್ ಹಾಸನ್ಗೆ ಸಿಗಲಿದೆ ವಿಶೇಷ ಗೌರವ
ಭಾರತೀಯ ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ ಕಾರಣಕ್ಕೆ ಕಮಲ್ ಹಾಸನ್ ಅವರನ್ನು ಗೌರವಿಸಲಾಗುತ್ತಿದೆ. ಅಬುಧಾಬಿಯಲ್ಲಿ ಐಫಾ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.
ಹಲವು ವರ್ಷಗಳಿಂದ ಐಫಾ (IIFA) ಪ್ರಶಸ್ತಿ ಪ್ರದಾನ ಸಮಾರಂಭ ನಡೆದುಕೊಂಡು ಬರುತ್ತಿದೆ. ಪ್ರತಿ ವರ್ಷ ಅದ್ದೂರಿಯಾಗಿ ಈ ಕಾರ್ಯಕ್ರಮ ಆಯೋಜನೆಗೊಳ್ಳುತ್ತದೆ. ಈ ಬಾರಿ ಅಬುಧಾಬಿಯಲ್ಲಿ ಐಫಾ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಈ ವೇದಿಕೆಯಲ್ಲಿ ನಟ ಕಮಲ್ ಹಾಸನ್ (Kamal Haasan) ಅವರಿಗೆ ವಿಶೇಷ ಗೌರವ ಸಲ್ಲಿಕೆ ಆಗಲಿದೆ. ಅವರ ಜೊತೆ ರಿತೇಶ್ ದೇಶ್‌ಮುಖ್, ಜೆನಿಲಿಯಾ ದೇಶ್‌ಮುಖ್ ಮತ್ತು ಮನೀಶ್ ಮಲ್ಹೋತ್ರಾ ಅವರನ್ನು ಕೂಡ ಗೌರವಿಸಲಾಗುವುದು. ಮೇ 26 ಮತ್ತು 27ರಂದು ಐಫಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಭಾರತೀಯ ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ ಕಾರಣಕ್ಕೆ ಕಮಲ್ ಹಾಸನ್ ಅವರನ್ನು ಗೌರವಿಸಲಾಗುತ್ತಿದೆ. ಐಫಾ ಸಮಾರಂಭದ ಜೊತೆ ಅವರು ಹಲವು ವರ್ಷಗಳಿಂದ ಸಂಪರ್ಕ ಹೊಂದಿದ್ದಾರೆ. ‘ನಾನು ಅನೇಕ ಬಾರಿ ಐಫಾ ಸಮಾರಂಭದಲ್ಲಿ ಭಾಗಿ ಆಗಿದ್ದೇನೆ. ಅವರು ಜಾಗತಿಕವಾಗಿ ಭಾರತೀಯ ಸಿನಿಮಾವನ್ನು ಪ್ರಚಾರ ಮಾಡುವಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ನನ್ನನ್ನು ಅಬುಧಾಬಿಯಲ್ಲಿ ಸನ್ಮಾನಿಸಲಾಗುತ್ತಿದೆ. ಅದಕ್ಕೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ’ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಇದನ್ನೂ ಓದಿ: Indian 2: ‘ಇಂಡಿಯನ್ 2’ ಶೂಟಿಂಗ್ನಲ್ಲಿ ತಿಂಗಳುಗಟ್ಟಲೆ ಬ್ಯುಸಿ ಆಗಲಿದ್ದಾರೆ ನಟ ಕಮಲ್ ಹಾಸನ್
ಬಾಲನಟ ಆಗಿ ಚಿತ್ರರಂಗಕ್ಕೆ ಕಾಲಿಟ್ಟವರು ಕಮಲ್ ಹಾಸನ್. ನೂರಾರು ಸಿನಿಮಾಗಳಲ್ಲಿ ನಟಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ನಿರ್ದೇಶಕನಾಗಿ, ನಿರ್ಮಾಪಕನಾಗಿಯೂ ಅವರು ಯಶಸ್ಸು ಕಂಡಿದ್ದಾರೆ. 2022ರಲ್ಲಿ ತೆರೆಕಂಡ ‘ವಿಕ್ರಮ್’ ಸಿನಿಮಾದಿಂದ ಕಮಲ್ ಹಾಸನ್ ಅವರು ಭರ್ಜರಿ ಗೆಲುವು ಕಂಡರು. ರಾಜಕೀಯ ಜೀವನದಲ್ಲಿ ಅವರಿಗೆ ನಿರೀಕ್ಷಿತ ಫಲ ಸಿಕ್ಕಿಲ್ಲ.
ಇದನ್ನೂ ಓದಿ: Kamal Haasan: 100 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡ್ತಾರೆ ಕಮಲ್ ಹಾಸನ್; ಹೀರೋ ಯಾರು?
ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ಡಿಸೋಜಾ ಅವರಿಗೆ ‘ಪ್ರಾದೇಶಿಕ ಸಿನಿಮಾದಲ್ಲಿನ ಸಾಧನೆ’ಗಾಗಿ ಗೌರವ ಸಲ್ಲಿಸಲಾಗುತ್ತಿದೆ. ಹಿಂದಿ ಜೊತೆ ಮರಾಠಿ ಚಿತ್ರರಂಗದಲ್ಲಿ ಅವರು ಸಕ್ರಿಯರಾಗಿದ್ದಾರೆ. ಮರಾಠಿಯ ಅನೇಕ ಸಿನಿಮಾಗಳನ್ನು ಅವರು ನಿರ್ಮಿಸಿದ್ದಾರೆ. ಕಳೆದ ವರ್ಷ ಅವರು ಹೊಸ ಮರಾಠಿ ಚಿತ್ರಕ್ಕೆ ಚಾಲನೆ ನೀಡಿದರು.
ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರಿಗೂ ‘ಐಫಾ’ ಸಮಾರಂಭದಲ್ಲಿ ಗೌರವ ಸಲ್ಲಿಕೆ ಆಗಲಿದೆ. ಹಿಂದಿ ಚಿತ್ರರಂಗದಲ್ಲಿ ಪ್ರಮುಖ ಫ್ಯಾಷನ್ ಡಿಸೈನರ್ ಆಗಿ ಅವರು ಗುರುತಿಸಿಕೊಂಡಿದ್ದಾರೆ. ಈ ಬಾರಿ ಐಫಾ ಸಮಾರಂಭದಲ್ಲಿ ಬಾಲಿವುಡ್ನ ಅನೇಕ ಸ್ಟಾರ್ ಕಲಾವಿದರು ಮನರಂಜನಾ ಕಾರ್ಯಕ್ರಮ ನೀಡಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:00 am, Sun, 21 May 23