
ಇತ್ತೀಚೆಗೆ ಸೋನು ನಿಗಮ್ (Sonu Nigam) ಅವರು ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡಿದ್ದರು. ಆ ಬಳಿಕ ಕರ್ನಾಟಕದಲ್ಲಿ ಅವರಿಗೆ ಅವಕಾಶ ನೀಡಬಾರದು ಎನ್ನುವ ನಿರ್ಧಾರಕ್ಕೆ ಬಂದಾಗಿದೆ. ಈಗ ತಮಿಳು ನಟ ಕಮಲ್ ಹಾಸನ್ ಸರದಿ. ಅವರು ಕನ್ನಡದ ಬಗ್ಗೆ ನೀಡಿದ ಹೇಳಿಕೆ ಚರ್ಚೆಗೆ ಕಾರಣ ಆಗಿದೆ. ಶಿವರಾಜ್ಕುಮಾರ್ ಎದುರೇ ಕಮಲ್ ಹಾಸನ್ ಅವರು ‘ತಮಿಳಿನಿಂದಲೇ ಕನ್ನಡ ಹುಟ್ಟಿದ್ದು’ ಎನ್ನುವ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದಾಗಿ ‘ಥಗ್ ಲೈಫ್’ ಚಿತ್ರಕ್ಕೆ ಸಂಕಷ್ಟ ಉಂಟಾಗಿದೆ.
ಇತ್ತೀಚೆಗೆ ‘ಥಗ್ ಲೈಫ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಚೆನ್ನೈನಲ್ಲಿ ನಡೆಯಿತು. ಇದಕ್ಕೆ ಶಿವರಾಜ್ಕುಮಾರ್ ಅತಿಥಿಯಾಗಿ ತೆರಳಿದ್ದರು. ಈ ವೇಳೆ ಮಾತನಾಡುವಾಗ ಕಮಲ್ ಹಾಸನ್ ಅವರು ವಿವಾದದ ಕಿಡಿ ಹೊತ್ತಿಸಿದ್ದಾರೆ. ‘ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು’ ಎಂದಿದ್ದಾರೆ. ಕಮಲ್ ಹಾಸನ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಜೂನ್ 5ರಂದು ‘ಥಗ್ ಲೈಫ್’ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲೂ ಸಿನಿಮಾನ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ನಡೆದಿದೆ. ಆದರೆ, ಈಗ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ರಿಲೀಸ್ ಆಗಬಾರದು ಎಂದು ಕನ್ನಡ ಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಹೇಳಿದ್ದಾರೆ. ಸಿನಿಮಾ ರಿಲೀಸ್ ಹತ್ತಿರವಾದಂತೆ ಆಕ್ರೋಶ ಇನ್ನಷ್ಟು ಬಲಗೊಳ್ಳಲಿದೆ.
ಪ್ರತಿ ಬಾರಿ ರಜನಿಕಾಂತ್ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಕರ್ನಾಟಕದಲ್ಲಿ ಒಂದಷ್ಟು ಆಕ್ರೋಶ ವ್ಯಕ್ತವಾಗುತ್ತದೆ. ಅದೇ ರೀತಿ ಈಗ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ರಿಲೀಸ್ ವೇಳೆಯೂ ವಿವಾದ ಸೃಷ್ಟಿ ಆಗಿದ್ದು, ಕರ್ನಾಟಕದಲ್ಲಿ ಸಿನಿಮಾ ರಿಲೀಸ್ಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ಕನ್ನಡ ಹುಟ್ಟಿದ್ದು ತಮಿಳಿನಿಂದ’: ಶಿವಣ್ಣನ ಮುಂದೆಯೇ ವಿವಾದದ ಕಿಡಿ ಹೊತ್ತಿಸಿದ ಕಮಲ್ ಹಾಸನ್
‘ಥಗ್ ಲೈಫ್’ ಚಿತ್ರಕ್ಕೆ ಕಮಲ್ ಹಾಸನ್ ಹೀರೋ. ಅಭಿರಾಮಿ, ತ್ರಿಷಾ ಚಿತ್ರದ ನಾಯಕಿಯರು. ಮಣಿರತ್ನಂ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಹಲವು ವರ್ಷಗಳ ಬಳಿಕ ಕಮಲ್ ಹಾಸನ್ ಹಾಗೂ ಮಣಿರತ್ನಂ ಜೋಡಿ ಒಂದಾಗಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.