Krishnam Pranaya Sakhi Review: ಫ್ಯಾಮಿಲಿ ಪ್ರೇಕ್ಷಕರಿಗೊಂದು ಟಿಪಿಕಲ್​ ಗಣೇಶ್​ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’

ಹಾಡುಗಳಿಂದಲೇ ಸದ್ದು ಮಾಡಿದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಬಿಡುಗಡೆ ಆಗಿದೆ. ಕಥೆಯ ಬಗ್ಗೆ ಹೆಚ್ಚೇನೂ ಸುಳಿವು ನೀಡಿದೇ ಚಿತ್ರಮಂದಿರಕ್ಕೆ ಬಂದ ಈ ಸಿನಿಮಾ ಹೇಗಿದೆ? ಗಣೇಶ್ ಅಭಿಮಾನಿಗಳಿಗೆ ಈ ಸಿನಿಮಾದಲ್ಲಿ ಏನೆಲ್ಲ ಸಿಗಲಿದೆ? ‘ಜೇನ ದನಿಯೋಳೆ.. ಮೀನ ಕಣ್ಣೋಳೆ..’ ಹಾಡಿನ ರೀತಿ ಸಿನಿಮಾ ಕೂಡ ಚೆನ್ನಾಗಿದೆಯಾ? ಈ ವಿಮರ್ಶೆಯಲ್ಲಿದೆ ಉತ್ತರ..

Krishnam Pranaya Sakhi Review: ಫ್ಯಾಮಿಲಿ ಪ್ರೇಕ್ಷಕರಿಗೊಂದು ಟಿಪಿಕಲ್​ ಗಣೇಶ್​ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’
‘ಕೃಷ್ಣಂ ಪ್ರಣಯ ಸಖಿ’ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Aug 15, 2024 | 9:18 AM

ಸಿನಿಮಾ: ಕೃಷ್ಣಂ ಪ್ರಣಯ ಸಖಿ. ನಿರ್ಮಾಣ: ಪ್ರಶಾಂತ್​ ಜಿ. ರುದ್ರಪ್ಪ. ನಿರ್ದೇಶನ: ಶ್ರೀನಿವಾಸ್​ ರಾಜು. ಪಾತ್ರವರ್ಗ: ‘ಗೋಲ್ಡನ್​ ಸ್ಟಾರ್’ ಗಣೇಶ್​, ಮಾಳವಿಕಾ ನಾಯರ್​, ಶರಣ್ಯ ಶೆಟ್ಟಿ, ರಂಗಾಯಣ ರಘು, ಸಾಧುಕೋಕಿಲ, ಗಿರಿ ಮುಂತಾದವರು. ಸ್ಟಾರ್​: 5/3.5

ಕಿವಿಗೆ ಇಂಪು ನೀಡುವ ಹಾಡುಗಳು, ಕಚಗುಳಿ ಇಡುವಂತಹ ಸಂಭಾಷಣೆಗಳು, ಬಣ್ಣ ಬಣ್ಣದ ಕಾಸ್ಟ್ಯೂಮ್​ಗಳು, ಆಕರ್ಷಕವಾದ ಲೊಕೇಷನ್​ಗಳು, ಫ್ಯಾಮಿಲಿ ಸಮೇತ ಕುಳಿತು ನೋಡುವಂತಹ ಒಂದು ಪ್ರೇಮಕಥೆ, ಒಂದಷ್ಟು ಭಾವುಕ ಸನ್ನಿವೇಶಗಳು, ಅಲ್ಪ ಸ್ವಲ್ಪ ಆ್ಯಕ್ಷನ್​, ಹದವಾಗಿ ಬೆರೆತ ಕಾಮಿಡಿ.. ‘ಗೋಲ್ಡನ್​ ಸ್ಟಾರ್​’ ಗಣೇಶ್​ ಅಭಿನಯದ ಸಿನಿಮಾಗಳಲ್ಲಿ ಪ್ರೇಕ್ಷಕರು ಇವೆಲ್ಲವನ್ನು ಖಂಡಿತಾ ನಿರೀಕ್ಷಿಸುತ್ತಾರೆ. ಈ ಎಲ್ಲ ಅಂಶಗಳನ್ನು ಹೊಂದಿರುವ ಚಿತ್ರವೇ ‘ಕೃಷ್ಣಂ ಪ್ರಣಯ ಸಖಿ’. ನಿರ್ದೇಶಕ ಶ್ರೀನಿವಾಸ್ ರಾಜು ಅವರು ಫ್ಯಾಮಿಲಿ ಪ್ರೇಕ್ಷಕರನ್ನೇ ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ಮಾಡಿದಂತಿದೆ.

ಶ್ರೀಮಂತ ಮನೆತನದ ಹುಡುಗ, ಬಡ ಹುಡುಗಿಯನ್ನು ನೋಡಿ ಇಷ್ಟಪಡುತ್ತಾನೆ. ಆದರೆ ತಾನು ಶ್ರೀಮಂತ ಎಂಬುದನ್ನು ತೋರಿಸಿಕೊಳ್ಳದೇ ಮಧ್ಯಮವರ್ಗದ ಯುವಕನ ರೀತಿ ನಾಟಕವಾಡುತ್ತಾನೆ. ಆ ಮೂಲಕ ಆ ಹುಡುಗಿಯ ಮನಸ್ಸು ಗೆಲ್ಲಲು ಪ್ರಯತ್ನಿಸುತ್ತಾನೆ. ಸತ್ಯ ಗೊತ್ತಾದಾಗ ಒಂದು ದೊಡ್ಡ ಟ್ವಿಸ್ಟ್​ ಎದುರಾಗುತ್ತದೆ. ಅವರ ಪ್ರೀತಿಗೆ ಹೊಸ ಹೊಸ ಅಡ್ಡಿ ಆತಂಕಗಳು ಎದುರಾಗುತ್ತವೆ. ಅವುಗಳನ್ನೆಲ್ಲ ಹೀರೋ ಹೇಗೆ ಪರಿಹರಿಸಿಕೊಳ್ಳುತ್ತಾನೆ? ಕೊನೆಗೂ ಆ ಶ್ರೀಮಂತ ಯುವಕನ ಪ್ರೀತಿಯನ್ನು ಆ ಬಡ ಹುಡುಗಿ ಒಪ್ಪಿಕೊಳ್ಳುತ್ತಾಳೋ ಇಲ್ಲವೋ ಎಂಬುದನ್ನು ಪೂರ್ತಿ ಸಿನಿಮಾ ನೋಡಿಯೇ ತಿಳಿಯಬೇಕು.

ಹೀಗೆ ಕಥೆಯ ಒನ್​ ಲೈನ್​ ಹೇಳಿದರೆ ಖಂಡಿತವಾಗಿಯೂ ಈ ಕಥೆಯನ್ನು ಬೇರೆ ಯಾವುದೋ ಸಿನಿಮಾದಲ್ಲಿ ನಾವು ನೋಡಿದ್ದೇವಲ್ಲ ಎಂಬ ಅನುಮಾನ ಪ್ರೇಕ್ಷಕರಿಗೆ ಮೂಡುತ್ತದೆ. ಅದು ಸಹಜ ಕೂಡ. ಯಾಕೆಂದರೆ, ಕೆಲವು ಸಿನಿಮಾಗಳಲ್ಲಿ ಈಗಾಗಲೇ ಇಂಥ ಕಥೆಯ ಎಳೆ ಬಳಕೆ ಆಗಿದೆ. ಅಂಥ ಸಿನಿಮಾಗಳು ಜನಪ್ರಿಯ ಆಗಿವೆ ಕೂಡ. ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ಇರುವ ಒಂದು ನೆಗೆಟಿವ್​ ಅಂಶ ಇದು. ತುಂಬ ಫ್ರೆಶ್​ ಎನ್ನುವಂತಹ ಕಥೆ ಈ ಸಿನಿಮಾದ್ದಲ್ಲ. ಕಥೆಯ ಆರಂಭದಿಂದ ಕೊನೇ ತನಕ ಬೇರೆ ಬೇರೆ ಸಿನಿಮಾಗಳು ನೆನಪಾಗುತ್ತವೆ. ಹಾಗಿದ್ದರೂ ಕೂಡ ಪೂರ್ತಿಯಾಗಿ ನೋಡಿಸಿಕೊಂಡು ಹೋಗುವ ಗುಣ ಈ ಸಿನಿಮಾಗಿದೆ.

‘ಕೃಷ್ಣಂ ಪ್ರಣಯ ಸಖಿ’ ಸಿನಿಮಾಗೆ ಹಾಡುಗಳು ಸಖತ್​ ಕೊಡುಗೆ ನೀಡಿವೆ. ಆ ಮೂಲಕ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಅವರು ಹೆಚ್ಚು ಮೆಚ್ಚುಗೆ ಗಳಿಸುತ್ತಾರೆ. ಗಣೇಶ್​ ಅವರ ಮ್ಯೂಸಿಕಲ್ ಹಿಟ್​ ಸಿನಿಮಾಗಳ ಸಾಲಿಗೆ ‘ಕೃಷ್ಣಂ ಪ್ರಣಯ ಸಖಿ’ ಕೂಡ ಸೇರ್ಪಡೆ ಆಗಿದೆ. ಚಿತ್ರಮಂದಿರದಲ್ಲಿ ಜನರು ಈ ಸಿನಿಮಾದ ಹಾಡುಗಳನ್ನು ಖಂಡಿತಾ ಎಂಜಾಯ್​ ಮಾಡುತ್ತಾರೆ. ಇನ್ನು, ರಂಗಾಯಣ ರಘು, ಸಾಧುಕೋಕಿಲ, ಕುರಿ ಪ್ರತಾಪ್​, ಗಿರಿ ಅವರಂತಹ ಅತ್ಯುತ್ತಮ ಕಾಮಿಡಿ ಕಲಾವಿದರಿಂದಾಗಿ ಚಿತ್ರದಲ್ಲಿ ಭರಪೂರ ನಗು ತುಂಬಿದೆ. ತ್ರಿಕೋನ ಪ್ರೇಮಕಥೆ ಕೂಡ ಇರುವುದರಿಂದ ಕೊನೆವರೆಗೂ ಕೌತುಕ ಕಾಪಾಡಿಕೊಳ್ಳುತ್ತದೆ. ಇದೇ ಪ್ರಕಾರದ ಒಂದಷ್ಟು ಸಿನಿಮಾಗಳನ್ನು ಈಗಾಗಲೇ ನೋಡಿರುವವರು ಮಾತ್ರ ಸುಲಭವಾಗಿ ಕ್ಲೈಮ್ಯಾಕ್ಸ್​ ಊಹಿಸಬಹುದು. ಸಿನಿಮಾದ ಅವಧಿಯನ್ನು ತುಸು ತಗ್ಗಿಸಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ.

ಇದನ್ನೂ ಓದಿ: Bheema Movie Review: ಹೇಗಿದೆ ‘ಭೀಮ’ ಸಿನಿಮಾ? ನಿರ್ದೇಶಕರ ಉದ್ದೇಶ ಈಡೇರಿದೆಯೇ?

ಈ ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗ ಇದೆ. ಅದು ಈ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಕೂಡ ಆಗಿದೆ. ಕಥಾನಾಯಕನ ದೊಡ್ಡ ಕುಟುಂಬದಲ್ಲಿ ಶ್ರುತಿ, ರಾಮಕೃಷ್ಣ, ಶಶಿಕುಮಾರ್​, ಮಾನಸಿ ಸುಧೀರ್​ ಮುಂತಾದವರು ಇದ್ದಾರೆ. ಹೀರೋ ಜೊತೆಯಲ್ಲಿ ಸಾಧು ಕೋಕಿಲ, ಗಿರಿ ಆರಂಭದಿಂದ ಕೊನೆತನಕ ಸಾಥ್​ ನೀಡುತ್ತಾರೆ. ರಂಗಾಯಣ ರಘು ಅವರು ತೆರೆಮೇಲೆ ಬಂದಾಗಲೆಲ್ಲ ಭರ್ಜರಿ ಮನರಂಜನೆ ನೀಡುತ್ತಾರೆ. ಕಾಮಿಡಿ ಮತ್ತು ನೆಗೆಟಿವ್​ ಶೇಡ್​ ಇರುವ ಪಾತ್ರವನ್ನು ಅವರು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ. ಇನ್ನುಳಿದಂತೆ ಅವಿನಾಶ್​, ಶ್ರೀನಿವಾಸ್​ ಮೂರ್ತಿ, ಸಂಗೀತಾ ಮುಂತಾದವರು ಕೂಡ ಪಾತ್ರವರ್ಗದಲ್ಲಿದ್ದಾರೆ. ತಾಂತ್ರಿಕ ಗುಣಮಟ್ಟದ ವಿಚಾರದಲ್ಲಿ ಸಿನಿಮಾ ಎಲ್ಲಿಯೂ ರಾಜಿ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.