ಚಿರಂಜೀವಿ, ತ್ರಿಷಾ ವಿರುದ್ಧ ಮಾನನಷ್ಟ ಮೊಕದ್ದಮೆ: ನಟನಿಗೆ ಕೋರ್ಟ್ ತಪರಾಕಿ
Chiranjeevi-Trisha: ತ್ರಿಷಾ ವಿರುದ್ಧ ಕೀಳು ಹೇಳಿಕೆ ನೀಡಿದ್ದ ಮನ್ಸೂರ್ ಅಲಿ ಖಾನ್ ಬಳಿಕ ತ್ರಿಷಾ, ಚಿರಂಜೀವಿ, ಖುಷ್ಬು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ನ್ಯಾಯಮೂರ್ತಿಗಳು ಮನ್ಸೂರ್ ನಡೆಯನ್ನು ಕಠು ಪದಗಳಲ್ಲಿ ಟೀಕಿಸಿದ್ದಾರೆ.
ನಟಿ ತ್ರಿಷಾ (Trisha) ವಿರುದ್ಧ ನೀಚವಾಗಿ ಮಾತನಾಡಿದ್ದ ನಟ ಮನ್ಸೂರ್ ಖಾನ್ಗೆ (Mansoor Ali Khan) ಮದ್ರಾಸ್ ಹೈಕೋರ್ಟ್ ತಪರಾಕಿ ಹಾಕಿದೆ. ಮನ್ಸೂರ್ ಅಲಿ ಖಾನ್ರ ನೀಚ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ತ್ರಿಷಾ ಹಾಗೂ ತ್ರಿಷಾಗೆ ಬೆಂಬಲ ನೀಡಿದ್ದ ನಟ ಮೆಗಾಸ್ಟಾರ್ ಚಿರಂಜೀವಿ, ನಟಿ ಖುಷ್ಬು ವಿರುದ್ಧ ಮನ್ಸೂರ್ ಅಲಿ ಖಾನ್ ಮಾನನಷ್ಟ ಮೊಕದ್ದಮೆ ಹೂಡಿದ್ದರು, ಈ ಪ್ರಕರಣದ ವಿಚಾರಣೆ ವೇಳೆ ಮನ್ಸೂರ್ ಖಾನ್ಗೆ ನ್ಯಾಯಮೂರ್ತಿ ತಪರಾಕಿ ಹಾಕಿದ್ದಾರೆ.
ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ಎನ್ ಸತೀಶ್ ಕುಮಾರ್, ‘‘ಈ ಪ್ರಕರಣದಲ್ಲಿ ನಟಿ ತ್ರಿಷಾ ನ್ಯಾಯಾಲಯದ ಮೆಟ್ಟಿಲೇರಬೇಕಿತ್ತು, ಮನ್ಸೂರ್ ಅಲಿ ಖಾನ್ ಆ ರೀತಿಯ ಕೀಳು ಮಟ್ಟದ ಮಾತುಗಳನ್ನು ನಟಿಯ ವಿರುದ್ಧ ಆಡಿದ್ದಾರೆ. ಒಬ್ಬ ನಟ, ಬಹಿರಂಗವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅರಿತಿರಬೇಕು, ಸಾವಿರಾರು ಜನ ಆತನನ್ನು ನೋಡುತ್ತಿರುತ್ತಾರೆ ಹೀಗಿರುವಾಗ ಹೆಚ್ಚಿನ ಜವಾಬ್ದಾರಿ ನಟನ ಮೇಲಿರುತ್ತದೆ’ ಎಂದಿದ್ದಾರೆ.
ಖಾನ್ ಹೆಸರು ಆಗಾಗ್ಗೆ ಇಂಥಹಾ ವಿವಾದಗಳಲ್ಲಿ ಕೇಳಿ ಬರುತ್ತಲೇ ಇರುತ್ತದೆ. ಖಾನ್, ಮಾಧ್ಯಮಗಳೊಂದಿಗೆ ಸಂವಹನ ನಡೆಸುವಾಗ ಆಡುವ ಮಾತುಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಎಂದು ನ್ಯಾಯಾಧೀಶರು ಸೂಚಿಸಿದರು. ಅಲ್ಲದೆ, ಈಗ ಖಾನ್ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಬಂಧನದಿಂದ ಪಾರಾಗಲು ಖಾನ್ ಈ ಮಾನನಷ್ಟ ಮೊಕದ್ದಮೆ ಹೂಡಿದ್ದಾರಾ? ಎಂಬ ಅನುಮಾನವನ್ನೂ ವ್ಯಕ್ತಪಡಿಸಿದರು.
ಇದನ್ನೂ ಓದಿ:ರೇಪ್ ಕಮೆಂಟ್: ಕೊನೆಗೂ ನಟಿ ತ್ರಿಷಾ ಬಳಿ ಕ್ಷಮೆ ಕೇಳಿದ ಮನ್ಸೂರ್ ಅಲಿ ಖಾನ್
ಚೆನ್ನೈನ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದ ಮನ್ಸೂರ್ ಖಾನ್, ‘‘ಲಿಯೋ’ ಸಿನಿಮಾನಲ್ಲಿ ತ್ರಿಷಾ ಜೊತೆ ಬೆಡ್ರೂಂ ಸೀನ್ ಇರುತ್ತದೆ ಎಂದುಕೊಂಡಿದ್ದೆ ಆದರೆ ಅವರು ತ್ರಿಷಾ ಮುಖವನ್ನು ಸಹ ನನಗೆ ತೋರಿಸಲಿಲ್ಲ. ಬೆಡ್ರೂಂ ಇದ್ದಿದ್ದರೆ ಹಿಂದೆ ರೋಜಾ, ಶ್ರೀದೇವಿ ಅವರುಗಳನ್ನು ಎತ್ತಿ ಬೆಡ್ ಮೇಲೆ ಎಸೆದಂತೆ ಎಸೆದು ‘ಫರ್ಮಾರ್ಮ್’ ಮಾಡಿರುತ್ತಿದ್ದೆ’’ ಎಂದಿದ್ದರು.
ಮನ್ಸೂರ್ ಅಲಿ ಖಾನ್ರ ಈ ಹೇಳಿಕೆಯನ್ನು ಮೆಗಾಸ್ಟಾರ್ ಚಿರಂಜೀವಿ, ನಟಿ, ಬಿಜೆಪಿ ನಾಯಕಿ ಖುಷ್ಬು, ನಿರ್ದೇಶಕ ಲೋಕೇಶ್ ಕನಗರಾಜ್, ಸಚಿವೆ ರೋಜಾ ಸೇರಿದಂತೆ ಇನ್ನೂ ಹಲವರು ಖಂಡಿಸಿದ್ದರು. ಆರಂಭದಲ್ಲಿ ಕ್ಷಮೆ ಕೇಳದೆ ಉದ್ಧಟತನ ಮೆರೆದ ಮನ್ಸೂರ್ ಆ ಬಳಿಕ ಕ್ಷಮೆ ಕೇಳಿದರಾದರೂ, ಬಳಿಕ ತ್ರಿಷಾ, ಚಿರಂಜೀವಿ, ಖುಷ್ಬು ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ