‘ಜೊತೆ ಜೊತೆಯಲಿ’ ಧಾರಾವಾಹಿಯ ಗೆಲುವಿನ ಸೂತ್ರವೇನು? ನಟಿ ಮೇಘಾ ಶೆಟ್ಟಿ ವಿವರಿಸಿದ್ದು ಹೀಗೆ
Megha Shetty: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಈ ಯಶಸ್ಸಿನ ಬಗ್ಗೆ ನಟಿ ಮೇಘಾ ಶೆಟ್ಟಿಗೆ ಖುಷಿ ಇದೆ. ಅನು ಸಿರಿಮನೆ ಪಾತ್ರ ಮಾಡುತ್ತಿರುವ ಅವರು ಹಲವು ವಿಚಾರಗಳ ಬಗ್ಗೆ ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.
‘ಜೊತೆ ಜೊತೆಯಲಿ’ ಧಾರಾವಾಹಿ (Jothe Jotheyali) ಸಾಕಷ್ಟು ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಎಲ್ಲಾ ಧಾರಾವಾಹಿಗಳಂತೆ ಈ ಧಾರಾವಾಹಿ ಮೂಡಿ ಬರುತ್ತಿಲ್ಲ. ಪ್ರತಿ ಪಾತ್ರಕ್ಕೂ ಹಲವು ಶೇಡ್ಗಳಿವೆ. ಪ್ರತಿ ಮುಖಗಳು ಅನಾವರಣಗೊಳ್ಳುತ್ತಿದ್ದು ವೀಕ್ಷಕರಿಗೆ ಇಷ್ಟವಾಗುತ್ತಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಈ ಯಶಸ್ಸಿನ ಬಗ್ಗೆ ನಟಿ ಮೇಘಾ ಶೆಟ್ಟಿಗೆ (Megha Shetty) ಖುಷಿ ಇದೆ. ಅನು ಸಿರಿಮನೆ ಪಾತ್ರ ಮಾಡುತ್ತಿರುವ ಅವರು ಹಲವು ವಿಚಾರಗಳ ಬಗ್ಗೆ ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.
ಯಶಸ್ಸಿಗೆ ಕಾರಣ
‘ಜೊತೆ ಜೊತೆಯಲಿ’ ಧಾರಾವಾಹಿಗೆ ದೊಡ್ಡ ಪ್ರೇಕ್ಷಕ ವರ್ಗ ಇದೆ. ಈ ಧಾರಾವಾಹಿ ಯಶಸ್ಸಿನ ಬಗ್ಗೆ ಮೇಘಾ ಶೆಟ್ಟಿ ಮಾತನಾಡಿದ್ದಾರೆ. ‘ಈ ಧಾರಾವಾಹಿಯನ್ನು ಎಲ್ಲರೂ ತುಂಬಾನೇ ಇಷ್ಟಪಟ್ಟರು, ಧಾರಾವಾಹಿಯನ್ನು ಒಪ್ಪಿಕೊಂಡರು. ಇದರ ಕಥೆ ಅದ್ಭುತವಾಗಿದೆ. ಇದು ಗೆಲುವಿಗೆ ಪ್ರಮುಖ ಕಾರಣ. ಇದಲ್ಲದೆ, ನಮ್ಮ ಟೀಂ ಹಾಗೂ ವಾಹಿನಿಯವರ ಬೆಂಬಲ, ಎಲ್ಲರ ಪರಿಶ್ರಮ ಕೂಡ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ವೀಕ್ಷಕರು ನಮ್ಮ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿಯೇ ನಾವು ಇಲ್ಲಿಯವರೆಗೆ ಬಂದಿದ್ದೇವೆ’ ಎನ್ನುತ್ತಾರೆ ಮೇಘಾ ಶೆಟ್ಟಿ.
ಬದಲಾಯಿತು ವೃತ್ತಿ ಜೀವನ
ಒಂದು ಧಾರಾವಾಹಿ ಅಥವಾ ಒಂದು ಸಿನಿಮಾ ಕಲಾವಿದರ ವೃತ್ತಿ ಜೀವನವನ್ನೇ ಬದಲಿಸಬಹುದು. ಇದಕ್ಕೆ ಮೇಘಾ ಶೆಟ್ಟಿ ಕೂಡ ಹೊರತಾಗಿಲ್ಲ. ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಅವರಿಗೆ ಸಿನಿಮಾ ಆಫರ್ಗಳು ಕೂಡ ಬಂದವು. ‘ನಾನು ನಟನೆ ಗೊತ್ತಿಲ್ಲದೆ ಬಂದಂತಹ ಹುಡುಗಿ. ನಾನು ಇಲ್ಲಿ ಹಲವು ವಿಚಾರಗಳನ್ನು ಕಲಿತಿದ್ದೇನೆ. ಇನ್ನೂ ಕಲಿಯಬೇಕಾಗಿದ್ದು ತುಂಬಾ ಇದೆ. ಜೀವನ ಪರ್ಯಂತ ನಾನು ಕಲಿತುಕೊಳ್ಳೋದು ಇದ್ದೇ ಇದೆ. ಈ ಧಾರಾವಾಹಿ ನನಗೆ ತುಂಬಾನೇ ಜನಪ್ರಿಯತೆ ಕೊಟ್ಟಿದೆ’ ಎನ್ನುತ್ತಾರೆ ಅವರು.
ವೀಕ್ಷಕರಿಗೆ ಹೊಸ ತಿರುವನ್ನು ಸ್ವೀಕರಿಸಿಕೊಳ್ಳಲು ಆಗುತ್ತಿಲ್ಲ
ಧಾರಾವಾಹಿಯಲ್ಲಿ ಅನು ಪಾತ್ರ ಟ್ವಿಸ್ಟ್ ಪಡೆದುಕೊಂಡಿದೆ. ಆರ್ಯವರ್ಧನ್ ವಿರುದ್ಧ ಅನು ತಿರುಗಿ ಬಿದ್ದಿದ್ದಾಳೆ. ಇದನ್ನು ವೀಕ್ಷಕರು ಒಪ್ಪಿಕೊಳ್ಳುತ್ತಿಲ್ಲ. ‘ಆರ್ಯ ಮತ್ತು ಅನು ಲವ್ ಬರ್ಡ್ಸ್ ರೀತಿ ಇರಬೇಕು ಎಂಬುದು ವೀಕ್ಷಕರ ನಿರೀಕ್ಷೆ. ಆದರೆ, ಅನು ಪಾತ್ರಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದನ್ನು ಅವರ ಬಳಿ ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ಸತ್ಯ ಗೊತ್ತಾದಮೇಲೆ ನೀವೇ ಸರಿ ಹೋಗುತ್ತೀರಿ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಮೇಘಾ ಶೆಟ್ಟಿ.
ಸಿನಿಮಾ-ಧಾರಾವಾಹಿ ಕೆಲಸದಲ್ಲಿ ಬ್ಯುಸಿ
ಸದ್ಯ ಮೇಘಾ ಶೆಟ್ಟಿ ಧಾರಾವಾಹಿ ಹಾಗೂ ಸಿನಿಮಾ ಎರಡೂ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. 15 ದಿನ ಧಾರಾವಾಹಿ ಕೆಲಸಗಳಲ್ಲಿ ತೊಡಗಿಕೊಂಡರೆ ಇನ್ನು 15 ದಿನ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.