Tarka Movie Review: ತರ್ಕ ಚಿತ್ರದಲ್ಲಿದೆ ಲವ್ ಸ್ಟೋರಿ ಜೊತೆ ಎಚ್ಚರಿಕೆಯ ಪಾಠ
‘ತರ್ಕ’ ಸಿನಿಮಾದಲ್ಲಿ ಲವ್ ಸ್ಟೋರಿ ಮತ್ತು ಮರ್ಡರ್ ಮಿಸ್ಟರಿ ಇದೆ. ಮೊದಲಾರ್ಧದಲ್ಲಿ ಪ್ರೇಮ್ ಕಹಾನಿ ಇದೆ. ದ್ವಿತೀಯಾರ್ಧದಲ್ಲಿ ಕೊಲೆ ಕೌತುಕ ಹೆಚ್ಚಾಗುತ್ತದೆ. ಬಹುತೇಕ ಹೊಸ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಇದರಿಂದ ಈ ಸಸ್ಪೆನ್ಸ್ ಕಹಾನಿಗೆ ಅನುಕೂಲ ಆಗಿದೆ. ‘ತರ್ಕ’ ಸಿನಿಮಾದ ವಿಮರ್ಶೆ ಇಲ್ಲಿದೆ..

ಸಿನಿಮಾ: ತರ್ಕ. ನಿರ್ಮಾಣ: ರಶ್ಮಿತಾ ಸಂತೋಷ್ ಕುಮಾರ್. ನಿರ್ದೇಶನ: ಪುನೀತ್ ಮಾನವ. ಪಾತ್ರವರ್ಗ: ಅಂಜನ್ ಮೂರ್ತಿ, ಪ್ರತಿಮಾ ಠಾಕೂರ್, ಶ್ವೇತಾ ಶ್ರೀನಿವಾಸ್, ನಿವಾಸ್ ಮುಂತಾದವರು. ಸ್ಟಾರ್: 3/5
ಈ ವಾರ (ಮಾರ್ಚ್ 7) ‘ತರ್ಕ’ ಸಿನಿಮಾ ರಿಲೀಸ್ ಆಗಿದೆ. ಟೈಟಲ್ ಮೂಲಕ ಈ ಚಿತ್ರ ಕೌತುಕ ಮೂಡಿಸಿತ್ತು. ಯಾಕೆಂದರೆ, ಆ ಶೀರ್ಷಿಕೆಗೆ ಅಂಥ ಚಾರ್ಮ್ ಇದೆ. 1989ರಲ್ಲಿ ಸುನಿಲ್ ಕುಮಾರ್ ದೇಸಾಯಿ ಅವರು ಈ ಟೈಟಲ್ನಲ್ಲಿ ಸಿನಿಮಾ ಮಾಡಿದ್ದರು. ಈಗ ಅದೇ ಟೈಟಲ್ ಬಳಸಿಕೊಂಡು ಹೊಸಬರು ಸಿನಿಮಾ ಮಾಡಿದ್ದಾರೆ. ಆದರೆ ಹಳೇ ತರ್ಕಕ್ಕೂ ಹೊಸ ತರ್ಕಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಬೇರೆಯದೇ ಕಥೆ.
ಪಕ್ಕಾ ಲೋಕಲ್ ಹುಡುಗರ ಲವ್ ಸ್ಟೋರಿ ‘ತರ್ಕ’ ಸಿನಿಮಾದಲ್ಲಿ ಇದೆ. ಸಂಜೆಯಾದರೆ ಒಂದೆಡೆ ಸೇರಿ ಎಣ್ಣೆ ಪಾರ್ಟಿ ಮಾಡುವವರು, ಆಗಾಗ ಸಣ್ಣ ಪುಟ್ಟ ವಿಚಾರಕ್ಕೆ ಕಿರಿಕ್ ಮಾಡಿಕೊಳ್ಳುವವರೇ ಈ ಸಿನಿಮಾದ ಮುಖ್ಯ ಪಾತ್ರಗಳು! ಇಂಥ ಹುಡುಗರ ಜೀವನದಲ್ಲಿ ಪ್ರೀತಿ ಚಿಗುರಿದರೆ ಮುಂದೆ ಏನೆಲ್ಲ ಆಗಬಹುದು ಎಂಬುದೇ ಈ ಸಿನಿಮಾದ ಕಥೆ. ಆದರೆ ಇದರಲ್ಲಿ ಎಲ್ಲವನ್ನೂ ಅಷ್ಟು ಸುಲಭವಾಗಿ ಊಹಿಸೋಕೆ ಆಗಲ್ಲ. ಅಷ್ಟರಮಟ್ಟಿಗೆ ಸಸ್ಪೆನ್ಸ್ ಕಾಪಾಡಿಕೊಂಡು ಸಾಗುತ್ತದೆ ಈ ಸಿನಿಮಾ.
ಮಾಂಸದ ಅಂಗಡಿ ಇಟ್ಟುಕೊಂಡಿರುವ ಪುರುಷೋತ್ತಮ ಎಂಬ ಹುಡುಗನಿಗೆ ಮುಸ್ಲಿಂ ಯುವತಿ ಅಫಿಫಾ ಜೊತೆ ಲವ್ ಆಗುತ್ತದೆ. ಅದಕ್ಕೆ ಪುರುಷೋತ್ತಮನ ಆಪ್ತ ಸ್ನೇಹಿತರು ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ಎಲ್ಲರನ್ನೂ ಎದುರು ಹಾಕಿಕೊಂಡು ಅಫಿಫಾ ಜೊತೆ ಪುರುಷೋತ್ತಮನ ಲವ್ ಮುಂದುವರಿಯುತ್ತದೆ. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ ಎನ್ನುವಾಗ ಅಫಿಫಾ ಕಾಣೆಯಾಗುತ್ತಾಳೆ. ಪುರುಷೋತ್ತಮನ ಮೇಲೆ ಕೊಲೆ ಆರೋಪ ಎದುರಾಗುತ್ತದೆ! ಹಾಗಾದರೆ ಅಫಿಫಾಗೆ ಏನಾಯಿತು? ಪುರುಷೋತ್ತಮ ನಿಜಕ್ಕೂ ಕೊಲೆ ಮಾಡಿದ್ದಾನಾ? ಅವನು ನಿರಪರಾಧಿ ಎಂಬುದಾದರೆ ಕೊಲೆ ಮಾಡಿದವರು ಯಾರು? ಇಂಥ ಹಲವು ಪ್ರಶ್ನೆಗಳು ಪ್ರೇಕ್ಷಕರ ಮನಸ್ಸಿನಲ್ಲಿ ಮೂಡುತ್ತವೆ.
ಈ ಸಿನಿಮಾದ ಮೊದಲಾರ್ಧ ಮತ್ತು ದ್ವಿತೀಯಾರ್ಧ ಸಂಪೂರ್ಣ ಬೇರೆ ಬೇರೆ ರೀತಿ ಇವೆ. ಫಸ್ಟ್ ಹಾಫ್ ನೋಡುವಾಗ ಇದು ಯಾವುದೋ ಪೊರ್ಕಿಗಳ ಪ್ರೇಮ್ ಕಹಾನಿ ಎನಿಸುತ್ತದೆ. ಆದರೆ ದ್ವಿತೀಯಾರ್ಧದಲ್ಲಿ ನಿರ್ದೇಶಕರು ಒಂದು ಗಂಭೀರ ವಿಷಯದ ಬಗ್ಗೆ ಹೇಳುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಪ್ರೀತಿ-ಪ್ರೇಮದ ಬಲೆಗೆ ಬೀಳುವ ಅನೇಕರಿಗೆ ಈ ಸಿನಿಮಾದಲ್ಲಿ ಎಚ್ಚರಿಕೆ ಪಾಠ ಮಾಡಲಾಗಿದೆ. ಮರ್ಡರ್ ಮಿಸ್ಟರಿ ಕಹಾನಿ ಇರುವುದರಿಂದ ಆರಂಭದಿಂದ ಕೊನೆತನಕ ನೋಡಿಸಿಕೊಂಡು ಹೋಗುತ್ತದೆ.
‘ತರ್ಕ’ ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರು ನಟಿಸಿದ್ದಾರೆ. ಅದು ಈ ಚಿತ್ರಕ್ಕೆ ಪ್ಲಸ್ ಆಗಿದೆ. ಯಾಕೆಂದರೆ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂದು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಈ ಪಾತ್ರಗಳು ಮೂಡಿಬಂದಿವೆ. ಇನ್ನು, ಈ ಚಿತ್ರದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ಪಾತ್ರಗಳು ಇವೆ. ಹಾಗಾಗಿ ಪ್ರೇಕ್ಷಕರ ತಲೆಯಲ್ಲಿ ಕುತೂಹಲದ ಹತ್ತಾರು ಪ್ರಶ್ನೆಗಳು ಮೂಡುತ್ತವೆ. ಧರ್ಮದ ವಿಚಾರಗಳು ನುಸುಳಿವೆ.
ಇದನ್ನೂ ಓದಿ: Bhaava Theera Yaana Review: ಪ್ರೀತಿ ಪಡೆದುಕೊಂಡವರಿಗೂ, ಕಳೆದುಕೊಂಡವರಿಗೂ ಹಿಡಿಸುವ ‘ಭಾವ ತೀರ ಯಾನ’
ಇನ್ನು, ಈ ಸಿನಿಮಾದಲ್ಲಿ ಕೆಲವು ಮೈನಸ್ ಅಂಶಗಳು ಕೂಡ ಇವೆ. ಪ್ರೇಮ್ ಕಹಾನಿ ಇರುವುದರಿಂದ ಹಾಡುಗಳಿಗೆ ಇನ್ನಷ್ಟು ಒತ್ತು ನೀಡಬಹುದಿತ್ತು. ಒಂದಷ್ಟು ದೃಶ್ಯಗಳು ತುಂಬ ಜಾಳಾಗಿವೆ. ಶೀರ್ಷಿಕೆ ‘ತರ್ಕ’ ಎಂದಿದ್ದರೂ ಕೂಡ ಕೆಲವು ಕಡೆ ಲಾಜಿಕ್ ಕಾಣೆ ಆಗಿದೆ. ಕೆಲವು ಕಲಾವಿದರ ನಟನೆಯಲ್ಲಿ ಸುಧಾರಣೆ ಕಾಣಬೇಕಿದೆ. ಇಂಥ ಕೆಲವು ಅಂಶಗಳನ್ನು ಬದಿಗಿಟ್ಟು ನೋಡಿದರೆ ‘ತರ್ಕ’ ಚಿತ್ರ ಹಿಡಿಸುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.