Ekka Movie Review: ಕಮರ್ಷಿಯಲ್ ಚೌಕಟ್ಟಿನೊಳಗೆ ಮನರಂಜನೆ ನೀಡುವ ‘ಎಕ್ಕ’

- Time - 147 Minutes
- Released - 18 July 2025
- Language - Kannada
- Genre - Crime, Drama
‘ಎಕ್ಕ’ (Ekka Movie) ಸಿನಿಮಾದ ‘ಬ್ಯಾಂಗಲ್ ಬಂಗಾರಿ’ ಹಾಡು ವೈರಲ್ ಆಗಿ ತುಂಬಾ ಸದ್ದು ಮಾಡಿದೆ. ಹಾಡಿನಿಂದಾಗಿಯೇ ಹೆಚ್ಚು ನಿರೀಕ್ಷೆ ಬೆಳೆಯಿತು ಎಂದರೂ ತಪ್ಪಿಲ್ಲ. ಇನ್ನು, ಟ್ರೇಲರ್ ಬಿಡುಗಡೆ ಆದಾಗ ಇನ್ನಷ್ಟು ನಿರೀಕ್ಷೆ ಹೆಚ್ಚಿತು. ಮಿಡಲ್ ಕ್ಲಾಸ್ ಹುಡುಗ ಭೂತಕ ಲೋಕಕ್ಕೆ ಎಂಟ್ರಿ ನೀಡುವ ಕಥೆ ಈ ಸಿನಿಮಾದಲ್ಲಿದೆ ಎಂಬುದು ತಿಳಿಯಿತು. ಇಂದು (ಜುಲೈ 18) ಈ ಸಿನಿಮಾ ರಿಲೀಸ್ ಆಗಿದೆ. ನಿರ್ದೇಶಕ ರೋಹಿತ್ ಪದಕಿ ಮತ್ತು ನಟ ಯುವ ರಾಜ್ಕುಮಾರ್ (Yuva Rajkumar) ಅವರ ಕಾಂಬಿನೇಷನ್ನಲ್ಲಿ ಬಂದ ‘ಎಕ್ಕ’ ಸಿನಿಮಾದಲ್ಲಿ ಅಂಡರ್ ವರ್ಲ್ಡ್ ಕಹಾನಿ ಜೊತೆ ಫ್ಯಾಮಿಲಿ ಸೆಂಟಿಮೆಂಟ್ ಕಥೆ ಕೂಡ ಇದೆ.
ಈ ಸಿನಿಮಾದ ಒನ್ ಲೈನ್ ಕಥೆ ಗಮನಿಸಿದರೆ ‘ಜೋಗಿ’ ರೀತಿಯ ಸಿನಿಮಾಗಳು ನೆನಪಾಗುತ್ತವೆ. ಹಳ್ಳಿಯಲ್ಲಿ ಇರುವ ಹೀರೋ ಬಡತನದ ಕುಟುಂಬದವನು. ದುಡಿಯಬೇಕು ಎಂದು ಬೆಂಗಳೂರಿಗೆ ಬಂದು ಅನಿವಾರ್ಯ ಕಾರಣದಿಂದ ಭೂಗತ ಲೋಕಕ್ಕೆ ಎಂಟ್ರಿ ಪಡೆಯುತ್ತಾನೆ. ಹಳ್ಳಿಯಲ್ಲಿರುವ ತಾಯಿಗೆ ಮಗ ಈ ರೀತಿ ರೌಡಿ ಆಗಿದ್ದಾನೆ ಎಂಬುದರ ಅರಿವು ಇರುವುದಿಲ್ಲ. ಅಷ್ಟಕ್ಕೂ ಅವರು ಭೂಗತ ಜಗತ್ತಿಗೆ ಕಾಲಿಟ್ಟಿದ್ದು ಹೇಗೆ? ಅಂತಿಮವಾಗಿ ಅವನು ಅದರಿಂದ ಹೇಗೆ ಹೊರಬರುತ್ತಾನೆ ಎಂಬುದೇ ‘ಎಕ್ಕ’ ಚಿತ್ರದ ಕಹಾನಿ.
ಯುವ ರಾಜ್ಕುಮಾರ್ ಅವರು ಎರಡು ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಶೇಡ್ನಲ್ಲಿ ಅವರು ಮುಗ್ಧ ಹಳ್ಳಿ ಹುಡುಗ. ಯಾರಿಗೆ ತೊಂದರೆ ಆದರೂ ಸಹಾಯಕ್ಕೆ ಮುಂದಾಗುವ ಒಳ್ಳೆಯ ಮನಸ್ಸಿನವನು. ಆ ಗುಣದಿಂದಾಗಿ ಆತ ಸಂಕಷ್ಟಕ್ಕೆ ಕೂಡ ಸಿಲುಕಿಕೊಳ್ಳುತ್ತಾನೆ. ಆದರೆ ಇನ್ನೊಂದು ಶೇಡ್ನಲ್ಲಿ ಭೂಗದ ಲೋಕದ ರೌಡಿ. ದೊಡ್ಡ ದೊಡ್ಡ ಡಾನ್ಗಳಿಗೆ ಬಲಗೈ ಬಂಟನಂತೆ ಇರುವ ವ್ಯಕ್ತಿ. ಈ ನಡುವೆ ಆತ ಲವರ್ ಬಾಯ್ ಕೂಡ ಹೌದು. ಇಂಥ ಶೇಡ್ಗಳು ಇರುವ ಪಾತ್ರವನ್ನು ಯುವ ರಾಜ್ಕುಮಾರ್ ನಿಭಾಯಿಸಿದ್ದಾರೆ.
ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ‘ಎಕ್ಕ’ ಸಿನಿಮಾದ ಕಥೆ ಸಿದ್ಧವಾದಂತಿದೆ. ಮಾಸ್ ಪ್ರೇಕ್ಷಕರು ಇಷ್ಟಪಡುವಂತಹ ಆ್ಯಕ್ಷನ್ ಸನ್ನಿವೇಶಗಳು ಈ ಚಿತ್ರದಲ್ಲಿವೆ. ಕುತೂಹಲ ಕಾಯ್ದುಕೊಳ್ಳುವಂತಹ ಸಸ್ಪೆನ್ಸ್ ಇದೆ. ಕ್ಲಾಸ್ ಅಭಿಮಾನಿಗಳಿಗಾಗಿ ತಾಯಿ-ಮಗನ ಸೆಂಟಿಮೆಂಟ್ ಕೂಡ ಇದೆ. ಕಾಮಿಡಿ ರಿಲೀಫ್ ನೀಡಲು ಸಾಧು ಕೋಕಿಲ ಪಾತ್ರವಿದೆ. ಹೀಗೆ ಎಲ್ಲವನ್ನೂ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸಿರುವುದು ಸಿನಿಮಾಗೆ ಕೊಂಚ ಹೊರೆಯಾದಂತಿದೆ. ಸಿದ್ಧಸೂತ್ರಗಳನ್ನು ಮೀರಿ ಹೊಸತನ ನೀಡಲು ಪ್ರಯತ್ನಿಸಿದ್ದರೆ ಚೆನ್ನಾಗಿರುತ್ತಿತ್ತು.
ಇದನ್ನೂ ಓದಿ: Hebbuli Cut Review: ನಕ್ಕು ನಗಿಸುತ್ತಲೇ ಕರಾಳ ಸತ್ಯ ತೆರೆದಿಡುವ ಹೆಬ್ಬುಲಿ ಕಟ್
ಇಡೀ ಸಿನಿಮಾದಲ್ಲಿ ಯುವ ರಾಜ್ಕುಮಾರ್ ಅವರ ಪಾತ್ರ ಹೈಲೈಟ್ ಆಗಿದೆ. ತಾಯಿ ಪಾತ್ರ ಮಾಡಿರುವ ಶ್ರುತಿ ಅವರು ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಗಮನ ಸೆಳೆಯುತ್ತಾರೆ. ನಾಯಕಿಯರಾದ ಸಂಜನಾ ಆನಂದ್ ಮತ್ತು ಸಂಪದಾ ಅವರ ಪಾತ್ರಗಳಿಗೆ ಕಡಿಮೆ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಕಥೆಗೆ ತಿರುವು ನೀಡುವಂತಹ ಪಾತ್ರದಲ್ಲಿ ಅತುಲ್ ಕುಲಕರ್ಣಿ ಅವರು ಕಾಣಿಸಿಕೊಂಡಿದ್ದಾರೆ.
ಸಂಗೀತ ನಿರ್ದೇಶನ ಚರಣ್ ಅವರು ಹಾಡುಗಳ ಮೂಲಕ ಗಮನ ಸೆಳೆದಿದ್ದಾರೆ. ಹಿನ್ನೆಲೆ ಸಂಗೀತದಲ್ಲಿ ಅವರು ಜಾಸ್ತಿ ಸ್ಕೋರ್ ಮಾಡಬಹುದಿತ್ತು. ‘ಬ್ಯಾಂಗಲ್ ಬಂಗಾರಿ..’ ಹಾಡು ಇಷ್ಟಪಟ್ಟವರು ದೊಡ್ಡ ಪರದೆಯಲ್ಲಿ ಎಂಜಾಯ್ ಮಾಡಬಹುದು. ಸತ್ಯ ಹೆಗಡೆ ಅವರ ಛಾಯಾಗ್ರಹಣ ಉತ್ತಮವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:00 pm, Fri, 18 July 25




