
ಸೆಪ್ಟೆಂಬರ್ 25ರಂದು ಬಿಡುಗಡೆ ಆದ ‘ಬಿಂಗೊ’ ಸಿನಿಮಾದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇದೆ. ರಾತ್ರೋ ರಾತ್ರಿ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುವ ಪ್ರಯತ್ನದಲ್ಲಿ ಆಪತ್ತಿಗೆ ಸಿಲುಕುವ ಹೀರೋಗಳ ಕಥೆಯನ್ನು ಒಂದಷ್ಟು ಸಿನಿಮಾಗಳಲ್ಲಿ ಪ್ರೇಕ್ಷಕರು ಈಗಾಗಲೇ ನೋಡಿರುತ್ತಾರೆ. ಅದೇ ಮಾದರಿಯಲ್ಲಿ ‘ಬಿಂಗೊ’ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದ ಕಥಾನಾಯಕ ಕೂಡ ಹಣದ ಹಿಂದೆ ಬೀಳುತ್ತಾನೆ. ಒಟ್ಟಾರೆ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..
ಶಂಕರ್ ಕೋನಮಾನಹಳ್ಳಿ ಅವರು ‘ಬಿಂಗೊ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಆರ್.ಕೆ. ಚಂದನ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಲಲಿತಾ ಸ್ವಾಮಿ ಮತ್ತು ಆರ್. ಪರಾಂಕುಶ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಯಾವುದೇ ಹೆಚ್ಚುವರಿ ಅಂಶಗಳನ್ನು ತುರುಕದೇ ಎಲ್ಲವನ್ನೂ ಅಚ್ಚುಕಟ್ಟಾಗಿ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಹಾಗಾಗಿ 1 ಗಂಟೆ 51 ನಿಮಿಷಗಳ ಅವಧಿಯಲ್ಲಿ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಕಟ್ಟಿಕೊಡಲಾಗಿದೆ.
2022ರ ಸಮಯದಲ್ಲಿ ಈ ಕಥೆ ಸಾಗುತ್ತದೆ. ಕಥಾನಾಯಕ ರಾಜ (ಆರ್.ಕೆ. ಚಂದನ್) ಬಗ್ಗೆ ಪೊಲೀಸರು ತನಿಖೆ ಆರಂಭಿಸುತ್ತಾರೆ. ಆತನ ತಾಯಿ, ಮಾಜಿ ಪ್ರೇಯಸಿ ಹಾಗೂ ಆಪ್ತ ಸ್ನೇಹಿತನನ್ನು ಪ್ರತ್ಯೇಕವಾಗಿ ಕರೆದುಕೊಂಡು ಬಂದು ಹಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ರಾಜನ ಬಗ್ಗೆ ಒಬ್ಬೊಬ್ಬರು ಒಂದೊಂದು ಕಥೆ ಹೇಳುತ್ತಾರೆ. ಆದರೆ ಆತ ಏನು ತಪ್ಪು ಮಾಡಿದ್ದಾನೆ ಎಂಬುದು ಮಧ್ಯಂತರದಲ್ಲಿ ತಿಳಿಯುತ್ತದೆ.
ಕೋಟ್ಯಂತರ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಾಜನ ಹೆಸರು ತಳುಕು ಹಾಕಿಕೊಂಡಿರುತ್ತದೆ. ನೂರು, ಇನ್ನೂರು ರೂಪಾಯಿಗೂ ಕಷ್ಟಪಡುತ್ತಿದ್ದ ರಾಜನ ಬಳಿ ಏಕಾಏಕಿ ಕೋಟ್ಯಂತರ ರೂಪಾಯಿ ಹಣ ಹೇಗೆ ಬಂತು ಎಂಬ ಕುತೂಹಲ ನಿರ್ಮಾಣ ಆಗುತ್ತದೆ. ಕಥೆ ಮುಂದೆ ಸಾಗಿದಂತೆಲ್ಲ ಒಂದು ದೊಡ್ಡ ಹಗರಣ ಬೆಳಕಿಗೆ ಬರುತ್ತದೆ. ಅದೇನು ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ರಾಜ ಎಸ್ಕೇಪ್ ಆಗುತ್ತಾನಾ ಅಥವಾ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾನಾ ಎಂಬುದು ಕ್ಲೈಮ್ಯಾಕ್ಸ್ ಕೌತುಕ.
ನಿರ್ದೇಶಕರು ಎಲ್ಲಿಯೂ ಸಮಯ ವ್ಯರ್ಥ ಮಾಡಿಲ್ಲ. ವಿಚಾರಣೆ ನಡೆಯುತ್ತಿರುವಾಗಲೇ ಕಥಾನಾಯಕನ ಹಿನ್ನೆಲೆ, ಪ್ರೇಮಪುರಾಣ, ಮನೆಯ ಪರಿಸ್ಥಿತಿ, ಆತನ ಮನಸ್ಥಿತಿ.. ಹೀಗೆ ಎಲ್ಲವನ್ನೂ ತೆರೆದಿಡುತ್ತಾರೆ. ಹಾಡುಗಳು ಹಾಗೂ ಆ್ಯಕ್ಷನ್ ದೃಶ್ಯಗಳ ನಡುವೆಯೇ ಕಥೆ ಪಟಪಟನೆ ಸಾಗುತ್ತದೆ. ಮುಂದೇನಾಗುತ್ತದೆ ಎಂಬ ಕುತೂಹಲದೊಂದಿಗೆ ಪ್ರೇಕ್ಷಕರನ್ನು ಈ ಸಿನಿಮಾ ಹಿಡಿದಿಡುತ್ತದೆ.
ನಟಿ ರಾಗಿಣಿ ದ್ವಿವೇದಿ ಅವರು ಈ ಸಿನಿಮಾದಲ್ಲಿ ಒಂದು ವಿಶೇಷವಾದ ಪಾತ್ರ ಮಾಡಿದ್ದಾರೆ. ಕಥೆಗೆ ದೊಡ್ಡ ತಿರುವು ನೀಡುವ ಪಾತ್ರವನ್ನು ಅವರು ಉತ್ತಮವಾಗಿ ನಿಭಾಯಿಸಿದ್ದಾರೆ. ಸಿನಿಮಾದಲ್ಲಿ ರಾಗಿಣಿ ಅವರ ಎಂಟ್ರಿ ಆದ ಬಳಿಕ ಕಥೆಗೆ ವೇಗ ಸಿಗುತ್ತದೆ. ನೋಡನೋಡುತ್ತಿದ್ದಂತೆಯೇ ಕ್ಲೈಮ್ಯಾಕ್ಸ್ ಬಂದೇ ಬಿಡುತ್ತದೆ. ಅಷ್ಟು ಚುಟುಕಾಗಿ ನಿರ್ದೇಶಕರು ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.
ಇದನ್ನೂ ಓದಿ: ಚಿತ್ರ ವಿಮರ್ಶೆ: ಹಳ್ಳಿಯ ಪ್ರೇಮಕಥೆ ಇರುವ ಭಾವುಕ ಸಿನಿಮಾ ‘ಪ್ರೇಮದ ಊರಲಿ’
ಆರ್.ಕೆ. ಚಂದನ್ ಮತ್ತು ರಕ್ಷಾ ನಿಂಬರ್ಗಿ ಅವರ ಕೆಮಿಸ್ಟ್ರಿ ಈ ಸಿನಿಮಾದಲ್ಲಿ ಚೆನ್ನಾಗಿ ಮೂಡಿಬಂದಿದೆ. ಟಾಮ್ ಆ್ಯಂಡ್ ಜೆರ್ರಿ ರೀತಿಯ ಜೋಡಿ ಅವರದ್ದಾಗಿದೆ. ರಾಜೇಶ್ ನಟರಂಗ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಶ್ರವಣ್ ಕುಮಾರ್ ಅವರು ಈ ಚಿತ್ರದಲ್ಲಿ ಕಾಮಿಡಿ ಕಚಗುಳಿ ಇಟ್ಟಿದ್ದಾರೆ. ತಾಯಿ ಪಾತ್ರದಲ್ಲಿ ಅಪೂರ್ವ ಶ್ರೀ ಅವರು ಗಮನ ಸೆಳೆದಿದ್ದಾರೆ. ಡ್ಯಾನ್ಸ್, ನಟನೆ, ಫೈಟ್ ಎಲ್ಲದರಲ್ಲೂ ಆರ್.ಕೆ. ಚಂದನ್ ಅವರ ಶ್ರಮ ಕಾಣುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:55 pm, Sat, 26 September 26