ಕಿರುತೆರೆಯಿಂದ ಹಿರಿತೆರೆಗೆ ಬಂದು ನೆಲೆ ಕಂಡುಕೊಂಡವರ ಸಂಖ್ಯೆ ದೊಡ್ಡದಿದೆ. ನಟಿ ಮೇಘಾ ಶೆಟ್ಟಿ (Megha Shetty) ಕೂಡ ಇದಕ್ಕೆ ಹೊರತಾಗಿಲ್ಲ. ‘ಜೊತೆ ಜೊತೆಯಲಿ’ ಧಾರಾವಾಹಿ (Jothe Jotheyali) ಮೂಲಕ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಈಗ ಹಿರಿತೆರೆಯಲ್ಲಿ ಅವರ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಇದರಿಂದ ಮೇಘಾ ಶೆಟ್ಟಿ ಸಖತ್ ಖುಷಿಪಟ್ಟಿದ್ದಾರೆ. ಈ ಖುಷಿಯಲ್ಲೇ ಅವರು ಟಿವಿ9 ಕನ್ನಡ ಡಿಜಿಟಲ್ ಜತೆ ಮಾತನಾಡಿದ್ದಾರೆ.
ಮೇಘಾ ಶೆಟ್ಟಿ ಅವರು ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರ ಮಾಡುತ್ತಿದ್ದಾರೆ. ಈಗ ಹಿರಿತೆರೆಗೆ ಕಾಲಿಟ್ಟಿದ್ದಾರೆ. ನವೆಂಬರ್ 11ರಂದು ‘ದಿಲ್ ಪಸಂದ್’ ಸಿನಿಮಾ ರಿಲೀಸ್ ಆಯಿತು. ಎ.ಆರ್. ಶಿವ ತೇಜಸ್ ನಿರ್ದೇಶನದ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು, ಸಾಧು ಕೋಕಿಲ ಮೊದಲಾದವರು ನಟಿಸಿದ್ದರು. ನವೆಂಬರ್ 25ರಂದು ಮೇಘಾ ಶೆಟ್ಟಿ ನಟನೆಯ ‘ತ್ರಿಬಲ್ ರೈಡಿಂಗ್’ ಚಿತ್ರ ತೆರೆಗೆ ಬರುತ್ತಿದೆ.
‘ತ್ರಿಬಲ್ ರೈಡಿಂಗ್’ ಸಿನಿಮಾದಲ್ಲಿ ಗಣೇಶ್, ಮೇಘಾ ಶೆಟ್ಟಿ, ಅದಿತಿ ಪ್ರಭುದೇವ, ರಚನಾ ಇಂದರ್ ನಟಿಸಿದ್ದಾರೆ. ಈ ಚಿತ್ರ ನವೆಂಬರ್ 25ರಂದು ತೆರೆಗೆ ಬರುತ್ತಿದೆ. ಈ ಬಗ್ಗೆ ಮೇಘಾ ಶೆಟ್ಟಿ ಮಾತನಾಡಿದ್ದಾರೆ. ‘ನಾನು ಒಪ್ಪಿಕೊಂಡ ಮೊದಲ ಸಿನಿಮಾ ತ್ರಿಬಲ್ ರೈಡಿಂಗ್. ಆದರೆ, ಮೊದಲು ರಿಲೀಸ್ ಆಗಿದ್ದು ದಿಲ್ ಪಸಂದ್. ಎರಡೇ ವಾರದಲ್ಲಿ ಎರಡು ಸಿನಿಮಾ ರಿಲೀಸ್ ಆಗುತ್ತಿರುವ ಬಗ್ಗೆ ಸಖತ್ ಖುಷಿ ಇದೆ’ ಎಂದಿದ್ದಾರೆ ಮೇಘಾ ಶೆಟ್ಟಿ.
‘ಸ್ಟಾರ್ ಕಾಸ್ಟಿಂಗ್ ಇರುವ ಸಿನಿಮಾ ಇದು. ಸೆಟ್ನಲ್ಲಿ ಹೇಗೆ ಹೊಂದಿಕೊಳ್ಳಬೇಕು ಎಂಬ ಚಿಂತೆ ಇತ್ತು. ಆದರೆ, ಎಲ್ಲರೂ ಚೆನ್ನಾಗಿ ಮಾತನಾಡಿಸಿದರು. ಗಣೇಶ್ ಅವರು ತುಂಬಾನೇ ಹೇಳಿಕೊಟ್ಟಿದ್ದಾರೆ. ಒಂದೊಳ್ಳೆಯ ಚಿತ್ರತಂಡ. ನಾನು ಚಿತ್ರಗಳನ್ನು ಮಾಡುತ್ತಿದ್ದೇನೆ ಎಂದರೆ ಅದು ಧಾರಾವಾಹಿಯಿಂದಲೇ. ಅವರು ನನ್ನನ್ನು ಬೆಳೆಸಿರುವುದಕ್ಕೆ ನನಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದೆ. ಪ್ರೇಕ್ಷಕರೇ ನನ್ನ ಶಕ್ತಿ’ ಎಂದಿದ್ದಾರೆ ಮೇಘಾ ಶೆಟ್ಟಿ.
ಇದನ್ನೂ ಓದಿ: Megha Shetty: ‘ಇವ್ರು ವಿಷ ಕೊಟ್ಟು ಅಮೃತ ಅಂತ ಹೇಳಿದ್ರೂ ಕುಡಿತೀನಿ’: ಮೇಘಾ ಶೆಟ್ಟಿ ಹೀಗೆ ಹೇಳಿದ್ದೇಕೆ?
‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನಿರುದ್ಧ್ ಅವರ ಪಾತ್ರ ಅಂತ್ಯವಾಗಿತ್ತು. ಈ ಬಗ್ಗೆ ಮೇಘಾ ಶೆಟ್ಟಿ ಮಾತನಾಡಿದ್ದಾರೆ. ‘ಅವರು ಇಲ್ಲ ಎನ್ನುವ ಬೇಸರ ಎಲ್ಲರಿಗೂ ಇದೆ. ಆದರೆ, ನಮಗೆ ನಮ್ಮದೇ ಆದ ಜವಾಬ್ದಾರಿ ಇರುತ್ತದೆ. ದೋಣಿ ಸಾಗಲೇಬೇಕು. ಹೀಗಾಗಿ, ನಾವು ಸಾಗಲೇಬೇಕು. ಈ ವಿಚಾರದಲ್ಲಿ ಯಾರನ್ನೂ ದೂರುವಂತಿಲ್ಲ’ ಎಂದಿದ್ದಾರೆ ಅವರು.