AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Movie Review: ಬೆಳ್ಳಗಿರೋದೆಲ್ಲ ‘ಪೌಡರ್​’ ಅಲ್ಲ: ಕಳೆದು ಹೋಗಿದ್ದನ್ನು ಹುಡುಕುವ ಪ್ರಯಾಸ ಪ್ರಸಂಗ

‘ಗುಳ್ಟು’ ಸಿನಿಮಾ ಖ್ಯಾತಿಯ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಅವರು ‘ಪೌಡರ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ದಿಗಂತ್, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ ಈ ಚಿತ್ರದಲ್ಲಿ ಫ್ಯಾಂಟಸಿ ಲೋಕ ಇದೆ. ಮಾಮೂಲಿ ಫಾರ್ಮ್ಯಾಟ್​ ಬಿಟ್ಟು ಬೇರೆ ರೀತಿಯಲ್ಲಿ ಕಥೆ ಹೇಳಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಅವರು ಗ್ರಾಫಿಕ್ಸ್​ ಮೊರೆ ಹೋಗಿದ್ದಾರೆ.

Movie Review: ಬೆಳ್ಳಗಿರೋದೆಲ್ಲ ‘ಪೌಡರ್​’ ಅಲ್ಲ: ಕಳೆದು ಹೋಗಿದ್ದನ್ನು ಹುಡುಕುವ ಪ್ರಯಾಸ ಪ್ರಸಂಗ
‘ಪೌಡರ್​’ ಸಿನಿಮಾ ಪೋಸ್ಟರ್​
ಮದನ್​ ಕುಮಾರ್​
|

Updated on: Aug 23, 2024 | 6:25 PM

Share

ಸಿನಿಮಾ: ಪೌಡರ್​. ನಿರ್ಮಾಣ: ಕೆಆರ್​ಜಿ ಸ್ಟುಡಿಯೋಸ್​, ಟಿವಿಫ್​ ಮೋಷನ್​ ಪಿಕ್ಚರ್ಸ್. ನಿರ್ದೇಶನ: ಜನಾರ್ದನ್ ಚಿಕ್ಕಣ್ಣ. ಪಾತ್ರವರ್ಗ: ದಿಗಂತ್​, ಧನ್ಯಾ ರಾಮ್​ಕುಮಾರ್​, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ರವಿಶಂಕರ್​ ಗೌಡ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು.

ನಿರ್ದೇಶಕ ಜನಾರ್ದನ್​ ಚಿಕ್ಕಣ್ಣ ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ಮೊದಲು ಅವರು ‘ಗುಳ್ಟು’ ಸಿನಿಮಾದಿಂದ ಡಿಫರೆಂಟ್​ ಆದಂತಹ ಒಂದು ಕಥೆಯನ್ನು ಹೇಳಿದ್ದರು. ಈಗ ಅವರು ಸಂಪೂರ್ಣ ಬೇರೆಯದೇ ಕಥೆಯನ್ನು ‘ಪೌಡರ್​’ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ‘ಗುಳ್ಟು’ ರೀತಿಯೇ ‘ಪೌಡರ್​’ ಸಿನಿಮಾದಲ್ಲೂ ಯೂತ್​ಫುಲ್​ ಕಾಂಟೆಂಟ್​ ಇದೆ. ಈ ಬಾರಿ ಅವರು ಕಾಮಿಡಿಗೆ ಹೆಚ್ಚು ಮಹತ್ವ ನೀಡಿದ್ದಾರೆ. ‘ಗುಳ್ಟು’ ಸಿನಿಮಾದಲ್ಲಿ ಲಾಜಿಕ್​ ಇಟ್ಟುಕೊಂಡು ಕಥೆ ಹೇಳಿದ್ದ ಅವರು ‘ಪೌಡರ್​’ ಚಿತ್ರದಲ್ಲಿ ಸಂಪೂರ್ಣ ಲಾಜಿಕ್​ ಮರೆತೇ ಬಿಟ್ಟಿದ್ದಾರೆ.

‘ಪೌಡರ್’ ಎಂಬ ಶೀರ್ಷಿಕೆ ಕೇಳಿದ ತಕ್ಷಣ ಇದು ಯಾವುದೋ ಸೌಂದರ್ಯವರ್ಧಕದ ಬಗ್ಗೆ ಇರುವ ಸಿನಿಮಾ ಎಂದುಕೊಳ್ಳುವಂತಿಲ್ಲ. ಪೌಡರ್​ ಕಥೆ ಇರುವುದು ಮಾದಕ ದ್ರವ್ಯದ ಬಿಸ್ನೆಸ್​ ಬಗ್ಗೆ! ಸಾಮಾನ್ಯವಾಗಿ ಇಂಥ ಕಹಾನಿಯನ್ನು ಕ್ರೈಂ ಥ್ರಿಲ್ಲರ್​ ಶೈಲಿಯಲ್ಲಿ ಕಟ್ಟಿಕೊಡಲಾಗುತ್ತದೆ. ಆದರೆ ಜನಾರ್ದನ್​ ಚಿಕ್ಕಣ್ಣ ಅವರು ಕಾಮಿಡಿ ಹಾದಿ ಹಿಡಿಸಿದ್ದಾರೆ. ಅದು ಕೂಡ ಮೈಂಡ್​ಲೆಸ್​ ಕಾಮಿಡಿ. ಅಂದರೆ, ಅದು ಯಾಕೆ ಹೀಗಾಯ್ತು? ಇದು ಹೀಗಾಗಬಾರದಿತ್ತಲ್ಲ ಎಂಬ ಯಾವ ಪ್ರಶ್ನೆಯನ್ನೂ ಪ್ರೇಕ್ಷಕ ಕೇಳುವಂತಿಲ್ಲ. ತೆರೆಮೇಲೆ ಕಂಡಿದ್ದನ್ನೆಲ್ಲ ಸುಮ್ಮನೇ ನೋಡಿಕೊಂಡು ಹೋದರೆ ಮಾತ್ರ ಈ ಸಿನಿಮಾ ರುಚಿಸುತ್ತದೆ. ಇಲ್ಲದಿದ್ದರೆ ತೆರೆ ಮೇಲೆ ಮೂಡಿದೆಲ್ಲಾ ತಲೆ-ಬುಡ ಇಲ್ಲದ ಪ್ರಸಂಗ ಎನಿಸಲು ಆರಂಭ ಆಗುತ್ತದೆ.

‘ಬೆಳ್ಳಗಿರುವುದೆಲ್ಲ ಪೌಡರ್​ ಅಲ್ಲ’. ಹಾಗಾದರೆ ನಿಜವಾದ ಪೌಡರ್​ ಯಾವುದು? ಇದೇ ಈ ಸಿನಿಮಾದ ಒನ್​ಲೈನ್​ ಕಥೆ. ಚೀನಾದಿಂದ ಬರುವ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಪೌಡರ್​ (ಮಾದಕ ವಸ್ತು) ಮೈಸೂರಿನಲ್ಲಿ ಕಳೆದುಹೋಗುತ್ತದೆ. ಮುಖಕ್ಕೆ ಹಚ್ಚುವ ಪೌಡರ್​ ಹಾಗೂ ನಶೆ ತರಿಸುವ ಪೌಡರ್​ ಅದಲುಬದಲಾಗುತ್ತವೆ. ಅದನ್ನು ಪತ್ತೆ ಹಚ್ಚಲು ಈ ಸಿನಿಮಾದಲ್ಲಿನ ಎಲ್ಲ ಪಾತ್ರಗಳೂ ಪ್ರಯತ್ನಿಸುತ್ತವೆ. ಆಗ ಎದುರಾಗುವ ಸಂಗತಿಗಳನ್ನೇ ಕಾಮಿಡಿ ರೂಪದಲ್ಲಿ ತೋರಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.

ನಟ ದಿಗಂತ್​ ಅವರಿಗೆ ಕಾಮಿಡಿ ಸಿನಿಮಾಗಳ ಹೊಸದೇನಲ್ಲ. ಎಂದಿನಂತೆ ಅವರು ಉಡಾಫೆಯ ಯುವಕನಾಗಿ ಈ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಅವರಿಗೆ ಧನ್ಯಾ ರಾಮ್​ಕುಮಾರ್​ ಜೋಡಿಯಾಗಿದ್ದಾರೆ. ನಟಿ ಶರ್ಮಿಳಾ ಮಾಂಡ್ರೆ ಅವರು ಒಂದು ಖಡಕ್​ ಪಾತ್ರ ನಿಭಾಯಿಸಿದ್ದಾರೆ. ಆ್ಯಕ್ಷನ್​ ಮೆರೆಯಲು ಅವರಿಗೆ ಉತ್ತಮ ಅವಕಾಶ ಸಿಕ್ಕಿದೆ. ರಂಗಾಯಣ ರಘು ಅವರು ಎಂದಿನಂತೆ ಪ್ರೇಕ್ಷಕರನ್ನು ನಗಿಸುವ ಪ್ರಯತ್ನ ಮಾಡಿದ್ದಾರೆ. ಬೇರೆ ಸಿನಿಮಾಗಳಲ್ಲಿ ಗಂಭೀರ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡ ಗೋಪಾಲಕೃಷ್ಣ ದೇಶಪಾಂಡೆ ಅವರು ಸಹ ಇಲ್ಲಿ ನಗಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅನಿರುದ್ಧ್ ಆಚಾರ್ಯ, ಹುಲಿ ಕಾರ್ತಿಕ್ ಮುಂತಾದವರು ಈ ಪಾತ್ರವರ್ಗಕ್ಕೆ ಸಾಥ್​ ನೀಡಿದ್ದಾರೆ.

ಇದನ್ನೂ ಓದಿ: Krishnam Pranaya Sakhi Review: ಫ್ಯಾಮಿಲಿ ಪ್ರೇಕ್ಷಕರಿಗೊಂದು ಟಿಪಿಕಲ್​ ಗಣೇಶ್​ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’ ​ ಮಾದಕ ವ್ಯಸನ ಒಂದು ಗಂಭೀರ ಪಿಡುಗ. ‘ಪೌಡರ್​’ ಸಿನಿಮಾದಲ್ಲಿ ಅದರ ಸೇವನೆಯನ್ನು ಎಲ್ಲಿಯೂ ವೈಭವೀಕರಿಸಿಲ್ಲ ಎಂಬುದು ಸಮಾಧಾನಕರ ಸಂಗತಿ. ಹಾಗೆಂದಮಾತ್ರಕ್ಕೆ ಎಚ್ಚರಿಕೆ ನೀಡುವಂತಹ ಯಾವುದೇ ದೃಶ್ಯಗಳೂ ಇಲ್ಲ. ಒಂದು ಫ್ಯಾಂಟಸಿಯ ರೀತಿಯಲ್ಲಿ ಕಥೆ ಹೇಳುವುದಷ್ಟೇ ಸಿನಿಮಾದ ಉದ್ದೇಶ ಎಂಬಂತಾಗಿದೆ. ಅದಕ್ಕೆ ಗ್ರಾಫಿಕ್ಸ್​ ಬಳಕೆ ಆಗಿದೆ. ಪ್ರೇಕ್ಷಕರನ್ನು, ಯುವಜನತೆಯನ್ನು ಎಚ್ಚರಿಸುವ ಕೆಲಸವೂ ಆಗಿದ್ದರೆ ಚೆನ್ನಾಗಿರುತ್ತಿತ್ತು. ಆ ಬಗ್ಗೆ ನಿರ್ದೇಶಕರು ಗಮನ ಹರಿಸಬಹುದಿತ್ತು ಎನಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.