Pushpa Movie Review: ‘ಪುಷ್ಪ’ ಅಂದ್ರೆ ಫ್ಲವರ್ ಅಲ್ಲ, ಅದೊಂದು ಶ್ರಮದಾಯಕ ದೀರ್ಘ ಪಯಣ

Pushpa Movie Rating: ಮರ ಕಡಿಯುವನಾಗಿ ಎಂಟ್ರಿ ಕೊಡುವ ಪುಷ್ಪ, ಹೇಗೆ ಬೆಳೆಯುತ್ತಾನೆ ಎನ್ನುವ ಪಯಣ ಕೊಂಚ ದೀರ್ಘವೆನಿಸಬಹುದು. ಈ ಪಯಣ ಪುಷ್ಪರಾಜ್​​ನಂತೆ ಪ್ರೇಕ್ಷಕನಿಗೂ ಕಠಿಣ ಎನಿಸುತ್ತದೆ.

Pushpa Movie Review: ‘ಪುಷ್ಪ’ ಅಂದ್ರೆ ಫ್ಲವರ್ ಅಲ್ಲ, ಅದೊಂದು ಶ್ರಮದಾಯಕ ದೀರ್ಘ ಪಯಣ
ಅಲ್ಲು ಅರ್ಜುನ್-ರಶ್ಮಿಕಾ
Follow us
|

Updated on:Dec 17, 2021 | 12:07 PM

ಸಿನಿಮಾ: ಪುಷ್ಪ

ಪಾತ್ರವರ್ಗ: ಅಲ್ಲು ಅರ್ಜುನ್​, ರಶ್ಮಿಕಾ, ಧನಂಜಯ, ಫಹಾದ್​ ಫಾಸಿಲ್​ ಮೊದಲಾದವರು..

ನಿರ್ದೇಶನ: ಸುಕುಮಾರ್​

ನಿರ್ಮಾಣ: ಮೈತ್ರಿ ಮೂವಿ ಮೇಕರ್ಸ್​

ಸ್ಟಾರ್​: 3/5

ನಟ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್​ ಕಾಂಬಿನೇಷನ್​ನ ‘ಪುಷ್ಪ’ ಸಿನಿಮಾ ಇಂದು (ಡಿಸೆಂಬರ್​ 17)​ಸಾಕಷ್ಟು ಹೈಪ್​ನೊಂದಿಗೆ ರಿಲೀಸ್​​ ಆಗಿದೆ. ಎರಡು ಪಾರ್ಟ್​ಗಳಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಮೊದಲ ಭಾಗ ಈಗ ಬಿಡುಗಡೆ ಆಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಹಾಗಾದರೆ, ಈ ಸಿನಿಮಾ ಹೇಗಿದೆ? ಪ್ರೇಕ್ಷಕರ ನಿರೀಕ್ಷೆಯನ್ನು ತಲುಪೋಕೆ ಸಾಧ್ಯವಾಯಿತಾ? ಆ ಪ್ರಶ್ನೆಗೆ ಈ ವಿಮರ್ಶೆಯಲ್ಲಿದೆ ಉತ್ತರ.

ಅದು ಶೇಷಾಚಲಂ ಕಾಡು. ಅಲ್ಲಿ ಬೆಳೆಯುವ ರಕ್ತಚಂದನದ ಚಿಕ್ಕ ತುಂಡಿಗೂ ಚಿನ್ನದ ಬೆಲೆ. ಕೊಡಲಿ ಏಟು ತಿನ್ನುವ  ಮರಗಳು ನಂತರ ರಫ್ತಾಗುವುದು ವಿದೇಶಕ್ಕೆ. ಹಾಗಂತ, ಈ ಮರದ ತುಂಡನ್ನು ಸಾಗಿಸೋದು ಅಷ್ಟು ಸುಲಭದ ಮಾತಲ್ಲ. ಪೊಲೀಸರ ಕಣ್ಣು ತಪ್ಪಿಸಿ ಕಳ್ಳ ಸಾಗಣೆ ಮಾಡಬೇಕು. ಬಂದರಿನಲ್ಲಿ ಯಾರಿಗೂ ಗೊತ್ತಾಗದಂತೆ ಹಡಗಿಗೆ ಏರಿಸಬೇಕು. ಈ ದಂಧೆಗೆ ಪುಷ್ಪರಾಜ್​​ನ​ (ಅಲ್ಲು ಅರ್ಜುನ್​) ಎಂಟ್ರಿ ಆಗುತ್ತದೆ. ಮರ ಕಡಿಯುವವನಾಗಿ ಸೇರಿಕೊಳ್ಳುವ ಪುಷ್ಪ ತನ್ನ ಚಾಕಚಕ್ಯತೆಯಿಂದ ಕೆಲವೇ ವರ್ಷಗಳಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾನೆ. ರಕ್ತ ಚಂದನದ ಮರದ ತುಂಡುಗಳು ವಿದೇಶಕ್ಕೆ ರಫ್ತಾಗುತ್ತಿದ್ದಂತೆ, ಪುಷ್ಪನ ಕಾಲಿನ ಅಡಿಗೆ ಹಣದ ಕಂತೆಕಂತೆಯೇ ಬಂದು ಬೀಳುತ್ತಿರುತ್ತದೆ. ಈ ಹಾದಿ ಹೇಗಿತ್ತು ಎಂಬುದನ್ನು ‘ಪುಷ್ಪ​’ ಹೇಳುತ್ತದೆ.

ನೂರಾರು ಕೋಟಿ ಖರ್ಚು ಮಾಡಿ ‘ಪುಷ್ಪ’ ಚಿತ್ರವನ್ನು ಕಟ್ಟಿಕೊಡಲಾಗಿದೆ. ಪ್ರತಿ ಫ್ರೇಮ್​ನಲ್ಲೂ ಆ ಅದ್ದೂರಿತನ ಕಾಣುತ್ತದೆ. ರಕ್ತ ಚಂದನದ ತುಂಡನ್ನು ಪೊಲೀಸರಿಗೆ ಸಿಗದಂತೆ ನೋಡಿಕೊಳ್ಳುವ ದೃಶ್ಯ, ಲಾರಿ ಚೇಸಿಂಗ್​, ಕಾಡಿನಲ್ಲಿ ಶೂಟ್​ ಮಾಡಲಾದ ಕೆಲ ಶಾಟ್​ಗಳು ಮೈ ನವಿರೇಳಿಸುತ್ತವೆ. ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್​ ಡಿಫರೆಂಟ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರಿಗೆ ಪ್ಲಸ್ ಆಗಿದೆ. ಅವರು ಭಿನ್ನ ಮ್ಯಾನರಿಸಂನಿಂದ ಇಷ್ಟವಾಗುತ್ತಾರೆ. ಆ್ಯಕ್ಷನ್​ ದೃಶ್ಯಗಳಲ್ಲಿ ಬರುವ ಪ್ರತಿ ಪ್ರೇಮ್​ಗಳಲ್ಲೂ ಅಲ್ಲು ಅರ್ಜುನ್​ ಮಿಂಚಿದ್ದಾರೆ. ಇಡೀ ಸಿನಿಮಾವನ್ನು ಭಾಗಶಃ ಅವರೇ ಆವರಿಸಿಕೊಂಡಿದ್ದಾರೆ. ಅವರು ಕಾಣದೇ ಇರುವ ದೃಶ್ಯಗಳು ಬೆರಳೆಣಿಕ ಮಾತ್ರ! ಮರ ಕಡಿಯುವನಾಗಿ ಎಂಟ್ರಿ ಕೊಡುವ ಪುಷ್ಪ, ಹೇಗೆ ಬೆಳೆಯುತ್ತಾನೆ ಎನ್ನುವ ಪಯಣ ಕೊಂಚ ದೀರ್ಘವೆನಿಸಬಹುದು. ಈ ಪಯಣ ಪುಷ್ಪರಾಜ್​​ನಂತೆ ಪ್ರೇಕ್ಷಕನಿಗೂ ಕಠಿಣ ಎನಿಸುತ್ತದೆ.

ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಡಿಗ್ಲಾಮ್​ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಶ್ರೀವಲ್ಲಿ ಪಾತ್ರಕ್ಕೆ ಅವರು ನ್ಯಾಯ ಒದಗಿಸಿದ್ದಾರೆ. ಪುಷ್ಪನ ಲವರ್ ಆಗಿ ಶ್ರೀವಲ್ಲಿ ಮಿಂಚಿದ್ದಾಳೆ. ಕನ್ನಡದ ಧನಂಜಯ ಅವರು ಜಾಲಿ ರೆಡ್ಡಿ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ ಭಾಗದಲ್ಲಿ ಅವರ ಪಾತ್ರಕ್ಕೆ ಅಷ್ಟಾಗಿ ಪ್ರಾಮುಖ್ಯತೆ ಇಲ್ಲದೆ ಇದ್ದರೂ ಎರಡನೇ ಪಾರ್ಟ್​ನಲ್ಲಿ ಅವರ ಪಾತ್ರ ತುಂಬಾನೇ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ ಎಂಬುದು ಪ್ರೇಕ್ಷಕರಿಗೆ ಮನದಟ್ಟಾಗುತ್ತದೆ.

ಸಮಂತಾ ಅವರು ಹೆಜ್ಜೆ ಹಾಕಿದ ‘ಹೂ ಅಂತೀಯಾ ಮಾವ..’ ಹಾಡು ಪ್ರೇಕ್ಷಕರಿಗೆ ಸಖತ್​ ಇಷ್ಟವಾಗುತ್ತದೆ. ಈ ಹಾಡು ಪ್ರೇಕ್ಷಕರಿಂದ ಸಿಳ್ಳೆ ಗಿಟ್ಟಿಸಿಕೊಳ್ಳುತ್ತದೆ. ದೇವಿಶ್ರೀ ಪ್ರಸಾದ್​ ಸಂಗೀತ ಚಿತ್ರಕ್ಕೆ ಪ್ಲಸ್​ ಆಗಿದೆ. ಸಿನಿಮಾಟೋಗ್ರಫಿ ಚಿತ್ರದ ಅದ್ದೂರಿತನವನ್ನು ಹೆಚ್ಚಿಸಿದೆ. ರೆಟ್ರೋ ಕಥೆಯನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಪ್ರತಿ ಫ್ರೇಮ್​ನಲ್ಲೂ ನಿರ್ದೇಶಕ ಸುಕುಮಾರ್​ ಶ್ರಮ ಎದ್ದು ಕಾಣುತ್ತದೆ.

ಇಡೀ ಸಿನಿಮಾದ ಹೈಲೈಟ್​ ರಕ್ತಚಂದನ. ಆದರೆ, ಅದರ ಬಗ್ಗೆ ಪ್ರೇಕ್ಷಕರಿಗೆ ಇನ್ನಷ್ಟು ಮಾಹಿತಿಯನ್ನು ಒದಗಿಸುವ ಕೆಲಸವನ್ನು ನಿರ್ದೇಶಕರು ಮಾಡಬಹುದಿತ್ತು. ಆದರೆ, ಅದನ್ನು ಮಾಡಿಲ್ಲ. ಈ ಕಾರಣಕ್ಕೆ ಸಾಕಷ್ಟು ಪ್ರಶ್ನೆಗಳು ಪ್ರೇಕ್ಷಕರ ಮನದಲ್ಲಿ ಹಾಗೆಯೇ ಉಳಿದುಕೊಳ್ಳುತ್ತವೆ. ಕಥೆಯಲ್ಲಿ ಗಟ್ಟಿತನ ತಂದಿದ್ದರೆ ಪ್ರೇಕ್ಷಕರಿಗೆ ‘ಪುಷ್ಪ’ ಮತ್ತಷ್ಟು ಇಷ್ಟವಾಗುತ್ತಿತ್ತು. ಸಿನಿಮಾ ಅವಧಿ ತುಂಬಾನೇ ದೀರ್ಘ ಎನಿಸುತ್ತದೆ. ಈ ಕಾರಣಕ್ಕೆ ಬಹಳಷ್ಟು ಕಡೆಗಳಲ್ಲಿ ಕತ್ತರಿ ಪ್ರಯೋಗ ಮಾಡೋ ಅವಕಾಶ ಸುಲಭವಾಗಿ ಸಿಗುತ್ತಿತ್ತು. ಫಹಾದ್​ ಫಾಸಿಲ್​ ಅವರು ಭನ್ವರ್ ಸಿಂಗ್ ಶೇಖಾವತ್ ಆಗಿ ಹೆಚ್ಚು ಅಂಕ ಪಡೆದುಕೊಳ್ಳುತ್ತಾರೆ.  ಮುಂದಿನ ಭಾಗದಲ್ಲಿ ಏನಾಗುತ್ತದೆ ಎನ್ನುವ ಕುತೂಹಲವೂ ಕ್ಲೈಮ್ಯಾಕ್ಸ್​ನಲ್ಲಿ ಹುಟ್ಟಿಕೊಳ್ಳುತ್ತದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ‘ಪುಷ್ಪ’ ಚಿತ್ರ ಬಹಿಷ್ಕರಿಸುವಂತೆ ಒತ್ತಾಯ; ಕಾರಣ ಏನು? 

Pushpa Movie First Half Review: ಮಾಸ್​ ಅಲ್ಲು ಅರ್ಜುನ್​; ಇಲ್ಲಿದೆ ‘ಪುಷ್ಪ’ ಚಿತ್ರದ ಫಸ್ಟ್​ ಹಾಫ್​ ವಿಮರ್ಶೆ

Published On - 11:18 am, Fri, 17 December 21