‘ಮಹಾಮಂಡಲೇಶ್ವರಿ’ ಪಟ್ಟ ಪಡೆಯಲು 10 ಕೋಟಿ ರೂಪಾಯಿ ನೀಡಿದ ನಟಿ ಮಮತಾ?
ಮಮತಾ ಕುಲಕರ್ಣಿ ಅವರು ಕಿನ್ನರ ಅಖಾಡದಿಂದ ಮಹಾಮಂಡಲೇಶ್ವರ ಪಟ್ಟ ಪಡೆದುಕೊಂಡು ನಂತರ ವಾರದೊಳಗೆ ತೆಗೆದುಹಾಕಲ್ಪಟ್ಟಿದ್ದಾರೆ. ಈ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 10 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂಬ ಆರೋಪಕ್ಕೆ ಅವರು ಉತ್ತರಿಸಿದ್ದಾರೆ. ಅವರ ಆಧ್ಯಾತ್ಮಿಕ ಒಲವು ಮತ್ತು ಗ್ಲಾಮರ್ ಜೀವನದಿಂದ ಆಧ್ಯಾತ್ಮಕ್ಕೆ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆ.

ಮಮತಾ ಕುಲಕರ್ಣಿ ಅವರು ಸದ್ಯ ಸುದ್ದಿಯಲ್ಲಿ ಇದ್ದಾರೆ. ಅವರು ಕಿನ್ನರ ಅಖಾಡದಿಂದ ‘ಮಹಾಮಂಡಲೇಶ್ವರ’ ಪಟ್ಟ ಪಡೆದುಕೊಂಡಿದ್ದರು. ಇದಾದ ಒಂದೇ ವಾರದಲ್ಲಿ ಅವರನ್ನು ಅಖಾಡದಿಂದ ತೆಗೆದು ಹಾಕಲಾಯಿತು. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ಮಮತಾ ವಿರುದ್ಧ ಅನೇಕರು ಸಿಟ್ಟಾಗಿದ್ದಾರೆ. ಗ್ಲಾಮರ್ ಲೋಕದಲ್ಲಿ ಇದ್ದ ಅವರು ಈಗ ಅಧ್ಯಾತ್ಮದ ಕಡೆ ಒಲವು ತೋರಿಸಿದ್ದು ಏಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಅಲ್ಲದೆ, ‘ಮಹಾಮಂಡಲೇಶ್ವರ’ ಟೈಟಲ್ ಪಡೆಯಲು 10 ಕೋಟಿ ರೂಪಾಯಿ ನೀಡಿದ್ದರು ಎನ್ನುವ ಆರೋಪವೂ ಬಂದಿತ್ತು. ಇದಕ್ಕೆ ಅವರ ಕಡೆಯಿಂದ ಉತ್ತರ ಸಿಕ್ಕಿದೆ.
ಕಿನ್ನರ ಅಖಾಡ ಅಥವಾ ಕಿನ್ನರ ಅಖಾರ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಕೊಂಡಿರುವ ತೃತೀಯ ಲಿಂಗಿಗಳ ಸಂಘವಾಗಿದೆ. 2015 ರಲ್ಲಿ ಪ್ರಾರಂಭವಾದ ಕಿನ್ನರ ಅಖಾಡ ಇದೀಗ ನಟಿ ಮಮತಾ ಕುಲಕರ್ಣಿಯನ್ನು ತಮ್ಮ ಮಹಾಮಂಡಲೇಶ್ವರಿಯನ್ನಾಗಿ ನೇಮಕ ಮಾಡಿತ್ತು. ವಿರೋಧದ ಬಳಿಕ ಅವರನ್ನು ತೆಗೆದು ಹಾಕಲಾಯಿತು.
‘ಮಹಾಮಂಡಲೇಶ್ವರ’ ಬಿರುದನ್ನು ಅವರಿಗೆ ನೀಡಿದ್ದಕ್ಕೆ ಅನೇಕ ಧಾರ್ಮಿಕ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ರಾಮ್ದೇವ್ ಕೂಡ ಈ ಬಗ್ಗೆ ಅಪಸ್ವರ ತೆಗೆದಿದ್ದರು. ಗ್ಲಾಮರ್ ಲೋಕ ಹಾಗೂ ಅವರ ಬಗ್ಗೆ ಇರುವ ಕ್ರಿಮಿನಲ್ ಹಿಸ್ಟರಿ ಬಗ್ಗೆ ಅಪಸ್ವರ ತೆಗೆದಿದ್ದರು. ಈ ಎಲ್ಲಾ ಪ್ರಶ್ನೆಗೆ ಈಗ ಮಮತಾ ಅವರೇ ಉತ್ತರಿಸಿದ್ದಾರೆ.
ಕುಂಭಮೇಳದಿಂದ ಹೊರ ಬರುತ್ತಿದ್ದಂತೆ ರಜತ್ ಶರ್ಮಾ ನಡೆಸಿಕೊಡುವ ‘ಆಪ್ ಕಿ ಅದಾಲತ್’ ಕಾರ್ಯಕ್ರಮಕ್ಕೆ ಆಗಮಿಸಿದರು ಮಮತಾ. ಈ ವೇಳೆ ಅವರು ಬಾಬಾ ರಾಮ್ ದೇವ್ ಮೊದಲಾದವರ ಹೇಳಿಕೆಗೆ ಉತ್ತರಿಸಿದ್ದಾರೆ. ‘ಬಾಬಾ ರಾಮ್ದೇವ್ ಅವರಿಗೆ ಮಹಾಕಾಳ ಹಾಗೂ ಮಹಾಕಾಳಿ ಬಗ್ಗೆ ಭಯ ಇರಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಒಂದು ಕಾಲದ ಹಾಟ್ ನಟಿ ಈಗ ಸಾಧು ಸನ್ಯಾಸಿನಿ
ಬಾಬಾ ರಾಮ್ದೇವ್ ಆರೋಪ ಏನು?
‘ಒಂದು ದಿನದಲ್ಲಿ ಯಾರೂ ಸಂತತ್ವವನ್ನು ಸಾಧಿಸಲು ಸಾಧ್ಯವಿಲ್ಲ. ಇಂದಿನ ದಿನಗಳಲ್ಲಿ ಯಾರನ್ನಾದರೂ ಹಿಡಿದು ಮಹಾಮಂಡಲೇಶ್ವರಿಯಾಗಿ ಮಾಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.
10 ಕೋಟಿ ರೂಪಾಯಿ ಆರೋಪ
ಮಹಾಮಂಡಲೇಶ್ವರಿ ಬಿರುದು ಪಡೆಯಲು ಮಮತಾ ಕುಲಕರ್ಣಿ ಅವರು 10 ಕೋಟಿ ರೂಪಾಯಿ ನೀಡಿದ್ದಾರೆ ಎನ್ನುವ ಆರೋಪ ಇದೆ. ಆದರೆ, ಈ ಆರೋಪವನ್ನು ಅವರು ಒಪ್ಪಿಲ್ಲ. ಗುರುದಕ್ಷಿಣೆ ರೂಪದಲ್ಲಿ ಅವರು 2 ಲಕ್ಷ ರೂಪಾಯಿ ನೀಡಿದ್ದಾರೆ. ‘ನಾನು ಗುರುದಕ್ಷಿಣೆ ರೂಪದಲ್ಲಿ 2 ಲಕ್ಷ ರೂಪಾಯಿ ನೀಡಿದ್ದೇನೆ. ನನ್ನೆಲ್ಲ ಬ್ಯಾಂಕ್ ಖಾತೆ ಫ್ರೀಜ್ ಆಗಿದೆ. ಹೀಗಾಗಿ, ನಾನು ಬೇರೆಯವರಿಂದ ಹಣ ಪಡೆದು ಇದನ್ನು ನೀಡಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.