Kangana Ranaut: ‘ದಾರಿ ಬಿಡಿ.. ತಲೈವಿ ಬರ್ತಿದ್ದಾರೆ’; ಜಯಲಲಿತಾ ಜೀವನಾಧಾರಿತ ಸಿನಿಮಾ ಬಗ್ಗೆ ದೊಡ್ಡ ಸುದ್ದಿ ನೀಡಿದ ಕಂಗನಾ

| Updated By: ಮದನ್​ ಕುಮಾರ್​

Updated on: Aug 23, 2021 | 8:43 PM

Thalaivi Release Date: ಜಯಲಲಿತಾ ಬಯೋಪಿಕ್​ ‘ತಲೈವಿ’ ಬಿಡುಗಡೆ ದಿನಾಂಕವನ್ನು ಕಂಗನಾ ರಣಾವತ್​ ಬಹಿರಂಗಪಡಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಜಯಲಲಿತಾ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಹಲವು ಗೆಟಪ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Kangana Ranaut: ‘ದಾರಿ ಬಿಡಿ.. ತಲೈವಿ ಬರ್ತಿದ್ದಾರೆ’; ಜಯಲಲಿತಾ ಜೀವನಾಧಾರಿತ ಸಿನಿಮಾ ಬಗ್ಗೆ ದೊಡ್ಡ ಸುದ್ದಿ ನೀಡಿದ ಕಂಗನಾ
ಕಂಗನಾ, ತಲೈವಿ ಚಿತ್ರದ ಪೋಸ್ಟರ್
Follow us on

ನಟಿ ಕಂಗನಾ ರಣಾವತ್ (Kangana Ranaut)​ ಅವರ ಅಭಿಮಾನಿಗಳು ‘ತಲೈವಿ’ (Thalaivi) ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಸಿನಿಮಾ ಮೇಲೆ ದೊಡ್ಡಮಟ್ಟದ ನಿರೀಕ್ಷೆ ಇದೆ. ಹಲವು ಕಾರಣಗಳಿಗಾಗಿ ಇದು ಹೈಪ್​ ಪಡೆದುಕೊಂಡಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಒಂದು ಕಾಲದ ಸ್ಟಾರ್​ ನಟಿ ಜಯಲಲಿತಾ (Jayalalithaa) ಅವರ ಜೀವನವನ್ನು ಆಧರಿಸಿ ತಲೈವಿ ಸಿನಿಮಾ ಸಿದ್ಧವಾಗಿದೆ. ದೊಡ್ಡ ಪರದೆಯ ಮೇಲೆ ಈ ಬಯೋಪಿಕ್​ (Biopic) ಕಣ್ತುಂಬಿಕೊಳ್ಳಬೇಕು ಎಂದು ಕಂಗನಾ ಮತ್ತು ಜಯಲಲಿತಾ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಅವರಿಗಾಗಿ ಕಂಗನಾ ಗುಡ್​ ನ್ಯೂಸ್​ ನೀಡಿದ್ದಾರೆ. ‘ತಲೈವಿ’ ಚಿತ್ರದ ಬಿಡುಗಡೆ ದಿನಾಂಕವನ್ನು(Thalaivi Release Date) ಅವರು ಘೋಷಿಸಿದ್ದಾರೆ. ಸೆ.10ರಂದು ಈ ಸಿನಿಮಾ ರಿಲೀಸ್​ ಆಗಲಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಮೊದಲೇ ‘ತಲೈವಿ’ ಬಿಡುಗಡೆ ಆಗಿರಬೇಕಿತ್ತು. ಆದರೆ ಕೊರೊನಾ ವೈರಸ್​ ಎರಡನೇ ಅಲೆ ಹಬ್ಬಿದ್ದರಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ನಿರ್ದಿಷ್ಟವಾಗಿ ಯಾವಾಗ ಚಿತ್ರ ರಿಲೀಸ್​ ಆಗಲಿದೆ ಎಂಬ ಬಗ್ಗೆ ಖಚಿತತೆ ಇರಲಿಲ್ಲ. ಅದಕ್ಕೀಗ ಕಂಗನಾ ಉತ್ತರ ನೀಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಖಾತೆ ಮೂಲಕ ಅವರು ‘ತಲೈವಿ’ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಜಯಲಲಿತಾ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಹಲವು ಗೆಟಪ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಭಾರತದ ರಾಜಕಾರಣದಲ್ಲಿ ಜಯಲಲಿತಾ ಹೆಸರು ದೊಡ್ಡದು. ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅವರು ಜನಮನ ಗೆದ್ದಿದ್ದರು. ಅದಕ್ಕೂ ಮುನ್ನ ಸಿನಿಮಾ ನಟಿಯಾಗಿ ಕೂಡ ಪ್ರೇಕ್ಷಕರನ್ನು ಅವರು ರಂಜಿಸಿದ್ದರು. ಹೀಗೆ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ಜಯಲಲಿತಾ ಅವರು ವೈಯಕ್ತಿಕ ಜೀವನದಲ್ಲಿ ಹಲವು ಏರು-ಪೇರುಗಳನ್ನು ಕಂಡಿದ್ದರು. ಸಿನಿಮಾ ಮತ್ತು ರಾಜಕೀಯದಲ್ಲಿ ಅವರ ಜರ್ನಿ ಅಷ್ಟು ಸುಲಭದ್ದಾಗಿರಲಿಲ್ಲ. ಅದನ್ನು ಈಗ ‘ತಲೈವಿ’ ಸಿನಿಮಾ ಮೂಲಕ ತೆರೆಮೇಲೆ ತೋರಿಸಲಾಗುತ್ತಿದೆ.

‘ಇಂಥ ಮಹಾನ್​ ವ್ಯಕ್ತಿತ್ವದ ಕಥೆಯನ್ನು ದೊಡ್ಡ ಪರದೆಯಲ್ಲೇ ನೋಡಬೇಕು. ಸಿನಿಮಾ ಜಗತ್ತಿಗೆ ಸೂಪರ್​ ಸ್ಟಾರ್​ ರೀತಿ ಎಂಟ್ರಿ ನೀಡಲು ಸಜ್ಜಾಗಿರುವ ತಲೈವಿಗೆ ದಾರಿ ಬಿಡಿ. ಸೆ.10ರಂದು ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ತಲೈವಿ ಬಿಡುಗಡೆ ಆಗಲಿದೆ’ ಎಂದು ಕಂಗನಾ ಬರೆದುಕೊಂಡಿದ್ದಾರೆ. ಇದರೊಂದಿಗೆ ಅವರು ಹೊಸ ಪೋಸ್ಟರ್​ ಹಂಚಿಕೊಂಡಿದ್ದು, ಅದು ಕೂಡ ವೈರಲ್​ ಆಗುತ್ತಿದೆ.

ಎಂ.ಜಿ. ರಾಮಚಂದ್ರನ್​ ಪಾತ್ರದಲ್ಲಿ ಅರವಿಂದ್​ ಸ್ವಾಮಿ ನಟಿಸಿದ್ದಾರೆ. ಎಂ. ಕರುಣಾನಿಧಿಯಾಗಿ ನಾಸರ್​ ಬಣ್ಣ ಹಚ್ಚಿದ್ದಾರೆ. ಭಾಗ್ಯಶ್ರೀ, ಸಮುದ್ರಖಣಿ ಮುಂತಾದವರು ಕೂಡ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಖ್ಯಾತ ನಿರ್ದೇಶಕ ಎ.ಎಲ್​. ವಿಜಯ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​ ಅವರು ಚಿತ್ರಕಥೆ ಬರೆದಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ‘ತಲೈವಿ’ ಬಿಡುಗಡೆ ಆಗಲಿದೆ.

ಇದನ್ನೂ ಓದಿ:

Kangana Ranaut: ವಾಯುಸೇನೆ ಸಮವಸ್ತ್ರ ಧರಿಸಿದ ಕಂಗನಾ ರಣಾವತ್​ ಫೋಟೋ ವೈರಲ್​

ಇಂದಿರಾ ಗಾಂಧಿ ಪಾತ್ರದಲ್ಲಿ ಕಿರಿಕ್ ನಟಿ ಕಂಗನಾ ರಣಾವತ್​; ಹೊಸ ಸಿನಿಮಾ ಹೆಸರು ‘ಎಮರ್ಜೆನ್ಸಿ’