ಚಿತ್ರ: ಪಿಂಕಿ ಎಲ್ಲಿ?
ನಿರ್ಮಾಣ: ಕೃಷ್ಣೇಗೌಡ
ನಿರ್ದೇಶನ: ಪೃಥ್ವಿ ಕೊಣನೂರು
ಪಾತ್ರವರ್ಗ: ಅಕ್ಷತಾ ಪಾಂಡವಪುರ, ಗುಂಜಾಲಮ್ಮ, ದೀಪಕ್ ಸುಬ್ರಹ್ಮಣ್ಯ, ಅನೂಪ್ ಶೂನ್ಯ ಮುಂತಾದವರು.
ಸ್ಟಾರ್: 4/5
ಕನ್ನಡದ ‘ಪಿಂಕಿ ಎಲ್ಲಿ?’ ಸಿನಿಮಾ (Pinki Elli Movie) ಜಾಗತಿಕ ಮಟ್ಟದಲ್ಲಿ ಈಗಾಗಲೇ ಸದ್ದು ಮಾಡಿದೆ. ಹಲವಾರು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈಗ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾಗೆ ಪೃಥ್ವಿ ಕೊಣನೂರು (Prithvi Konanur) ನಿರ್ದೇಶನ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಈ ಸಿನಿಮಾದಲ್ಲಿ ಮನಮುಟ್ಟುವಂತಹ ಕಥೆಗಳು ಇವೆ. ಮಗುವನ್ನು ಕಳೆದುಕೊಂಡ ತಾಯಿಯ ಕಥೆ, ಕಾಯಿಲೆಗೆ ಒಳಗಾದ ಮಗನನ್ನು ಸಾಕಲು ಕಷ್ಟಪಡುತ್ತಿರುವ ಬಡ ಮಹಿಳೆಯ ಕಥೆ, ಸಂಸಾರದಲ್ಲಿ ಸಮತೋಲನ ಕಳೆದುಕೊಂಡ ಗಂಡನ ಕಥೆ, ಹೊಸ ಸಂಗಾತಿಯನ್ನು ಹುಡುಕಿ ಹೊರಟ ಯುವತಿಯ ಕಥೆ, ಸಂಕೀರ್ಣವಾದ ಸಂಬಂಧದಲ್ಲಿ ಸಿಲುಕಿಕೊಂಡ ಯುವಕನ ಕಥೆ, ಮಕ್ಕಳಿಲ್ಲದೇ ನೊಂದ ಹೆಂಗಸಿನ ಕಥೆ.. ಹೀಗೆ ಹಲವು ಜಗತ್ತುಗಳನ್ನು ಈ ಸಿನಿಮಾ ತೆರೆದಿಡುತ್ತದೆ. ಒಟ್ಟಾರೆ ‘ಪಿಂಕಿ ಎಲ್ಲಿ?’ ಸಿನಿಮಾ ಹೇಗಿದೆ ಎಂಬುದನ್ನು ತಿಳಿಯಲು ಈ ವಿಮರ್ಶೆ (Pinki Elli Review) ಓದಿ.
ನಗರದಲ್ಲಿ ವಾಸಿಸುವವರ ಜೀವನದಲ್ಲಿ ಸಾಕಷ್ಟು ಸಂಕೀರ್ಣತೆಗಳು ಇರುತ್ತವೆ. ಮಗು ಇನ್ನೂ ಚಿಕ್ಕದು. ಆದರೆ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆ ತಾಯಿಗೆ ಇರುತ್ತದೆ. ಆಗ ಮಗುವನ್ನು ಬೇರೆಯವರ ಜವಾಬ್ದಾರಿಗೆ ಒಪ್ಪಿಸಿ ಹೋಗುವ ಸಂದರ್ಭ ಬರುತ್ತದೆ. ಆದರೆ ಆ ಹಸುಗೂಸು ಏಕಾಏಕಿ ಕಾಣೆಯಾದರೆ? ತಾಯಿಗೆ ಆಗುವ ಸಂಕಟ ಅಷ್ಟಿಷ್ಟಲ್ಲ. ಇಂಥ ಒಂದು ಸೆಂಟಿಮೆಂಟ್ ಎಳೆಯನ್ನು ಇಟ್ಟುಕೊಂಡು ಪೃಥ್ವಿ ಕೊಣನೂರು ಅವರು ‘ಪಿಂಕಿ ಎಲ್ಲಿ?’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗೆದ್ದ ಸಿನಿಮಾಗಳು ಎಂದರೆ ಬೋರಿಂಗ್ ಆಗಿರುತ್ತವೆ ಎಂಬುದು ಅನೇಕರ ಮನೋಭಾವ. ಆದರೆ ‘ಪಿಂಕಿ ಎಲ್ಲಿ?’ ಚಿತ್ರ ಆ ರೀತಿ ಇಲ್ಲ. ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವನ್ನು ನೋಡಿದ ಅನುಭವ ಆಗುತ್ತದೆ. ಇದನ್ನು ಸಾಧಿಸಲು ನಿರ್ದೇಶಕರು ಯಾವುದೇ ಕಮರ್ಷಿಯಲ್ ಸೂತ್ರಗಳನ್ನು ಬಳಕೆ ಮಾಡಿಕೊಂಡಿಲ್ಲ ಎಂಬುದು ವಿಶೇಷ. ತುಂಬಾ ನೈಜವಾದಂತಹ ನಿರೂಪಣೆಯೊಂದಿಗೆ ಅವರು ಇಡೀ ಸಿನಿಮಾವನ್ನು ಬಹಳ ಕೌತುಕಮಯವಾಗಿ, ಮಂತ್ರಮುಗ್ಧಗೊಳಿಸುವಂತೆ ಚಿತ್ರಿಸಿದ್ದಾರೆ.
ಇದನ್ನೂ ಓದಿ: Daredevil Musthafa Review: ಭರಪೂರ ನಗಿಸುತ್ತಾ ಮತಗಳ ಜಗಳ ಬಿಡಿಸುವ ‘ಡೇರ್ಡೆವಿಲ್ ಮುಸ್ತಫಾ’
ಈ ಕಥೆಯಲ್ಲಿ ಭಾವನೆಗಳ ಏರಿಳಿತ ಇದೆ. ಆದರೆ ಅದನ್ನು ಮೆಲೋಡ್ರಾಮಾದ ರೀತಿಯಲ್ಲಿ ತೋರಿಸಲಿಲ್ಲ. ಎಷ್ಟು ಸಾಧ್ಯವೋ ಅಷ್ಟು ನ್ಯಾಚುರಲ್ ಆಗಿ ಎಲ್ಲವನ್ನೂ ತೋರಿಸುವ ಪ್ರಯತ್ನ ಆಗಿದೆ. ಅದೇ ಈ ಸಿನಿಮಾದ ಶಕ್ತಿ. ಪೂರ್ತಿ ಚಿತ್ರ ಸಿಂಕ್ ಸೌಂಡ್ನಲ್ಲಿ ಮೂಡಿಬಂದಿದೆ. ಎಲ್ಲಿಯೂ ಹಿನ್ನೆಲೆ ಸಂಗೀತ ಇಲ್ಲ. ನಾಟಕೀಯ ಎನಿಸುವಂತಹ ಸಂಭಾಷಣೆಗಳಿಲ್ಲ. ಆದರೂ ಕೂಡ ಪ್ರತಿ ದೃಶ್ಯವನ್ನು ತೀವ್ರವಾಗಿಸುವ ಶಕ್ತಿ ಈ ಸಿನಿಮಾದ ಚಿತ್ರಕಥೆಗೆ ಇದೆ. ಪಿಂಕಿ ಎಲ್ಲಿ ಹೋದಳು? ಕಡೆಗೂ ಆ ಮಗು ಸಿಗುತ್ತಾ ಅಥವಾ ಇಲ್ಲವೋ? ಕಾಣೆಯಾದ ಮಗುವಿನ ಹಿಂದೆ ಅಡಗಿರುವ ಸತ್ಯಗಳೇನು? ಇಂಥ ಹಲವು ಪ್ರಶ್ನೆಗಳನ್ನು ಪ್ರೇಕ್ಷಕರ ಮನದಲ್ಲಿ ಮೂಡಿಸುತ್ತಾ ಕೊನೆವರೆಗೂ ಕೌತುಕ ಕಾಯ್ದುಕೊಳ್ಳುವಲ್ಲಿ ಈ ಸಿನಿಮಾ ಯಶಸ್ವಿ ಆಗಿದೆ.
‘ಪಿಂಕಿ’ ಎಲ್ಲಿ ಸಿನಿಮಾದಲ್ಲಿನ ಪ್ರತಿಯೊಂದು ಪಾತ್ರ ಕೂಡ ಗಮನ ಸೆಳೆಯುತ್ತದೆ. ಇಲ್ಲಿ ಒಳ್ಳೆಯವರು ಯಾರು? ಕೆಟ್ಟವರು ಯಾರು ಎಂಬ ತೀರ್ಮಾನಗಳಿಲ್ಲ. ಹೀರೋ-ವಿಲನ್ ಎಂಬ ಜಡ್ಜ್ಮೆಂಟ್ ಇಲ್ಲ. ಎಲ್ಲವನ್ನೂ ನೋಡುಗರ ವಿವೇಚನೆಗೆ ಬಿಡಲಾಗಿದೆ. ನಿರ್ದೇಶಕರು ಯಾವ ಪಾತ್ರದ ಪರವನ್ನೂ ವಹಿಸಿಕೊಂಡು ಬಂದಿಲ್ಲ. ಒಂದು ಸಂದರ್ಭದಲ್ಲಿ ಒಳ್ಳೆಯವರು ಎನಿಸಿಕೊಂಡವರು ಇನ್ನೊಂದು ಸಂದರ್ಭದಲ್ಲಿ ಕೆಟ್ಟವರಂತೆ ಕಾಣುತ್ತಾರೆ. ಈ ಬದಲಾವಣೆಗಳು ಕೂಡ ತಂತಾನೇ ಆಗುತ್ತವೆಯೇ ಹೊರತು ಹೇರಿಕೆಯಿಂದ ಆಗಿಲ್ಲ. ಈ ಗುಣಗಳ ಕಾರಣಕ್ಕೆ ‘ಪಿಂಕಿ ಎಲ್ಲಿ?’ ಸಿನಿಮಾ ಭಿನ್ನವಾಗಿ ಗುರುತಿಸಿಕೊಳ್ಳುತ್ತದೆ.
ಇದನ್ನೂ ಓದಿ: 19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ
ನಟಿ ಅಕ್ಷತಾ ಪಾಂಡವಪುರ ಅವರು ಮಗುವಿನ ತಾಯಿಯಾಗಿ ಬಿಂದು ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ತುಂಬ ಸೂಕ್ಷ್ಮವಾಗಿ ಮತ್ತು ಸಹಜವಾಗಿ ಅವರು ಅಭಿನಯಿಸಿದ್ದಾರೆ. ದೀಪಕ್ ಸುಬ್ರಹ್ಮಣ್ಯ, ಅನೂಪ್ ಶೂನ್ಯ ಕೂಡ ಗಮನ ಸೆಳೆಯುತ್ತಾರೆ. ವೃತ್ತಿಪರ ನಟರಲ್ಲದ, ಸಿನಿಮಾ ಕ್ಷೇತ್ರದ ನಂಟು ಕಿಂಚಿತ್ತೂ ಇಲ್ಲದ ವ್ಯಕ್ತಿಗಳಿಂದ ಕೆಲವು ಮುಖ್ಯ ಪಾತ್ರಗಳನ್ನು ಈ ಸಿನಿಮಾದಲ್ಲಿ ಮಾಡಿಸಲಾಗಿದೆ. ಆ ದೃಷ್ಟಿಯಿಂದ ನೋಡಿದಾಗ ಗುಂಜಾಲಮ್ಮ, ಅನಸೂಯಾ, ಸಂಗಮ್ಮ, ಲಕ್ಷ್ಮೀ ನಾರಾಯಣ ಮುಂತಾದವರ ನಟನೆಗೆ ಮೆಚ್ಚುಗೆ ಸಲ್ಲಲೇಬೇಕು.
ನಟನೆ ಮಾತ್ರವಲ್ಲದೇ ಈ ಸಿನಿಮಾದ ಲೊಕೇಷನ್ಗಳ ವಿಚಾರದಲ್ಲೂ ಕೂಡ ನೈಜತೆಗೆ ಹೆಚ್ಚು ಒತ್ತು ನೀಡಲಾಗಿದೆ. ನಿರ್ದೇಶಕರ ಆಶಯಕ್ಕೆ ತಕ್ಕಂತೆ ಛಾಯಾಗ್ರಾಹಕ ಅರ್ಜುನ್ ರಾಜ ಮತ್ತು ಸಂಕಲನಕಾರ ಶಿವಕುಮಾರ ಸ್ವಾಮಿ ಶ್ರಮಿಸಿದ್ದಾರೆ. ಒಂದು ನೈಜ ಘಟನೆಯಿಂದ ಪ್ರೇರಿತವಾಗಿ ಮೂಡಿಬಂದ ಈ ಸಿನಿಮಾದಲ್ಲಿ ಹಲವು ಅಪರೂಪದ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಸಾಕಷ್ಟು ಸಂದೇಶಗಳನ್ನ ‘ಪಿಂಕಿ ಎಲ್ಲಿ?’ ಚಿತ್ರದ ಮೂಲಕ ನೀಡಲಾಗಿದೆ. ಆದರೆ ಅವೆಲ್ಲವೂ ಪ್ರತಿ ದೃಶ್ಯಗಳಲ್ಲಿ ಅಡಕವಾಗಿದೆಯೇ ಹೊರತು ಸಂಭಾಷಣೆಗಳ ರೂಪದಲ್ಲಿ ವಾಚ್ಯವಾಗಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.