ಲೋ ಬಜೆಟ್ನಲ್ಲಿ ಸೂಪರ್ ಹಿಟ್ ಕೊಟ್ಟ ನಿರ್ದೇಶಕನಿಗೆ ಜೊತೆಯಾದ ದೊಡ್ಡ ನಿರ್ಮಾಣ ಸಂಸ್ಥೆ
2018 Malayalam Movie: ಕಡಿಮೆ ಬಜೆಟ್ನಲ್ಲಿ ಸೂಪರ್ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕನ ಜೊತೆ ದೊಡ್ಡ ನಿರ್ಮಾಣ ಸಂಸ್ಥೆ ಕೈಜೋಡಿಸಿದೆ.

ದೊಡ್ಡ ಬಜೆಟ್ (Big Budget) ಸಿನಿಮಾಗಳು ನೂರಾರು ಕೋಟಿ ಮಾಡುವುದು ದೊಡ್ಡ ವಿಷಯವಾಗಿ ಉಳಿದಿಲ್ಲ. ಅದು ಸಾಧನೆ ಎಂದೂ ಅನಿಸಿಕೊಳ್ಳುವುದಿಲ್ಲ. ದೊಡ್ಡ ಬಜೆಟ್ ಸಿನಿಮಾದಲ್ಲಿ ದೊಡ್ಡ ಸ್ಟಾರ್ಗಳಿರುತ್ತಾರೆ. ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತದೆ. ನಿರ್ಮಾಣ ಗುಣಮಟ್ಟ, ಸಿನಿಮಾದ ಮೇಕಿಂಗ್ ಅದ್ಭುತವಾಗಿರುತ್ತದೆ, ದೊಡ್ಡ ಒಟಿಟಿ (OTT) ಸಂಸ್ಥೆಗಳು ಮೊದಲೇ ಅಡ್ವಾನ್ಸ್ ಕೊಟ್ಟು ಖರೀದಿಗಿ ಕಾದಿರುತ್ತವೆ. ಆದರೆ ಕಡಿಮೆ ಬಜೆಟ್ನಲ್ಲಿಯೂ ಭಾರಿ ಬಜೆಟ್ ಸಿನಿಮಾಗಳಂತೆ ಗುಣಮಟ್ಟದ ಸಿನಿಮಾ ಮಾಡುವುದು ಕಲೆ ಅದು ಕೆಲವರಿಗಷ್ಟೆ ಸಿದ್ಧಿಸಿದೆ. ಅಂಥಹವರಲ್ಲಿ ಒಬ್ಬರು ಜೂಡಾ ಆಂಥನಿ ಜೋಸೆಫ್. ಈಗ ಅವರಿಗೆ ದೊಡ್ಡ ನಿರ್ಮಾಣ (Production) ಜೊತೆಯಾಗಿದ್ದು, ಸಿನಿಮಾ ಮಾಡಿ ಹಣ ನಾವು ಕೊಡುತ್ತೇವೆ ಎಂದಿದೆ!
ಭಾರತೀಯ ಚಿತ್ರರಂಗದ ದುಬಾರಿ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಲೈಕಾ ಈಗ ಮಲಯಾಳಂನ ಪ್ರತಿಭಾನ್ವಿತ ಸಿನಿಮಾ ನಿರ್ದೇಶಕ ಜೂಡಾ ಆಂಥನಿ ಜೋಸೆಫ್ ಜೊತೆಗೂಡಿದೆ. ಈ ಹಿಂದೆ ಇಂಡಿಯನ್, ವಡಾ ಚೆನ್ನೈ, ದರ್ಬಾರ್, ಖೈದಿ-150, ಪೊನ್ನಿಯಿನ್ ಸೆಲ್ವನ್ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ಲೈಕಾ ಈಗ ಜೂಡಾ ಆಂಥನಿ ಜೋಸೆಫ್ ಜೊತೆ ಕೈ ಜೋಡಿಸಿರುವುದು ಸಿನಿಮಾ ಪ್ರೇಮಿಗಳ ಕಾತರಕ್ಕೆ ಕಾರಣವಾಗಿದೆ. ಅಂದಹಾಗೆ ಜೂಡಾ ಆಂಥನಿ ಜೋಸೆಫ್ ಮಲಯಾಳಂ ಇತ್ತೀಚೆಗಿನ ಬ್ಲಾಕ್ ಬಸ್ಟರ್ ಸಿನಿಮಾ 2018 ನಿರ್ದೇಶಕ.
ಇದನ್ನೂ ಓದಿ:200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಮೊದಲ ಮಲಯಾಳಂ ಚಿತ್ರ ‘2018’; ಅಂಥದ್ದೇನಿದೆ ಈ ಸಿನಿಮಾದಲ್ಲಿ?
ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾದಾಗ ಅಲ್ಲಿನ ಜನರ ಮಾನವೀಯ ಮುಖದ ಅನಾವರಣವಾಗಿತ್ತು. ಆ ಸಣ್ಣ ಘಟನೆಗಳನ್ನೇ ಇರಿಸಿಕೊಂಡು ಜೂಡಾ ಆಂಥನಿ ಜೋಸೆಫ್ ‘2018’ ಸಿನಿಮಾ ಮಾಡಿದ್ದರು. ಟೊವಿನೋ ಥಾಮಸ್, ಅಪರ್ಣಾ ಬಾಲಮುರಳಿ, ಕುಂಚಿಕೂ ಬೂಬನ್, ಲಾಲ್, ವಿನಿತ್, ಇನ್ನೂ ಹಲವು ನಟರನ್ನು ಹಾಕಿಕೊಂಡು ಕೇವಲ 20 ಕೋಟಿ ಬಜೆಟ್ನಲ್ಲಿ ಅದ್ಭುತವಾದ ಸಿನಿಮಾ ಮಾಡಿದ್ದಾರೆ ಜೂಡಾ ಆಂಥನಿ ಜೋಸೆಫ್. ನೂರಾರು ಕೋಟಿ ಖರ್ಚು ಮಾಡಿದ ಸಿನಿಮಾಗಳಲ್ಲಿಯೂ ಕಾಣಲು ಸಿಗದ ದೃಶ್ಯಗಳನ್ನು 2018 ಗಾಗಿ ಜೂಡಾ ಆಂಥನಿ ಜೋಸೆಫ್ ಸೆರೆಹಿಡಿದಿದ್ದರು. ಇದು ಹಲವು ಸಿನಿಮಾ ಕರ್ಮಿಗಳ ಹುಬ್ಬೇರುವಂತೆ ಮಾಡಿತ್ತು. ಅಂತೆಯೇ ಈ ಸಿನಿಮಾ ಕೇರಳ ಚಿತ್ರೋದ್ಯಮದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿ ಗಳಿಕೆಯಲ್ಲಿ ದಾಖಲೆ ಬರೆಯಿತು.
ಇದೀಗ ಈ ಪ್ರತಿಭಾವಂತ ನಿರ್ದೇಶಕನೊಟ್ಟಿಗೆ ದೊಡ್ಡ ಬಜೆಟ್ ಸಿನಿಮಾಗಳ ನಿರ್ಮಾಣ ಸಂಸ್ಥೆಯಾದ ಲೈಕಾ ಕೈಜೋಡಿಸಿದ್ದು, ಹೊಸ ಸಿನಿಮಾದ ಘೋಷಣೆ ಮಾಡಿದೆ. ಶೀಘ್ರವೇ ಸಿನಿಮಾದ ತಾರಾಗಣ, ಹೆಸರು ಇನ್ನಿತರೆ ಅಂಶಗಳನ್ನು ಬಹಿರಂಗಪಡಿಸಲಿದೆ ಲೈಕಾ. ಈ ನಿರ್ಮಾಣ ಸಂಸ್ಥೆ ಪ್ರಸ್ತುತ ಕಮಲ್ ಹಾಸನ್ ನಟನೆಯ ಇಂಡಿಯನ್-2, ರಜನಿಕಾಂತ್ ಜೊತೆ ಲಾಲ್ ಸಲಾಂ ಸೇರಿದಂತೆ ಹಲವು ಚಿತ್ರಗಳಿಗೆ ಬಂಡವಾಳ ಹೂಡಿದೆ. ತಾವು ದೊಡ್ಡ ಸ್ಟಾರ್ ನಟ ಹಾಗೂ ನಿರ್ದೇಶಕರೊಟ್ಟಿಗೆ ಮಾತ್ರವಲ್ಲ ಪ್ರತಿಭಾವಂತ ಯುವ ನಿರ್ದೇಶಕರೊಟ್ಟಿಗೂ ಕೆಲಸ ಮಾಡುತ್ತೇವೆ, ಪ್ರತಿಭೆಗಳನ್ನು ಬೆಂಬಲಿಸುತ್ತೇವೆ ಎಂದು ಲೈಕಾದ ಸುಭಾಷ್ ಕರಣ್ ಸೂಚ್ಯಗೊಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




