
ಬೆಂಗಳೂರಿನ ಪ್ರಸಿದ್ಧ ಹಾಗೂ ಐತಿಹಾಸಿಕ ‘ಊರ್ವಶಿ’ ಚಿತ್ರಮಂದಿರದ (Urvashi Cinema) ನೆಲಸಮ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಚಿತ್ರಮಂದಿರದ ಕಟ್ಟಡದಲ್ಲಿದ್ದ ಯಾವುದೇ ವಸ್ತುಗಳನ್ನು ತೆರವುಗೊಳಿಸದಂತೆ ಹೈಕೋರ್ಟ್‌ನ (Karnataka High Court) ಏಕಸದಸ್ಯ ಪೀಠವು ಭೂಮಾಲೀಕರಿಗೆ ಸ್ಪಷ್ಟ ನಿರ್ದೇಶನ ನೀಡಿದೆ. ಸೋಮವಾರ ಊರ್ವಶಿ ಚಿತ್ರಮಂದಿರ ನೆಲಸಮ (Urvashi Theatre Demolition) ಮಾಡುವ ಪ್ರಕ್ರಿಯೆ ಆರಂಭ ಆಗಿತ್ತು. ಇದರಿಂದ ಸಿನಿಪ್ರಿಯರಿಗೆ ಬೇಸರ ಉಂಟಾಗಿತ್ತು. ಆದರೆ ಈಗ ಹೈಕೋರ್ಟ್ ತಡೆ ನೀಡಿದೆ.
ಚಿತ್ರಮಂದಿರದ ಜಾಗವನ್ನು ಖಾಲಿ ಮಾಡಲು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಿದೆ. ಆದಾಗ್ಯೂ, ಭೂಮಾಲೀಕರು ಆ ಗಡುವಿಗಿಂತ ಮುಂಚಿತವಾಗಿಯೇ ಸ್ಥಳವನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ ಎಂದು ಚಿತ್ರಮಂದಿರದ ಆಡಳಿತ ಮಂಡಳಿ ಆರೋಪಿಸಿದೆ. ಈ ಪ್ರಕ್ರಿಯೆಯಲ್ಲಿ ಚಿತ್ರಮಂದಿರದಲ್ಲಿದ್ದ ಬೆಲೆಬಾಳುವ ಪ್ರೊಜೆಕ್ಟರ್, ಸ್ಕ್ರೀನ್ ಹಾಗೂ ಸೀಟುಗಳಿಗೆ ಹಾನಿ ಮಾಡಲಾಗಿದೆ ಎಂದು ಊರ್ವಶಿ ಚಿತ್ರಮಂದಿರದ ಪರ ಹಿರಿಯ ವಕೀಲ ಶ್ಯಾಮ್‌ಸುಂದರ್ ಅವರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು.
ಇದಕ್ಕೆ ಪ್ರತಿಯಾಗಿ ಭೂಮಾಲೀಕರ ಪರ ವಕೀಲರು ವಾದ ಮಂಡಿಸಿ, ಸುಪ್ರೀಂ ಕೋರ್ಟ್ ಸೂಚಿಸಿದ ನಿಯಮಾವಳಿಗಳ ಪ್ರಕಾರ ಚಿತ್ರಮಂದಿರದವರು ಸೂಕ್ತ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ, ಆದ್ದರಿಂದ ಈ ಹಂತದಲ್ಲಿ ಯಾವುದೇ ತಡೆಯಾಜ್ಞೆ ನೀಡಬಾರದು ಎಂದು ಪೀಠಕ್ಕೆ ಮನವಿ ಮಾಡಿದರು.
ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠವು, ಸುಪ್ರೀಂ ಕೋರ್ಟ್ ಸೂಚನೆಯಂತೆ ತಕ್ಷಣವೇ ಅಗತ್ಯ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಊರ್ವಶಿ ಚಿತ್ರಮಂದಿರದವರಿಗೆ ಸೂಚಿಸಿದೆ. ಜೊತೆಗೆ ವಿಚಾರಣೆಯನ್ನು ಮಂಗಳವಾರಕ್ಕೆ (ಆಗಸ್ಟ್ 25) ಮುಂದೂಡಿದ್ದು, ಅಲ್ಲಿಯವರೆಗೆ ಚಿತ್ರಮಂದಿರವನ್ನು ನೆಲಸಮಗೊಳಿಸುವುದಾಗಲಿ ಅಥವಾ ಯಾವುದೇ ಸಾಮಗ್ರಿಗಳನ್ನು ತೆರವುಗೊಳಿಸುವುದಾಗಲಿ ಮಾಡಬಾರದು ಎಂದು ಆದೇಶಿಸಿದೆ.
ಇದನ್ನೂ ಓದಿ: ‘ಟಾಕ್ಸಿಕ್’ಕ್ಕೂ ಪ್ರದರ್ಶನಕ್ಕೂ ಮೊದಲೇ ಐಕಾನಿಕ್ ‘ಊರ್ವಶಿ’ ಥಿಯೇಟರ್ ನೆಲಸಮ
ರಾಜ್ಯದ ದೊಡ್ಡ ಚಿತ್ರಮಂದಿರಗಳಲ್ಲಿ ‘ಊರ್ವಶಿ’ ಕೂಡ ಒಂದಾಗಿತ್ತು. ಸಾವಿರಕ್ಕೂ ಅಧಿಕ ಆಸನಗಳಿರುವ ಈ ಚಿತ್ರಮಂದಿರದಲ್ಲಿ 5 ಸಾವಿರಕ್ಕೂ ಅಧಿಕ ಸಿನಿಮಾಗಳು ತೆರೆಕಂಡಿವೆ. ಹಲವಾರು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಸಿನಿಮಾ ಇತಿಹಾಸಕ್ಕೆ ಸಂಬಂಧಿಸಿದ ಅನೇಕ ನೆನಪುಗಳು ಈ ಚಿತ್ರಮಂದಿರದ ಜೊತೆ ಬೆಸೆದುಕೊಂಡಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.