ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಕರೀನಾ ಕಪೂರ್ಗೆ ನೊಟೀಸ್
ಬಾಲಿವುಡ್ ನಟಿ ಕರೀನಾ ಕಪೂರ್ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರೀನಾ ಕಪೂರ್ ಕೆಲ ವರ್ಷಗಳ ಹಿಂದೆ ಬರೆದಿದ್ದ ಪುಸ್ತಕವೊಂದಕ್ಕೆ ಸಂಬಂಧಿಸಿದಂತೆ ಇದೀಗ ನ್ಯಾಯಾಲಯವು ಕರೀನಾಗೆ ನೊಟೀಸ್ ನೀಡಿದ್ದು, ಉತ್ತರ ನೀಡುವಂತೆ ಸೂಚಿಸಿದೆ.
ಬಾಲಿವುಡ್ ಬೆಬೊ ಕರೀನಾ ಕಪೂರ್ (Kareena Kapoor) ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಕರೀನಾ ಕಪೂರ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ದೂರು ದಾಖಲಾಗಿದ್ದು, ವಿಚಾರಣೆ ನಡೆಸಿರುವ ಮಧ್ಯ ಪ್ರದೇಶ ನ್ಯಾಯಾಲಯವು ಕರೀನಾ ಕಪೂರ್ ಅವರಿಗೆ ನೊಟೀಸ್ ಜಾರಿ ಮಾಡಿದ್ದು, ನಿರ್ದಿಷ್ಟ ದಿನದ ಒಳಗಾಗಿ ಉತ್ತರ ನೀಡುವಂತೆ ಸೂಚಿಸಿದೆ. ಕರೀನಾ ಕಪೂರ್ ಕೆಲ ವರ್ಷಗಳ ಹಿಂದೆ ಬರೆದಿದ್ದ ಪುಸ್ತಕದಿಂದಾಗಿ ಅವರೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೂರು ವರ್ಷಗಳ ಹಿಂದೆ ನಟಿ ಕರೀನಾ ಕಪೂರ್, ತಾಯಿಯಾದ ತಮ್ಮ ಅನುಭವ, ಗರ್ಭ ಧರಿಸಿದ್ದಾಗ ತೆಗೆದುಕೊಂಡ ಎಚ್ಚರಿಕೆಗಳು ಇನ್ನಿತರೆ ಅನುಭವವಗಳನ್ನು ಸೇರಿಸಿ ‘ಕರೀನಾ ಕಪೂರ್ ಖಾನ್, ಪ್ರೆಗ್ನೆನ್ಸಿ ಬೈಬಲ್’ ಹೆಸರಿನ ಪುಸ್ತಕ ಬರೆದು ಪ್ರಕಟಿಸಿದ್ದರು. ಆ ಪುಸ್ತಕದ ಸಹಸ್ರಾರು ಪ್ರತಿಗಳು ಮಾರಾಟವಾಗಿದ್ದವು. ಪುಸ್ತಕದಲ್ಲಿ ಗರ್ಭಧರಿಸಿದ್ದಾಗಿನ ಅನುಭವಗಳು ಇನ್ನಿತರೆ ವಿಷಯಗಳನ್ನು ಅವರು ಹಂಚಿಕೊಂಡಿದ್ದರು. ಜೊತೆಗೆ ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ ಬಗ್ಗೆಯೂ ಕರೀನಾ ಕಪೂರ್ ಬರೆದಿದ್ದರು. ಕರೀನಾರ ಈ ಪ್ರಯತ್ನದ ಬಗ್ಗೆ ಆಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಈಗ ಇದೇ ಪುಸ್ತಕ ಅವರನ್ನು ವಿವಾದಕ್ಕೆ ದೂಡಿದೆ.
ಕರೀನಾ ಕಪೂರ್, ತಮ್ಮ ಪುಸ್ತಕಕ್ಕೆ ನೀಡಿರುವ ಹೆಸರು ವಿವಾದಕ್ಕೆ ಕಾರಣವಾಗಿದೆ. ಪುಸ್ತಕದಲ್ಲಿ ‘ಬೈಬಲ್’ ಎಂಬ ಪದ ಬಳಸಿರುವ ಬಗ್ಗೆ ವಕೀಲ ಕ್ರಿಸ್ಟೊಫರ್ ಆಂಟೊನಿ ಎಂಬುವರು ಕರೀನಾ ವಿರುದ್ಧ ಮಧ್ಯ ಪ್ರದೇಶ ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದು, ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್ ಹೆಸರನ್ನು ತಮ್ಮ ಪುಸ್ತಕಕ್ಕೆ ಇರಿಸುವ ಮೂಲಕ ಕ್ರೈಸ್ತ ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ನಟಿ ಕರೀನಾ ಕಪೂರ್ಗೆ ನೊಟೀಸ್ ಜಾರಿ ಮಾಡಿದ್ದು, ಉತ್ತರ ನೀಡುವಂತೆ ಸೂಚಿಸಿದೆ.
ಇದನ್ನೂ ಓದಿ:43ರ ಪ್ರಾಯದಲ್ಲೂ ಭರ್ಜರಿ ಡಿಮ್ಯಾಂಡ್ ಉಳಿಸಿಕೊಂಡ ಕರೀನಾ ಕಪೂರ್
ಕರೀನಾ ಕಪೂರ್, ತಮ್ಮ ಪುಸ್ತಕದಲ್ಲಿ ‘ಬೈಬಲ್’ ಪದವನ್ನು ಅಗೌರವಪೂರ್ವಕವಾಗಿ ಬಳಸಿದ್ದಾರೆ. ಬೈಬಲ್, ವಿಶ್ವದಾದ್ಯಂತ ಇರುವ ಕ್ರಿಶ್ಚಿಯನ್ನರ ಪವಿತ್ರ ಗ್ರಂಥ, ಅದನ್ನು ತಮ್ಮ ಪ್ರೆಗ್ನೆನ್ಸಿ ಅನುಭವ ಹಂಚಿಕೊಳ್ಳಲು ಬಳಸಿದ್ದು ಸರಿಯಲ್ಲ. ಬೈಬಲ್ ಪದವನ್ನು ಅಗೌರವಪೂರ್ವಕವಾಗಿ ಕರೀನಾ ಕಪೂರ್ ತಮ್ಮ ಪುಸ್ತಕದಲ್ಲಿ ಬಳಸಿದ್ದಾರೆ. ಇದರಿಂದಾಗಿ ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ’ ಎಂದು ವಕೀಲ ಕ್ರಿಸ್ಟೊಫರ್ ಆಂಟೊನಿ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಕರೀನಾ ಕಪೂರ್ ನಟಿಸಿರುವ ‘ಕ್ರೂವ್’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಪ್ರಸ್ತುತ ಅವರು ‘ಸಿಂಘಂ ರಿಟರ್ನ್ಸ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ರೋಹಿತ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದು, ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ಸಹ ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Sat, 11 May 24