ಸೀಟ್ ಎಡ್ಜ್: ಮತ್ತೆ ನೈಜ ಘಟನೆ ಆಧಾರಿತ ಸಿನಿಮಾದಲ್ಲಿ ಸಿದ್ದು ಮೂಲಿಮನಿ
ವಿಶೇಷ ಕಥಾಹಂದರ ಇರುವ ‘ಸೀಟ್ ಎಡ್ಜ್’ ಸಿನಿಮಾದಲ್ಲಿ ಸಿದ್ದು ಮೂಲಿಮನಿ ಅವರು ನಟಿಸಿದ್ದಾರೆ. ರಿಯಲ್ ಲೈಫ್ ಘಟನೆ ಆಧರಿಸಿ ಈ ಸಿನಿಮಾ ಮೂಡಿಬರುತ್ತಿದೆ. ರವೀಕ್ಷಾ ಶೆಟ್ಟಿ ಅವರು ನಾಯಕಿಯಾಗಿದ್ದಾರೆ. ಗಿರಿಧರ ಟಿ. ವಸಂತಪುರ ಅವರು ನಿರ್ಮಾಣ ಮಾಡಿರುವ ಈ ಚಿತ್ರ 2026ರ ಆರಂಭದಲ್ಲೇ ಬಿಡುಗಡೆ ಆಗಲಿದೆ.

ನಟ ಸಿದ್ದು ಮೂಲಿಮನಿ (Siddu Moolimani) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಅಭಿನಯಿಸಿದ ‘ಲವ್ ಯು ಮುದ್ದು’ ಸಿನಿಮಾ ಬಿಡುಗಡೆ ಆಗಿತ್ತು. ರಿಯಲ್ ಘಟನೆ ಆಧರಿಸಿ ಮೂಡಿಬಂದ ಆ ಸಿನಿಮಾಗೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅದರ ಬೆನ್ನಲ್ಲೇ ಸಿದ್ದು ಮೂಲಿಮನಿ ಅವರು ಇನ್ನೊಂದು ನೈಜ ಘಟನೆ ಆಧಾರಿತ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ಹೌದು, ಸಿದ್ದು ಮೂಲಿಮನಿ ಹೀರೋ ಆಗಿ ನಟಿಸಿರುವ ‘ಸೀಟ್ ಎಡ್ಜ್’ (Seat Edge) ಚಿತ್ರ ಬಿಡುಗಡೆಗೆ ತಯಾರಾಗುತ್ತಿದೆ. ಇದು ಸಹ ನೈಜ ಘಟನೆ ಆಧಾರಿತ ಸಿನಿಮಾ.
ಹೊಸ ನಿರ್ದೇಶಕ ಚೇತನ್ ಶೆಟ್ಟಿ ಅವರು ‘ಸೀಟ್ ಎಡ್ಜ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಸಿದ್ದು ಮೂಲಿಮನಿ ಅವರು ಯೂಟ್ಯೂಬರ್ ಪಾತ್ರವನ್ನು ಮಾಡಿದ್ದಾರೆ. ಇಂಡಿಯನ್ ಪ್ಯಾರಾನಾರ್ಮಲ್ ಇನ್ವೆಸ್ಟಿಗೇಟರ್, ಉತ್ತರ ಭಾರತದ ಘೋಸ್ಟ್ ಹಂಟರ್ ಖ್ಯಾತಿಯ ಗೌರವ್ ತಿವಾರಿ ಅವರ ಜೀವನದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ‘ಸೀಟ್ ಎಡ್ಜ್’ ಸಿನಿಮಾ ಸಿದ್ಧವಾಗುತ್ತಿದೆ.
ಈ ಸಿನಿಮಾದಲ್ಲಿ ನಿಗೂಢ ಸ್ಥಳವೊಂದಕ್ಕೆ ಘೋಸ್ಟ್ ಹಂಟಿಂಗ್ ವಿಡಿಯೋ ಮಾಡಲು ಹೋಗುವ ಯೂಟ್ಯೂಬರ್ ಹುಡುಗನೊಬ್ಬ ಆ ಜಾಗದಲ್ಲಿ ಏನೆಲ್ಲ ತೊಂದರೆಗಳನ್ನು ಅನುಭವಿಸುತ್ತಾನೆ ಎಂಬುದರ ಸುತ್ತ ‘ಸೀಟ್ ಎಡ್ಜ್’ ಸಿನಿಮಾದ ಕಥೆ ಸಾಗುತ್ತದೆ. ಕನ್ನಡದ ಮಟ್ಟಿಗೆ ಇದು ಒಂದು ಹೊಸ ಬಗೆಯ ಪ್ರಯೋಗಾತ್ಮಕ ಸಿನಿಮಾ. ಶೀರ್ಷಿಕೆಗೆ ತಕ್ಕಂತೆಯೇ ಪ್ರೇಕ್ಷಕರನ್ನು ಈ ಸಿನಿಮಾ ‘ಸೀಟ್ ಎಡ್ಜ್’ನಲ್ಲಿ ಕೂರಿಸುತ್ತದೆ’ ಎಂದು ನಟ ಸಿದ್ದು ಮೂಲಿಮನಿ ಅವರು ಹೇಳಿದ್ದಾರೆ.
ಗಿರಿಧರ ಟಿ. ವಸಂತಪುರ ಅವರು ‘ಸೀಟ್ ಎಡ್ಜ್’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ರವೀಕ್ಷಾ ಶೆಟ್ಟಿ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ ಮುಂತಾದ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. 2026ರ ಆರಂಭದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಸಿದ್ದು ಮೂಲಿಮನಿ ಹೊಸ ಹಾಡು ‘ಹಂಗೋ ಹಿಂಗೋ’: ಸೀಟ್ ಎಡ್ಜ್ ಚಿತ್ರದಲ್ಲಿ ರವೀಕ್ಷಾ ಜೋಡಿ
‘ಸೀಟ್ ಎಡ್ಜ್’ ಸಿನಿಮಾದ ಬಹುತೇಕ ಕೆಲಸಗಳು ಈಗಾಗಲೇ ಪೂರ್ಣ ಆಗಿವೆ. ಸಿನಿಮಾದ 2 ಹಾಡುಗಳು ಹಾಗೂ ‘ಲೂಪ್ 1’ ಹೆಸರಿನಲ್ಲಿ ಮೊದಲ ಟೀಸರ್ ಬಿಡುಗಡೆ ಮಾಡಲಾಗಿದೆ. ಅವು ಜನಮೆಚ್ಚುಗೆ ಗಳಿಸಿವೆ. ಅದೇ ಖುಷಿಯಲ್ಲಿ ಇರುವ ಚಿತ್ರತಂಡದವರು ಶೀಘ್ರದಲ್ಲಿಯೇ ಮತ್ತೊಂದು ಹಾಡು ಹಾಗೂ ಟ್ರೇಲರ್ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




