
ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಮಂಜು ವಾರಿಯರ್ ಅವರಿಗೆ ನಿರಂತರವಾಗಿ ಅಪಪ್ರಚಾರ ಮತ್ತು ತೇಜೋವಧೆ ಮಾಡುತ್ತಿದ್ದ ಆರೋಪದ ಮೇಲೆ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಹಾಗೂ ಇತರ ಇಬ್ಬರ ವಿರುದ್ಧ ಕೊಚ್ಚಿಯ ಮುನ್ಸಿಫ್ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದೆ. ಇದರ ಜೊತೆಗೆ ಸನಲ್ ಕುಮಾರ್ ಶಶಿಧರನ್ ಅವರು ಮಂಜು ವಾರಿಯರ್ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ವಿಷಯಗಳನ್ನು ಪ್ರಕಟಿಸದಂತೆ ನ್ಯಾಯಾಲಯವು ತಾತ್ಕಾಲಿಕ ತಡೆಆಜ್ಞೆ ನೀಡಿದೆ.
ಕೊಚ್ಚಿಯ ಮೂರನೇ ಹೆಚ್ಚುವರಿ ಮುನ್ಸಿಫ್ ನ್ಯಾಯಾಲಯದ ನ್ಯಾಯಾಧೀಶರಾದ ರೀಜಾ ಆರ್. ನಾಯರ್ ಅವರು ಈ ಅರ್ಜಿಯ ವಿಚಾರಣೆ ನಡೆಸಿ, ಸನಲ್ ಕುಮಾರ್ ಶಶಿಧರನ್, ಆನ್‌ಲೈನ್ ನ್ಯೂಸ್ ಪೋರ್ಟಲ್ ನಡೆಸುತ್ತಿರುವ ಶಾತನ್ ಸ್ಕರಿಯಾ ಮತ್ತು ಮೆಟಾ ಪ್ಲಾಟ್‌ಫಾರ್ಮ್ಸ್ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಸಿವಿಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 26ರ ಅಡಿಯಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿದ್ದು, ಮುಂದಿನ ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಲಾಗಿದೆ.
ಮಂಜು ವಾರಿಯರ್ ಬಗ್ಗೆ ಸುಳ್ಳು ವಿಷಯಗಳ ಪ್ರಸಾರ:
ನಟಿ ಮಂಜು ವಾರಿಯರ್ ಪರ ವಕೀಲರಾದ ಶಾಂತಿ ಎಂ. ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಪ್ರಕರಣದ ವಿವರಗಳನ್ನು ಹಂಚಿಕೊಂಡಿದ್ದಾರೆ. ‘ಸನಲ್ ಕುಮಾರ್ ಶಶಿಧರನ್ ಎಂಬ ವ್ಯಕ್ತಿ ನಿರಂತರವಾಗಿ ಮಂಜು ವಾರಿಯರ್ ಅವರ ತೇಜೋವಧೆ ಮಾಡುತ್ತಿದ್ದಾನೆ. ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಅಪಪ್ರಚಾರದ ವಿಷಯಗಳನ್ನು ಹರಿಬಿಡುತ್ತಿದ್ದಾನೆ. ಇದನ್ನು ತಡೆಯಲು ನಾವು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೆವು. ಕೋರ್ಟ್ ಈಗ ಆತನ ವಿರುದ್ಧ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ನಟಿಯ ವಿರುದ್ಧ ಯಾವುದೇ ರೀತಿಯ ಹೇಳಿಕೆ ನೀಡದಂತೆ ಸೂಚಿಸಿದೆ’ ಎಂದಿದ್ದಾರೆ.
ನಟಿಯ ತೇಜೋವಧೆ ಮಾಡುವ ರೀತಿಯಲ್ಲಿ ಪೋಸ್ಟ್ ಮಾಡಲಾಗಿರುವ ಎಲ್ಲಾ ನಿಂದನೀಯ ಮತ್ತು ಸುಳ್ಳು ವಿಷಯಗಳನ್ನು ಸಾಮಾಜಿಕ ಜಾಲತಾಣಗಳಿಂದ ತಕ್ಷಣವೇ ತೆಗೆದುಹಾಕುವಂತೆ ‘ಮೆಟಾ’ ಸಂಸ್ಥೆಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಸಿನಿಮಾ ಸೆಟ್ನಲ್ಲಿ ಗಾಯ, 5 ಕೋಟಿ ಪರಿಹಾರ ಕೇಳಿ ನೊಟೀಸ್ ಕಳಿಸಿದ ಮಲಯಾಳಂ ನಟಿ
ಸನಲ್ ಕುಮಾರ್ ಶಶಿಧರನ್ ಅವರು ಈಗ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಹೇಮಾ ಕಮಿಟಿ ವರದಿಯನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಬೇಕು. ವರದಿಯಲ್ಲಿ ಉಲ್ಲೇಖಿಸಲಾದ ಅಕ್ರಮಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕು. ಮಂಜು ವಾರಿಯರ್ ನೀಡಿರುವ ದೂರುಗಳ ಆಧಾರದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಎರಡು ಪ್ರಕರಣಗಳ ಹಿಂದಿರುವ ಪಿತೂರಿಯ ತನಿಖೆಯಾಗಬೇಕು ಎಂದು ಅವರು ಆಗ್ರಹಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.