1st Day 1st Show Review: ತೆರೆ ಹಿಂದಿನ ಥರಥರದ ಕಥೆಯೇ ‘ಫಸ್ಟ್ ಡೇ ಫಸ್ಟ್ ಶೋ’

- Time - 118 Minutes
- Released - 11 July 2025
- Language - Kannada
- Genre - Drama
ಪರದೆ ಮೇಲೆ ಸಿನಿಮಾ (Cinema) ನೋಡುವ ಪ್ರೇಕ್ಷಕರಿಗೆ ಒಂದು ಕಥೆ ಮಾತ್ರ ಕಾಣುತ್ತದೆ. ಆದರೆ ಆ ಪರದೆಯ ಹಿಂದೆ ನೂರಾರು ಕಥೆಗಳು ಇರುತ್ತವೆ. ಸಿನಿಮಾ ಮಾಡುವವರ ಕಷ್ಟಗಳು ಒಂದೆರಡಲ್ಲ. ಅದನ್ನು ಪ್ರೇಕ್ಷಕರು ನೋಡಲು ಸಾಧ್ಯವಿಲ್ಲ. ಒಂದು ಸಿನಿಮಾ ಸೆಟ್ಟೇರಿ, ಬಿಡುಗಡೆ ಆಗುವ ತನಕ ಏನೆಲ್ಲ ತಾಪತ್ರಯಗಳು ಇರುತ್ತವೆ ಎಂಬುದನ್ನು ತಿಳಿಸುವ ಚಿತ್ರವೇ ‘ಫಸ್ಟ್ ಡೇ ಫಸ್ಟ್ ಶೋ’ (1st Day 1st Show). ನಿರ್ದೇಶಕ ಗಿರೀಶ್ ಜಿ. ಅವರು ಈ ಸಿನಿಮಾ ಮೂಲಕ ಚಿತ್ರರಂಗದ ಒಳಗಿನ ಒಂದಷ್ಟು ವಿಷಯಗಳನ್ನು ಪ್ರೇಕ್ಷಕರ ಎದುರು ತೆರೆದಿಟ್ಟಿದ್ದಾರೆ.
ಚಿತ್ರರಂಗಕ್ಕೆ ಪೈರಸಿ ಒಂದು ದೊಡ್ಡ ಸಮಸ್ಯೆ. ಆ ಸಮಸ್ಯೆಯನ್ನು ಇಂದಿಗೂ ಪರಿಹರಿಸಲು ಸಾಧ್ಯವಾಗಿಲ್ಲ. ವರ್ಷವಿಡೀ ನೂರಾರು ಜನರು ಕಷ್ಟಪಟ್ಟು ಮಾಡಿದ ಒಂದು ಸಿನಿಮಾವನ್ನು ಕೆಲವೇ ಗಂಟೆಗಳಲ್ಲಿ ಪೈರಸಿ ಮಾಡಿದರೆ ಸಿನಿಮಾ ಮಂದಿಗೆ ಆಗುವ ಸಂಕಟ ಅಷ್ಟಿಷ್ಟಲ್ಲ. ಇಂಥ ಒಂದು ಎಳೆಯೊಂದಿಗೆ ‘ಫಸ್ಟ್ ಡೇ ಫಸ್ಟ್ ಶೋ’ ಸಿನಿಮಾದ ಕಥೆ ಆರಂಭ ಆಗುತ್ತದೆ.
ಇದು ಸಿನಿಮಾದೊಳಗೊಂದು ಸಿನಿಮಾ ತೋರಿಸುವ ಸಿನಿಮಾ! ಹೌದು, ಈ ಚಿತ್ರದ ಕಥೆಯಲ್ಲಿ ‘ಕ್ಯಾಪ್ಟನ್ ಕರ್ನಾಟಕ’ ಎಂಬ ಸಿನಿಮಾ ಸಿದ್ಧವಾಗಿರುತ್ತದೆ. ಇನ್ನೇನು ಆ ಸಿನಿಮಾ ಬಿಡುಗಡೆ ಆಗಲು ಒಂದು ದಿನ ಬಾಕಿ ಇದೆ ಎನ್ನುವಾಗ ಏನೆಲ್ಲ ನಡೆಯುತ್ತದೆ ಎಂಬುದನ್ನು ತೋರಿಸಲಾಗಿದೆ. ಒಂದು ಬಹುನಿರೀಕ್ಷಿತ ಸಿನಿಮಾದ ಬಿಡುಗಡೆಗೆ ಕೊನೇ ಕ್ಷಣದಲ್ಲಿ ವಿಘ್ನ ಎದುರಾದರೆ ಚಿತ್ರತಂಡಕ್ಕೆ ಎಷ್ಟು ಆತಂಕ ಆಗುತ್ತದೆ ಎಂಬುದನ್ನು ವಿವರವಾಗಿ ಈ ಸಿನಿಮಾ ತೋರಿಸಿದೆ.
ಸಿನಿಮಾವನ್ನು ನಂಬಿಕೊಂಡು ಕೇವಲ ಹೀರೋ, ಹೀರೋಯಿನ್, ಇತರೆ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಮಾತ್ರ ಬದುಕುತ್ತಿಲ್ಲ. ಒಂದು ಸಿನಿಮಾದ ಗೆಲುವು ಮತ್ತು ಸೋಲಿನಲ್ಲಿ ಇನ್ನೂ ಸಾವಿರಾರು ಜನರ ಬದುಕು ಅಡಗಿರುತ್ತದೆ. ಸಿನಿಮಾ ಮೇಕಿಂಗ್ ಹಿಂದೆ ಕಷ್ಟದ ಹಾದಿ ಇರುತ್ತದೆ. ಆದರೆ ಈ ಎಲ್ಲ ಕಷ್ಟಗಳ ವಿವರಗಳನ್ನು ತುಂಬಾ ಲವಲವಿಕೆಯಿಂದ ‘ಫಸ್ಟ್ ಡೇ ಫಸ್ಟ್ ಶೋ’ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಗಿರೀಶ್.
ತೆರೆ ಹಿಂದಿನ ಕಹಾನಿಗಳನ್ನು ತಿಳಿದುಕೊಳ್ಳುವ ಆಸಕ್ತಿ ಇರುವ ಸಿನಿಪ್ರೇಮಿಗಳಿಗೆ ‘ಫಸ್ಟ್ ಡೇ ಫಸ್ಟ್ ಶೋ’ ಚಿತ್ರ ಖಂಡಿತಾ ಇಷ್ಟ ಆಗುತ್ತದೆ. ಎರಡು ಗಂಟೆ ಅವಧಿಯ ಈ ಚಿತ್ರದಲ್ಲಿ ಥ್ರಿಲ್ಲಿಂಗ್ ಅಂಶಗಳು ಇವೆ. ಅಂತಿಮವಾಗಿ ‘ಕ್ಯಾಪ್ಟನ್ ಕರ್ನಾಟಕ’ ಚಿತ್ರ ಬಿಡುಗಡೆ ಆಗುತ್ತೋ ಇಲ್ಲವೋ ಎಂಬುದನ್ನು ತಿಳಿಯಲು ಕ್ಲೈಮ್ಯಾಕ್ಸ್ ತನಕ ಕೌತುಕದಿಂದಲೇ ನೋಡಿಸಿಕೊಂಡು ಸಾಗುತ್ತದೆ.
ಅವಕಾಶ ಕೊಡುವುದಾಗಿ ನಂಬಿಸಿ ನಟಿಯರಿಗೆ ಮೋಸ ಮಾಡುವ ನಿರ್ಮಾಪಕರು, ಪ್ರಚಾರದ ಹೆಸರಿನಲ್ಲಿ ಯಾಮಾರಿಸುವ ಜನರು, ದುಡ್ಡು ಹೊಡೆದುಕೊಳ್ಳಲು ಪ್ರಯತ್ನಿಸುವ ಮ್ಯಾನೇಜರ್ಗಳು ಸೇರಿದಂತೆ ಹಲವರ ಬಗ್ಗೆ ಈ ಸಿನಿಮಾದಲ್ಲಿ ವಿವರಿಸಲಾಗಿದೆ. ಒಟ್ಟಿನಲ್ಲಿ ಇದು ಸಂಪೂರ್ಣವಾಗಿ ಸಿನಿಮಾಗೆ ಸಂಬಂಧಿಸಿದ ಸಿನಿಮಾ. ಅಪ್ಪಟ ಸಿನಿಮಾಪ್ರೇಮಿಗಳಿಗೆ ಇಷ್ಟ ಆಗುವಂತಹ ಸಬೆಕ್ಟ್ ಈ ಚಿತ್ರದಲ್ಲಿದೆ.
ಇದನ್ನೂ ಓದಿ: Doora Theera Yaana Review: ಹೊಂದಾಣಿಕೆಗೆ ಹೊಸ ಅರ್ಥ ಹುಡುಕುವ ‘ದೂರ ತೀರ ಯಾನ’
‘ಫಸ್ಟ್ ಡೇ ಫಸ್ಟ್ ಶೋ’ ಸಿನಿಮಾದಲ್ಲಿ ಕಥೆಯೇ ಹೀರೋ. ಎಲ್ಲ ಪಾತ್ರಧಾರಿಗಳು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ನಿರ್ಮಾಪಕನ ಪಾತ್ರದಲ್ಲಿ ಬಿಎಂ ವೆಂಕಟೇಶ್, ನಿರ್ದೇಶಕನಾಗಿ ರೋಹಿತ್ ಶ್ರೀನಾಥ್, ಸಹಾಯಕ ನಿರ್ದೇಶಕರ ಪಾತ್ರದಲ್ಲಿ ಗಿರೀಶ್ ಹಾಗೂ ಅನಿರುದ್ಧ ಹೆಚ್ಚು ಸ್ಕ್ರೀನ್ ಸ್ಪೇಸ್ ಪಡೆದುಕೊಂಡಿದ್ದಾರೆ. ಜೀವಿತಾ ವಸಿಷ್ಠ, ಶೋಭಿತಾ ಶಿವಣ್ಣ ಮುಂತಾದವರು ಕೂಡ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:24 pm, Fri, 11 July 25








