70ರ ವಯಸ್ಸಲ್ಲೂ ಕಲಿಯುವ ಉತ್ಸಾಹ, ಅಮೆರಿಕದಲ್ಲಿ ಕೋರ್ಸ್ ಸೇರಿಕೊಂಡ ಕಮಲ್ ಹಾಸನ್

Kamal Haasan: ಹೊಸ ವಿಷಯ, ತಂತ್ರಜ್ಞಾನದ ಬಗ್ಗೆ ಕುತೂಹಲಿಯಾಗಿರುವ ಕಮಲ್ ಹಾಸನ್, ಇದೀಗ ಹೊಸ ಕೋರ್ಸ್ ಒಂದನ್ನು ಕಲಿಯಲು ಅಮೆರಿಕಕ್ಕೆ ಹಾರಿದ್ದಾರೆ. ಮುಂದಿನ 45 ದಿನಗಳ ಕಾಲ ಅವರು ಕೋರ್ಸ್ ಒಂದನ್ನು ಕಲಿಯಲಿದ್ದಾರೆ.

70ರ ವಯಸ್ಸಲ್ಲೂ ಕಲಿಯುವ ಉತ್ಸಾಹ, ಅಮೆರಿಕದಲ್ಲಿ ಕೋರ್ಸ್ ಸೇರಿಕೊಂಡ ಕಮಲ್ ಹಾಸನ್
Follow us
|

Updated on: Sep 07, 2024 | 4:43 PM

ಎಷ್ಟೋ ಮಂದಿ ಕಾಲೇಜಿಗೆಂದು ಹೇಳಿ ಮನೆಯಿಂದ ಹೊರಟವರು ಕಾಲೇಜು ಮೆಟ್ಟಿಲು ಹತ್ತದೆ ಊರೆಲ್ಲ ಸುತ್ತಾಡಿ ಮನೆ ಸೇರಿಕೊಳ್ಳುತ್ತಾರೆ. ಎಲ್ಲ ಅವಕಾಶಗಳು ಇದ್ದರು ಸಹ ಶಿಕ್ಷಣಕ್ಕೆ ತಿಲಾಂಜಲಿ ಇಟ್ಟು ನಿರುದ್ಯೋಗಿಗಳಾಗಿ ಸಮಯ ಕಳೆಯುತ್ತಾರೆ. ಆದರೆ ಹಿರಿಯ ನಟ, ನಿರ್ದೇಶಕ ಕಮಲ್ ಹಾಸನ್ ಅವರ ವ್ಯಕ್ತಿತ್ಯವೇ ಭಿನ್ನ. ಸದಾ ಹೊಸತನಕ್ಕೆ ತುಡಿಯುವ ವ್ಯಕ್ತಿ ಅವರು. ಹೊಸದನ್ನು ಕಲಿಯುವ, ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಅಪಾರ ಆಸಕ್ತಿ ಹೊಂದಿದ್ದಾರೆ. ಇದೀಗ ಹೊಸ ತಂತ್ರಜ್ಞಾನವನ್ನು ಕಲಿಯಲು ಕಮಲ್ ಹಾಸನ್ ಅಮೆರಿಕಕ್ಕೆ ತೆರಳಿದ್ದಾರೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಈಗ ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ಚರ್ಚೆಯಲ್ಲಿರುವ ವಿಷಯ. ಕೃತಕ ಬುದ್ಧಿಮತ್ತೆ ಮುಂದಿನ ವರ್ಷಗಳಲ್ಲಿ ಇಡೀ ವಿಶ್ವದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲಿದೆ ಎಂದು ಹೇಳಲಾಗುತ್ತಿದೆ. ಯಾವುದನ್ನೂ ಕಲಿಯದಿದ್ದರೂ ಸಹ ಕೃತಕ ಬುದ್ಧಿಮತ್ತೆ ಅಥವಾ ಎಐ ಲ್ಯಾಂಗ್ವೇಜ್ ಅನ್ನು ಕಲಿಯಬೇಕು ಎನ್ನುತ್ತಿದ್ದಾರೆ. ಕಮಲ್ ಹಾಸನ್ ಇದೇ ಎಐ ವಿಷಯವನ್ನು ವಿಸ್ತಾರವಾಗಿ ಕಲಿಯಲೆಂದು ಅಮೆರಿಕಕ್ಕೆ ತೆರಳಿದ್ದು ಅಲ್ಲಿ ಕೋರ್ಸ್ ಒಂದನ್ನು ತಮ್ಮನ್ನು ತಾವು ರಿಜಿಸ್ಟರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಸಿನಿಮಾ ಸೋತು ಸುಣ್ಣವಾದರೂ ಕಮಲ್ ಹಾಸನ್ ಚಿತ್ರಕ್ಕೆ ತಪ್ಪಿಲ್ಲ ಕಾನೂನು ಹೋರಾಟ

ಅಮೆರಿಕದ ಪ್ರತಿಷ್ಠಿತ ಇನ್​ಸ್ಟಿಟ್ಯೂಟ್ ಒಂದರಲ್ಲಿ 90 ದಿನದ ಎಐ ಕೋರ್ಸ್​ಗೆ ತಮ್ಮನ್ನು ತಾವು ಎನ್​ರೋಲ್ ಮಾಡಿಕೊಂಡಿದ್ದಾರೆ. ಕೋರ್ಸ್​ ಕಲಿಯಲು ಈಗಾಗಲೆ ಅಮೆರಿಕಕ್ಕೆ ಕಮಲ್ ಹಾಸನ್ ತೆರಳಿದ್ದು, ಮುಂದಿನ 45 ದಿನಗಳ ಕಾಲ ಅವರು ಎಐ ಕಲಿಯಲಿದ್ದಾರೆ. ಅದಾದ ಬಳಿಕ ಭಾರತಕ್ಕೆ ವಾಪಸ್ಸಾಗಲಿದ್ದಾರೆ. 45 ದಿನಗಳು ಯಾವುದೇ ಶೂಟಿಂಗ್ ಕೆಲಸಗಳು ಇಲ್ಲದ ಕಾರಣ ಕಮಲ್ ಹಾಸನ್ ಎಐ ಕೋರ್ಸ್​ಗೆ ಎನ್​ರೋಲ್ ಮಾಡಿಕೊಂಡಿದ್ದರು. ಆದರೆ 45 ದಿನಗಳ ಬಳಿಕ ಅವರಿಗೆ ಚಿತ್ರೀಕರಣದ ಕೆಲಸ ಇರುವುದರಿಂದ ವಾಪಸ್ಸಾಗಲಿದ್ದಾರೆ. ಆದರೆ ಚಿತ್ರೀಕರಣದ ಬಳಿಕ ಸಿಗುವ ಬಿಡುವಿನಲ್ಲಿ ಮತ್ತೆ ಹೋಗಿ ಕೋರ್ಸ್​ ಅನ್ನು ಪೂರ್ಣ ಮಾಡಿಕೊಳ್ಳಲಿದ್ದಾರೆ.

ಕಮಲ್ ಹಾಸನ್ ಸದಾ ತಂತ್ರಜ್ಞಾನದ ಬಗ್ಗೆ ಒಲವುಳ್ಳವರು. ಈ ಹಿಂದೆ ಅವರು ನಿರ್ದೇಶಿಸಿದ ಸಿನಿಮಾಗಳಲ್ಲಿ ಕ್ಯಾಮೆರಾ, ಸೌಂಡ್, ಎಡಿಟಿಂಗ್ ಇನ್ನಿತರೆಗಳಿಗೆ ಸಂಬಂಧಿಸಿದಂತೆ ಹಲವು ಹೊಸ ತಂತ್ರಜ್ಞಾನಗಳನ್ನು ಬಳಸಿದ್ದರು. ಈ ಹಿಂದೆ ಕಮಲ್ ಹಾಸನ್​ಗೆ ಮೇಕಪ್​ ಮೇಲೆ ಅಪಾರ ಕುತೂಹಲ ಬಂದು ಹಾಲಿವುಡ್​ನ ಆಸ್ಕರ್ ವಿಜೇತ ಮೇಕಪ್ ಮ್ಯಾನ್ ಬಳಿ ಮೇಕಪ್ ಕಲಿಯಲು ಹೋಗಿದ್ದರು ಮಾತ್ರವಲ್ಲದೆ ಮೊದಲ ‘ರ್ಯಾಂಬೊ’ ಸಿನಿಮಾಕ್ಕೆ ಮೇಕಪ್ ಅಸಿಸ್ಟೆಂಟ್ ಆಗಿ ಕೆಲಸ ಸಹ ಮಾಡಿದ್ದರು. ಹೊಸ ವಿಷಯಗಳ ಕಲಿಕೆ ಬಗ್ಗೆ ಸದಾ ಉತ್ಸುಕರಾಗಿರುವ ಕಮಲ್ ಈಗ ಎಐ ಕಲಿಯಲು ಮುಂದಾಗಿದ್ದಾರೆ. ಮುಂದೆ ತಮ್ಮ ಸಿನಿಮಾಗಳಲ್ಲಿ ಕಮಲ್ ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ