ಬಾಲಿವುಡ್ ಇಂಡಸ್ಟ್ರಿ ಉಳಿದ ಸಿನಿಮಾ ಇಂಡಸ್ಟ್ರಿಗಿಂತ ಕೊಂಚ ಭಿನ್ನವೇ. ಕನ್ನಡ ಸೇರಿದಂತೆ ದಕ್ಷಿಣದ ಬಹುತೇಕ ಸಿನಿಮಾ ಇಂಡಸ್ಟ್ರಿಗಳಲ್ಲಿ ಯಾವುದೇ ಹಿನ್ನೆಲೆ ಇಲ್ಲದೆ ಬಂದು ಸ್ಟಾರ್ ಆಗಿ ಮೆರೆದ ಸಾಕಷ್ಟು ನಟರಿದ್ದಾರೆ. ಬಾಲಿವುಡ್ನಲ್ಲೂ ಈ ರೀತಿ ಇಲ್ಲವೆಂದಲ್ಲ. ಆದರೆ, ಉಳಿದುಕೊಂಡವರು ಬೆರಳೆಣಿಕೆ ಮಂದಿ ಮಾತ್ರ. ಬಾಲಿವುಡ್ನ ದೊಡ್ಡ ತಲೆಗಳಿಂದಾಗಿ ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟರು ಎನ್ನುವ ಮಾತಿದೆ. ಈಗ ಕಾರ್ತಿಕ್ ಆರ್ಯನ್ಗೂ ಸೈಡ್ಲೈನ್ ಆಗುವ ಭಯ ಕಾಡುತ್ತಿದೆ.
ಕಾರ್ತಿಕ್ ಆರ್ಯನ್ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದವರು. ಆದಾಗ್ಯೂ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗಿದೆ. ಕರಣ್ ಜೋಹರ್ ನಿರ್ಮಾಣದ ‘ದೋಸ್ತಾನಾ 2’ ಸಿನಿಮಾದಲ್ಲಿ ಕಾರ್ತಿಕ್ ನಟಿಸಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಕರಣ್ ಹಾಗೂ ಕಾರ್ತಿಕ್ ನಡುವೆ ಉಂಟಾದ ಸಣ್ಣ ಕಿರಿಕ್ನಿಂದ ಕಾರ್ತಿಕ್ ಹೊರ ನಡೆದಿದ್ದರು. ಇದಾದ ನಂತರದಲ್ಲಿ ಕಾರ್ತಿಕ್ಗೆ ಅದೃಷ್ಟ ಕೈ ಕೊಟ್ಟಿದೆ.
ಶಾರುಖ್ ಖಾನ್ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಅಡಿಯಲ್ಲಿ ಸಿದ್ಧವಾಗುತ್ತಿದ್ದ ಸಿನಿಮಾದಲ್ಲಿ ಕಾರ್ತಿಕ್ ನಟಿಸಬೇಕಿತ್ತು. ಆದರೆ, ಅಲ್ಲಿಂದ ಅವರಿಗೆ ಗೇಟ್ ಪಾಸ್ ನೀಡಲಾಯಿತು. ಈಗ ಅವರ ಕೈನಲ್ಲಿ ‘ಧಮಾಕಾ’ ಹಾಗೂ ‘ಭೂಲ್ ಭುಲಯ್ಯಾ 2’ ಸಿನಿಮಾ ಬಿಟ್ಟು ಮತ್ತಾವುದೇ ಚಿತ್ರಗಳಿಲ್ಲ. ಮೂಲಗಳ ಪ್ರಕಾರ ಕಾರ್ತಿಕ್ಗೆ ಯಾವುದೇ ದೊಡ್ಡ ಮಟ್ಟದ ಆಫರ್ಗಳು ಕೂಡ ಬರುತ್ತಿಲ್ಲವಂತೆ.
ಸುಶಾಂತ್ ಸಿಂಗ್ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದವರು. ಆದಾಗ್ಯೂ ಸ್ಟಾರ್ ಆಗಿ ಮೆರೆದರು. ಆದರೆ, ಅವರನ್ನು ಎಲ್ಲರೂ ಸೈಡ್ಲೈನ್ ಮಾಡಿದರು ಎನ್ನುವ ಆರೋಪ ಇದೆ. ಈಗ ಕಾರ್ತಿಕ್ ಆರ್ಯನ್ಗೂ ಇದೇ ರೀತಿ ಆದರೂ ಅಚ್ಚರಿ ಇಲ್ಲ ಎಂದು ಅಭಿಮಾನಿಗಳು ಆತಂಕ ಹೊರ ಹಾಕುತ್ತಿದ್ದಾರೆ. ಇನ್ನು, ಈ ಪರಿಸ್ಥಿತಿಯನ್ನು ಕಾರ್ತಿಕ್ ಸಮರ್ಥವಾಗಿ ನಿಭಾಯಿಸುತ್ತಾರಾ ಎನ್ನುವುದು ಸದ್ಯದ ಪ್ರಶ್ನೆ.
ಇದನ್ನೂ ಓದಿ:
ಕಾರ್ತಿಕ್ ಆರ್ಯನ್ಗೆ ಗೇಟ್ ಪಾಸ್ ಕೊಟ್ಟ ಬೆನ್ನಲ್ಲೇ ಕರಣ್ ಜೋಹರ್ಗೆ ಬಿಗ್ ಶಾಕ್
ಸುಶಾಂತ್ ಸಿಂಗ್ ರಜಪೂತ್ ರೀತಿಯೇ ಕಾರ್ತಿಕ್ ಆರ್ಯನ್ಗೆ ಅನ್ಯಾಯ ಆಗಲು ಕತ್ರಿನಾ ಕಾರಣವೇ?