Seat Edge Movie Review: ನಗಿಸುತ್ತಾ ಹೆದರಿಸುವ ‘ಸೀಟ್ ಎಡ್ಜ್’ ಸಿನಿಮಾ

Seat Edge Movie Review: ನಗಿಸುತ್ತಾ ಹೆದರಿಸುವ ‘ಸೀಟ್ ಎಡ್ಜ್’ ಸಿನಿಮಾ
Seat Edge Movie Review
ಸೀಟ್ ಎಡ್ಜ್
UA
  • Time - 128 Minutes
  • Released - January 30, 2026
  • Language - Kannada
  • Genre - Horror, Thriller
Cast - ಸಿದ್ದು ಮೂಲಿಮನಿ, ರವೀಕ್ಷಾ ಶೆಟ್ಟಿ, ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಕಿರಣ್ ನಾಯಕ್ ಮುಂತಾದವರು.
Director - ಚೇತನ್ ಶೆಟ್ಟಿ
3
Critic's Rating

Updated on: Feb 01, 2026 | 3:15 PM

ನಟ ಸಿದ್ದು ಮೂಲಿಮನಿ (Siddu Moolimani) ಅವರು ಎಲ್ಲ ಬಗೆಯ ಪಾತ್ರಗಳನ್ನು ಪ್ರಯತ್ನಿಸುತ್ತಿದ್ದಾರೆ. ಅವರು ನಟಿಸಿರುವ ‘ಸೀಟ್ ಎಡ್ಜ್’ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಅವರು ಯೂಟ್ಯೂಬರ್ ಆಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾರರ್​ ಸಿನಿಮಾ. ಆದರೆ ಇಲ್ಲಿ ಕೇವಲ ಭಯ ಮಾತ್ರ ಇಲ್ಲ. ಅದರ ಜೊತೆಗೆ ಕಾಮಿಡಿ ಕೂಡ ಇದೆ. ಅಂದರೆ, ಪ್ರೇಕ್ಷಕರನ್ನು ನಗಿಸುತ್ತಲೇ ಆಗಾಗ ಹೆದರಿಸುವ ಗುಣ ಈ ಸಿನಿಮಾಗಿದೆ. ‘ಸೀಟ್ ಎಡ್ಜ್’ ಸಿನಿಮಾ (Seat Edge Movie) ವಿಮರ್ಶೆ ಇಲ್ಲಿದೆ ಓದಿ..

‘ಸೀಟ್​ ಎಡ್ಜ್’ ಸಿನಿಮಾದಲ್ಲಿ ಸಿದ್ದು ಮೂಲಿಮನಿ ಅವರ ಜೊತೆ ರವೀಕ್ಷಾ ಶೆಟ್ಟಿ, ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಕಿರಣ್ ನಾಯಕ್ ಅವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಚೇತನ್ ಶೆಟ್ಟಿ ನಿರ್ದೇಶಿಸಿರುವ ಈ ಸಿನಿಮಾಗೆ ಗಿರಿಧರ ಟಿ. ವಸಂತಪುರ ಅವರು ಬಂಡವಾಳ ಹೂಡಿದ್ದಾರೆ.

ಇದು ಯೂಟ್ಯೂಬ್, ಇನ್​ಸ್ಟಾಗ್ರಾಮ್ ಜಮಾನ. ಈ ಕಾಲದಲ್ಲಿ ಜನರು ವ್ಯೂಸ್, ಲೈಕ್ ಪಡೆಯಲು ಏನು ಬೇಕಾದರೂ ಮಾಡುತ್ತಾರೆ. ಅಂಥ ಒಬ್ಬ ವ್ಲಾಗರ್ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಯೂಟ್ಯೂಬರ್ ಸಿದ್ದು ಆರಂಭದಲ್ಲಿ ಏನೇನೋ ವಿಡಿಯೋ ಮಾಡುತ್ತಾನೆ. ಅದನ್ನು ಜನರು ಟ್ರೋಲ್ ಮಾಡುತ್ತಾರೆ. ಏನಾದರೂ ಮಾಡಿ ಜನರ ಮೆಚ್ಚುಗೆ ಗಳಿಸಬೇಕು ಎಂಬ ಹಠದಿಂದ ಘೋಸ್ಟ್ ಹಂಟಿಂಗ್ ಮಾಡಲು ಆತ ನಿರ್ಧರಿಸುತ್ತಾನೆ.

ಪ್ರಾಣವನ್ನು ಪಣಕ್ಕಿಟ್ಟು ಭೂತ ಬಂಗಲೆಗೆ ಹೋಗುವ ಸಿದ್ದುಗೆ ಚಿತ್ರ-ವಿಚಿತ್ರ ಅನುಭವಗಳು ಆಗುತ್ತವೆ. ಆ ಬಂಗಲೆಗೆ ಹೋದವರು ಯಾರೂ ಜೀವಂತವಾಗಿ ವಾಪಸ್ ಬರಲ್ಲ ಎಂಬ ಮಾತಿದೆ. ಹಾಗಾದರೆ ಸಿದ್ದು ಬದುಕಿಬರುತ್ತಾನಾ? ಆತನ ಘೋಸ್ಟ್ ಹಂಟಿಂಗ್ ಕೆಲಸ ಯಶಸ್ವಿ ಆಗುತ್ತಾ? ಅಲ್ಲಿ ದೆವ್ವ ಆಗಿರುವುದು ಯಾರು? ಇತ್ಯಾದಿ ವಿಷಯಗಳು ಕ್ಲೈಮ್ಯಾಕ್ಸ್​ನಲ್ಲಿ ತಿಳಿಯುತ್ತದೆ.

ಇಡೀ ಸಿನಿಮಾದಲ್ಲಿ ಇರುವುದು ಕೆಲವೇ ಪಾತ್ರಗಳು. ಆ ಪಾತ್ರಗಳ ಮೂಲಕವೇ ಪ್ರೇಕ್ಷಕರನ್ನು ನಗಿಸುವ ಮತ್ತು ಹೆಸರಿಸುವ ಪ್ರಯತ್ನ ಮಾಡಲಾಗಿದೆ. ಸಿನಿಮಾದ ಮೊದಲಾರ್ಥದಲ್ಲಿ ಕಾಮಿಡಿಗೆ ಹೆಚ್ಚು ಮಹತ್ವ ನೀಡಲಾಗಿದೆ. ನಿಜವಾದ ಹಾರರ್ ಫೀಲ್ ಶುರುವಾಗುವುದೇ ಮಧ್ಯಂತರದ ಬಳಿಕ. ಹೀಗೆ.. ನಗು ಮತ್ತು ಭಯವನ್ನು ಬ್ಯಾಲೆನ್ಸ್ ಮಾಡುತ್ತಾ ಈ ಸಿನಿಮಾ ಸಾಗುತ್ತದೆ.

ಗಿರೀಶ್ ಶಿವಣ್ಣ ಮತ್ತು ರಘು ರಾಮನಕೊಪ್ಪ ಅವರು ಕಾಮಿಡಿ ಕಿಕ್ ನೀಡುತ್ತಾರೆ. ಅವರಿಗೆ ಸಿದ್ದು ಕೂಡ ಚೆನ್ನಾಗಿ ಸಾಥ್ ನೀಡುತ್ತಾರೆ. ಹಾರರ್ ಪ್ರಿಯರು ಇಷ್ಟಪಡುವಂತಹ ಹಲವು ದೃಶ್ಯಗಳು ಈ ಸಿನಿಮಾದಲ್ಲಿ ಇವೆ. ಪಾಳುಬಿದ್ದ ಬಂಗಲೆಯಲ್ಲಿ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಕ್ಲೈಮ್ಯಾಕ್ಸ್ ಸಮೀಪ ಆಗುವಾಗ ಶೀರ್ಷಿಕೆಗೆ ತಕ್ಕಂತೆಯೇ ಪ್ರೇಕ್ಷಕರು ಸೀಟಿನ ತುದಿಯಲ್ಲಿ ಕುಳಿತು ಸಿನಿಮಾ ನೋಡುವಂತಾಗುತ್ತದೆ.

ಇದನ್ನೂ ಓದಿ: Chowkidar Review: ಅಪ್ಪನ ಅಗಾಧ ಪ್ರೀತಿಯ ಪ್ಲಸ್, ಮೈನಸ್ ತೋರಿಸುವ ‘ಚೌಕಿದಾರ್’

ಆಕಾಶ್ ಪರ್ವ ಅವರ ಹಿನ್ನೆಲೆ ಸಂಗೀತದಿಂದ ‘ಸೀಟ್ ಎಡ್ಜ್’ ಚಿತ್ರದ ಹಾರರ್ ಎಫೆಕ್ಟ್ ಹೆಚ್ಚಿದೆ. ದೀಪಕ್ ಕುಮಾರ್ ಜೆ.ಕೆ. ಅವರ ಛಾಯಾಗ್ರಹಣಕ್ಕೂ ಮೆಚ್ಚುಗೆ ಸಲ್ಲುತ್ತದೆ. ಇವುಗಳ ನಡುವೆ ಕೆಲವು ಮೈಸನ್ ಅಂಶಗಳು ಕೂಡ ಈ ಚಿತ್ರದಲ್ಲಿ ಇವೆ. ಹಳೇ ಹಾರರ್ ತಂತ್ರಗಳನ್ನೇ ಬಳಸಿಕೊಂಡು ಪ್ರೇಕ್ಷಕರನ್ನು ಹೆದರಿಸಲು ಪ್ರಯತ್ನಿಸಲಾಗಿದೆ. ಹೊಸತನ ಬಯಸುವ ಪ್ರೇಕ್ಷಕರಿಗೆ ಇದರಿಂದ ಸ್ವಲ್ಪ ಬೇಸರ ಆಗಬಹುದು. ದ್ವಿತೀಯಾರ್ಧದಲ್ಲಿ ಬರುವ ಡ್ಯುಯೆಟ್ ಸಾಂಗ್​ನಿಂದ ಚಿತ್ರದ ಓಟಕ್ಕೆ ಅಡೆತಡೆ ಆದಂತಾಗಿದೆ. ಇಂಥ ಕೆಲವು ಅಂಶಗಳನ್ನು ಬದಿಗಿಟ್ಟು ನೋಡಿದರೆ ಹಾರರ್​ ಪ್ರಿಯರಿಗೆ ‘ಸೀಟ್ ಎಡ್ಜ್’ ಸಿನಿಮಾ ಹಿಡಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.