AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

C Movie Review: ಕನ್ನಡದಲ್ಲಿ ಸಿಂಪಲ್​ ಆಗಿ ಮೂಡಿಬಂದ ಮೆಡಿಕಲ್ ಡ್ರಾಮಾ ‘ಸಿ’ ಸಿನಿಮಾ

ಮಾಮೂಲಿ ಸಿನಿಮಾಗಳಿಗಿಂತ ಭಿನ್ನವಾದ ಕಹಾನಿ ‘ಸಿ’ ಸಿನಿಮಾದಲ್ಲಿದೆ. ಅಮಾಯಕ ವ್ಯಕ್ತಿಗಳ ಅಂಗಾಂಗಗಳನ್ನು ಕದಿಯುವ ಕರಾಳ ದಂಧೆಯ ಕುರಿತ ಕಥೆಯನ್ನು ಇಟ್ಟುಕೊಂಡು ನಿರ್ದೇಶಕ ಕಿರಣ್​ ಸುಬ್ರಮಣಿ ಅವರು ಸಿನಿಮಾ ಮಾಡಿದ್ದಾರೆ. ಥ್ರಿಲ್ಲರ್​ ಅಂಶಗಳ ಜೊತೆ ಎಮೋಷನಲ್​ ದೃಶ್ಯಗಳಿಗೂ ಈ ಸಿನಿಮಾದಲ್ಲಿ ಆದ್ಯತೆ ನೀಡಲಾಗಿದೆ.

C Movie Review: ಕನ್ನಡದಲ್ಲಿ ಸಿಂಪಲ್​ ಆಗಿ ಮೂಡಿಬಂದ ಮೆಡಿಕಲ್ ಡ್ರಾಮಾ ‘ಸಿ’ ಸಿನಿಮಾ
‘ಸಿ’ ಸಿನಿಮಾ ಪೋಸ್ಟರ್​
ಮದನ್​ ಕುಮಾರ್​
|

Updated on: Aug 24, 2024 | 4:44 PM

Share

ಸಿನಿಮಾ: ‘ಸಿ’. ನಿರ್ಮಾಣ: ಎ.ಜಿ. ಸುಬ್ರಮಣಿ. ನಿರ್ದೇಶನ: ಕಿರಣ್ ಸುಬ್ರಮಣಿ. ಪಾತ್ರವರ್ಗ: ಕಿರಣ್ ಸುಬ್ರಮಣಿ, ಬೇಬಿ ಶಾನ್ವಿ, ಪ್ರಶಾಂತ್​ ನಟನ, ಶ್ರೀಧರ್ ರಾಮ್, ಆರ್ಯ, ಶ್ರೀಕಾಂತ್ ಪಾಟೀಲ್, ಮಧುಮತಿ, ಚೈತ್ರಾ, ನಿರ್ಮಲಾ ನಂದನ್ ಮುಂತಾದವವರು.

ಕನ್ನಡ ಚಿತ್ರರಂಗದಲ್ಲಿ ಮೆಡಿಕಲ್​ ಡ್ರಾಮಾ ಶೈಲಿಯ ಸಿನಿಮಾಗಳ ಸಂಖ್ಯೆ ವಿರಳ. ಅಲ್ಲೊಂದು ಇಲ್ಲೊಂದು ಪ್ರಯತ್ನಗಳು ನಡೆಯುತ್ತವೆ. ಆ ಸಾಲಿಗೆ ‘ಸಿ’ ಸಿನಿಮಾ ಕೂಡ ಸೇರ್ಪಡೆ ಆಗಿದೆ. ವೈದ್ಯಕೀಯ ವಿಚಾರಗಳ ಸುತ್ತ ಹೆಣೆದ ಕಹಾನಿ ಇರುವ ಸಿನಿಮಾಗೆ ಮೆಡಿಕಲ್​ ಡ್ರಾಮಾ ಎನ್ನಬಹುದು. ‘ಸಿ’ ಕೂಡ ಅದೇ ಪ್ರಕಾರಕ್ಕೆ ಸೇರುವಂಥದ್ದು. ಒಂದು ಸರಳವಾದ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಅಂಗಾಂಗ ಕದಿಯುವ ದಂಧೆಯನ್ನೇ ಕೇಂದ್ರವಾಗಿ ಇಟ್ಟುಕೊಂಡು ಮಾಡಲಾದ ಈ ಸಿನಿಮಾ ಈ ವಾರ (ಆಗಸ್ಟ್​ 23) ತೆರೆಕಂಡಿದೆ. ‘ಸಿ’ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

ಒಂದಷ್ಟು ಪಾತ್ರಗಳು ‘ಸಿ’ ಸಿನಿಮಾದಲ್ಲಿವೆ. ಎಲ್ಲ ಪಾತ್ರಗಳಿಗೂ ಸಮಾನವಾಗಿ ಪ್ರಾಮುಖ್ಯತೆ ನೀಡಲಾಗಿದೆ. ಸಿನಿಮಾದ ಬಹುತೇಕ ಕಥೆ ಒಂದೇ ಸ್ಥಳದಲ್ಲಿ ನಡೆಯುತ್ತದೆ. ಹಾಗಿದ್ದರೂ ಸಾಧ್ಯವಾದಷ್ಟು ಏಕತಾನತೆ ಕಾಡದ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಅಮಾಯಕರಾದ ಜನರನ್ನು ಏನೋ ಹೇಳಿ ನಂಬಿಸಿ ಯಾಮಾರಿಸುವ ಅಂಗಾಂಗ ಕಳ್ಳತನದ ಜಾಲದ ಬಗ್ಗೆ ಬೆಳಕು ಚೆಲ್ಲುವಂತಹ ಕಥೆಯನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರಿಗೆ ಸಂದೇಶ ನೀಡುವ ಕೆಲಸ ಈ ಚಿತ್ರದಲ್ಲಾಗಿದೆ.

ಬೇರೆ ಬೇರೆ ಕಥೆಯ ಹಿನ್ನೆಲೆ ಇರುವ ಒಂದಷ್ಟು ಪಾತ್ರಗಳು ಈ ಚಿತ್ರದಲ್ಲಿವೆ. ಆ ಪೈಕಿ ಕೆಲ ಪಾತ್ರಗಳ ಹಿನ್ನೆಲೆ ವಿವರಿಸಲು ಹಾಡಿನ ಮೊರೆ ಹೋಗಲಾಗಿದೆ. ಆರಂಭದಲ್ಲಿ ಹಾಸ್ಯಕ್ಕೆ ಒತ್ತು ನೀಡಲಾಗಿದೆ. ಇಂಟರ್​ವಲ್ ವೇಳೆಗೆ ಸಿನಿಮಾ ಬೇರೆ ಮಜುಲು ಪಡೆಯುತ್ತದೆ. ಆ ಬಳಿಕ ಕಥೆಗೆ ಥ್ರಿಲ್ಲರ್​ ಗುಣ ಹೆಚ್ಚುತ್ತದೆ. ಮಾಫಿಯಾದವರ ಕೈಗೆ ಸಿಕ್ಕಿಹಾಕಿಕೊಂಡ ಅಮಾಯಕರು ತಪ್ಪಿಸಿಕೊಳ್ಳುತ್ತಾರೋ ಇಲ್ಲವೋ ಎಂಬ ಕೌತುಕದೊಂದಿಗೆ ಕಥೆ ಸಾಗುತ್ತದೆ.

ಇದನ್ನೂ ಓದಿ: Movie Review: ಬೆಳ್ಳಗಿರೋದೆಲ್ಲ ‘ಪೌಡರ್​’ ಅಲ್ಲ: ಕಳೆದು ಹೋಗಿದ್ದನ್ನು ಹುಡುಕುವ ಪ್ರಯಾಸ ಪ್ರಸಂಗ

ಇಡೀ ಸಿನಿಮಾದಲ್ಲಿ ಇರುವುದು ಚಿಕ್ಕದೊಂದು ಕಥೆ. ಅದನ್ನು ಬಹಳ ಸರಳವಾಗಿಯೇ ಕಟ್ಟಿಕೊಡಲಾಗಿದೆ. ಇದರಲ್ಲಿ ತೀರಾ ಹೊಸತನವನ್ನು ನಿರೀಕ್ಷಿಸಲಾಗದು. ಒಂದಷ್ಟು ಇತಿಮಿತಿಯ ನಡುವೆಯೇ ಸಿನಿಮಾ ಪೂರ್ಣಗೊಂಡಿದೆ. ಹಾಗಂತ ಕಥೆ ಅಂತ್ಯವಾಯ್ತು ಅಂತಲ್ಲ. ಮುಂದೇನಾಯ್ತು ಎಂಬ ಕೌತುಕ ಉಳಿಸಿಯೇ ಸಿನಿಮಾ ಮುಕ್ತಾಯ ಆಗಿದೆ. ಹೊಸ ಕಲಾವಿದರ ಪ್ರಯತ್ನ ಎಂಬ ಕಾರಣಕ್ಕೆ ಒಮ್ಮೆ ನೋಡಿಸಿಕೊಂಡು ಹೋಗುತ್ತದೆ.

‘ಸಿ’ ಸಿನಿಮಾದ ಅವಧಿ ಒಂದು ಗಂಟೆ 46 ನಿಮಿಷ ಇದೆ. ಇಷ್ಟು ಕಡಿಮೆ ಅವಧಿಯಲ್ಲೂ ಕೆಲ ದೃಶ್ಯಗಳು ಅನಗತ್ಯ ಎನಿಸಿಕೊಳ್ಳುತ್ತವೆ. ಅಂಥ ದೃಶ್ಯಗಳ ಬದಲಿಗೆ ಕಥೆಗೆ ಪೂರಕ ಆಗುವಂತಹ ಗಟ್ಟಿ ದೃಶ್ಯಗಳನ್ನು ಹೆಣೆದಿದ್ದರೆ ಸಿನಿಮಾದ ತೂಕ ಹೆಚ್ಚಬಹುದಿತ್ತು ಎನಿಸುತ್ತದೆ. ಸಿನಿಮಾದಲ್ಲಿನ ತಂದೆ-ಮಗಳ ಎಮೋಷನಲ್​ ಸನ್ನಿವೇಶಗಳು ಇಷ್ಟವಾಗುತ್ತವೆ. ಮೆಡಿಕಲ್ ಥ್ರಿಲ್ಲರ್​ ಇಷ್ಟಪಡುವ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.