100 ಕೋಟಿ ಕ್ಲಬ್ ಸೇರಿದ ‘ವಿಶ್ವನಾಥ್ ಆ್ಯಂಡ್ ಸನ್ಸ್’; ಸೂರ್ಯ ಖಾತೆಗೆ ಮತ್ತೊಂದು ಹಿಟ್
ಸೂರ್ಯ, ಮಮಿತಾ ಬೈಜು, ರಾಧಿಕಾ ಶರತ್‌ಕುಮಾರ್, ರವೀನಾ ಟಂಡನ್ ಮುಂತಾದವರು ನಟಿಸಿರುವ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಭಾರತದಲ್ಲೇ 100 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಯಶಸ್ಸು ಸಾಧಿಸಿದೆ. ಕೌಟುಂಬಿಕ ಕಥಾಹಂದರದ ಈ ಸಿನಿಮಾಗೆ ಜನರ ಮೆಚ್ಚುಗೆ ಸಿಕ್ಕಿದೆ.

ಸೂರ್ಯ (Suriya) ಅಭಿನಯದ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡುವ ಮೂಲಕ ಭರ್ಜರಿ ಮೈಲಿಗಲ್ಲು ಸಾಧಿಸಿದೆ. ಇದರೊಂದಿಗೆ ‘ಕರುಪ್ಪು’ ಮತ್ತು ‘ಜನ ನಾಯಕನ್’ ನಂತರ 2026ರಲ್ಲಿ ಈ ಸಾಧನೆ ಮಾಡಿದ ತಮಿಳಿನ 3ನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಗಸ್ಟ್ 14ರಂದು ಸ್ವಾತಂತ್ರ್ಯ ದಿನಾಚರಣೆಯ ವಾರಾಂತ್ಯದ ಅಂಗವಾಗಿ ವಿಶ್ವದಾದ್ಯಂತ ‘ವಿಶ್ವನಾಥ್ ಆ್ಯಂಡ್ ಸನ್ಸ್’ (Vishwanath and Sons) ಸಿನಿಮಾ ಬಿಡುಗಡೆ ಆಗಿತ್ತು.
ಕೌಟುಂಬಿಕ ಮನರಂಜನಾ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಸಿನಿಮಾ ಎರಡನೇ ಭಾನುವಾರ (10ನೇ ದಿನ) ಭಾರತದಲ್ಲಿ 7.30 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರಿಂದಾಗಿ ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಗಳಿಕೆ 100.65 ಕೋಟಿ ರೂಪಾಯಿ ಹಾಗೂ ಗ್ರಾಸ್ ಕಲೆಕ್ಷನ್ 116.42 ಕೋಟಿ ರೂಪಾಯಿಗೆ ತಲುಪಿದೆ. ವಿದೇಶಿ ಮಾರುಕಟ್ಟೆಯಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ.
ವಿದೇಶದಲ್ಲಿ 10ನೇ ದಿನ 3 ಕೋಟಿ ರೂಪಾಯಿ ಗಳಿಸುವ ಮೂಲಕ ಒಟ್ಟು ವಿದೇಶಿ ಗಳಿಕೆಯನ್ನು 57.50 ಕೋಟಿ ರೂಪಾಯಿಗೆ ಹೆಚ್ಚಿಸಿಕೊಂಡಿದೆ. ಪ್ರಸ್ತುತ ವಿಶ್ವದಾದ್ಯಂತ ಈ ಚಿತ್ರದ ಒಟ್ಟು ಗ್ರಾಸ್ ಕಲೆಕ್ಷನ್ 173.92 ಕೋಟಿ ರೂಪಾಯಿ ಆಗಿದೆ ಎಂದು ಸ್ಯಾಕ್‌ನಿಲ್ಕ್ ವರದಿ ತಿಳಿಸಿದೆ. ಇದೇ ವರ್ಷ ಸೂರ್ಯ ನಟನೆಯ ‘ಕರುಪ್ಪು’ ಸಿನಿಮಾ ಕೂಡ ಭಾರತದಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು.
‘ಕರುಪ್ಪು’ ಬಿಟ್ಟರೆ ದಳಪತಿ ವಿಜಯ್ ನಟನೆಯ ‘ಜನ ನಾಯಕನ್’ ಕೂಡ ಭಾರತದಲ್ಲಿ 197 ಕೋಟಿ ರೂಪಾಯಿ ನೆಟ್ ಹಾಗೂ ಜಾಗತಿಕವಾಗಿ 324 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಈಗ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಸಿನಿಮಾ ಭಾರತದಲ್ಲಿ 100.65 ಕೋಟಿ ರೂಪಾಯಿ ನೆಟ್ ಹಾಗೂ ವಿಶ್ವದಾದ್ಯಂತ 173.92 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಇದನ್ನೂ ಓದಿ: ‘ಡಿಸಿ’ ಬ್ಲಾಕ್ ಬಸ್ಟರ್: ಅಪರೂಪದ ದಾಖಲೆ ಬರೆದ ಲೋಕೇಶ್ ಕನಕರಾಜ್
ವೆಂಕಿ ಅಟ್ಲೂರಿ ಅವರು ‘ವಿಶ್ವನಾಥ್ ಆ್ಯಂಡ್ ಸನ್ಸ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ತಂದೆಯಾಗಲು ಬಯಸುವ ನಾಯಕನ ಜೀವನದಲ್ಲಿ ನವಜಾತ ಮಗನ ಆರೋಗ್ಯ ಸಮಸ್ಯೆ ಹೊಸ ತಿರುವು ನೀಡುತ್ತದೆ. ಈ ಸಂದರ್ಭದಲ್ಲಿ ಬಾಡಿಗೆ ತಾಯಿಯ ಜೊತೆ ಬೆಳೆಯುವ ಭಾವನಾತ್ಮಕ ಸಂಬಂಧ, ಪ್ರೀತಿ ಮತ್ತು ಕುಟುಂಬದ ಮೌಲ್ಯಗಳನ್ನು ಈ ಚಿತ್ರದಲ್ಲಿ ಮನಮುಟ್ಟುವಂತೆ ತೋರಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




