ಸಿನಿಮಾ: ವೇದ
ನಿರ್ಮಾಣ: ಗೀತಾ ಶಿವರಾಜ್ಕುಮಾರ್, ಜೀ ಸ್ಟುಡಿಯೋಸ್
ನಿರ್ದೇಶನ: ಎ. ಹರ್ಷ
ಪಾತ್ರವರ್ಗ: ಶಿವರಾಜ್ಕುಮಾರ್, ಗಾನವಿ ಲಕ್ಷ್ಮಣ್, ಉಮಾಶ್ರೀ, ಅದಿತಿ ಸಾಗರ್, ರಘು ಶಿವಮೊಗ್ಗ ಮುಂತಾದವರು.
ಸ್ಟಾರ್: 3/5
ನಿರ್ದೇಶಕ ಎ. ಹರ್ಷ ಮತ್ತು ಶಿವರಾಜ್ಕುಮಾರ್ ಅವರ ಕಾಂಬಿನೇಷನ್ನಲ್ಲಿ ಮೂಡಿಬಂದ ಸಿನಿಮಾ ಎಂಬ ಕಾರಣಕ್ಕೆ ‘ವೇದ’ ಚಿತ್ರ ನಿರೀಕ್ಷೆ ಮೂಡಿಸಿತ್ತು. ಈ ಸಿನಿಮಾ ತುಂಬ ರಗಡ್ ಆಗಿ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್ನಲ್ಲೇ ಸುಳಿವು ಸಿಕ್ಕಿತ್ತು. ಇಂದು (ಡಿ.23) ಅದ್ದೂರಿಯಾಗಿ ಈ ಚಿತ್ರ ರಿಲೀಸ್ ಆಗಿದೆ. ನಿರೀಕ್ಷೆಯಂತೆಯೇ ತುಂಬ ಮಾಸ್ ಆಗಿ ‘ವೇದ’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಎ. ಹರ್ಷ. ಮೇಕಿಂಗ್ ಶೈಲಿ ಮಾಸ್ ಆಗಿದ್ದರೂ ಕೂಡ ಫ್ಯಾಮಿಲಿ ಆಡಿಯನ್ಸ್ಗೆ ಇಷ್ಟ ಆಗುವ ಕಥಾವಸ್ತುವನ್ನು ಆಯ್ದುಕೊಳ್ಳಲಾಗಿದೆ. ಒಟ್ಟಾರೆ ಸಿನಿಮಾ ಹೇಗಿದೆ? ಈ ಚಿತ್ರದ ಪ್ಲಸ್ ಏನು? ಮೈನಸ್ ಏನು? ಏನೆಲ್ಲ ವಿಶೇಷತೆಗಳಿವೆ ಎಂಬುದನ್ನು ತಿಳಿಯಲು ಈ ವಿಮರ್ಶೆ ಓದಿ..
ಕಥಾನಾಯಕನ ಹೆಸರು ವೇದ. ಆತನಿಗೊಂದು ಭಯಾನಕವಾದ ಫ್ಲ್ಯಾಶ್ ಬ್ಯಾಕ್. ತನ್ನ ಕುಟುಂಬಕ್ಕೆ ಅನ್ಯಾಯ ಮಾಡಿದ ದುಷ್ಟರ ವಿರುದ್ಧ ಆತ ಸೇಡು ತೀರಿಸಿಕೊಳ್ಳಲು ಹಲವು ವರ್ಷ ತಾಳ್ಮೆಯಿಂದ ಕಾಯುತ್ತಾನೆ. ಸೂಕ್ತ ಸಮಯ ಬಂದಾಗ ಸಿಡಿದೇಳುತ್ತಾನೆ. ಇದು ಈ ಸಿನಿಮಾದ ಒನ್ ಲೈನ್ ಕಥೆ. ಇಷ್ಟೇ ಆಗಿದ್ದರೆ ಇದು ಹತ್ತರಲ್ಲಿ ಹನ್ನೊಂದನೆಯ ಚಿತ್ರವಾಗುತ್ತಿತ್ತು. ಆದರೆ ಇಲ್ಲಿ ಕಥಾನಾಯಕನಿಗೆ ಆತನ ಮಗಳು ಕೂಡ ಸಾಥ್ ನೀಡುತ್ತಾಳೆ. ಅವಳೂ ಕತ್ತಿ ಹಿಡಿದು ದುಷ್ಟರ ಸಂಹಾರ ಮಾಡುತ್ತಾಳೆ. ಆ ಕಾರಣದಿಂದ ‘ವೇದ’ ಸಿನಿಮಾ ಕೊಂಚ ಡಿಫರೆಂಟ್ ಎನಿಸಿಕೊಂಡಿದೆ.
ಇಡೀ ಸಿನಿಮಾದಲ್ಲಿ ಶಿವರಾಜ್ಕುಮಾರ್ ಮತ್ತು ಅದಿತಿ ಸಾಗರ್ ಅವರ ಕಾಂಬಿನೇಷನ್ ಹೈಲೈಟ್ ಆಗಿದೆ. ಅಪ್ಪ-ಮಗಳ ಪಾತ್ರದಲ್ಲಿ ಅವರಿಬ್ಬರು ನಟಿಸಿದ್ದಾರೆ. ಕೆಲವು ದೃಶ್ಯಗಳಲ್ಲಿ ಶಿವರಾಜ್ಕುಮಾರ್ ಅವರಿಗಿಂತಲೂ ಜೋರಾಗಿ ಅದಿತಿ ಅಬ್ಬರಿಸುತ್ತಾರೆ. ಅಷ್ಟರಮಟ್ಟಿಗೆ ಮಗಳ ಪಾತ್ರಕ್ಕೆ ನಿರ್ದೇಶಕರು ಪ್ರಾಮುಖ್ಯತೆ ನೀಡಿದ್ದಾರೆ.
ನಟಿ ಗಾನವಿ ಲಕ್ಷ್ಮಣ್ ಅವರು ‘ವೇದ’ ಸಿನಿಮಾದಲ್ಲಿ ಶಿವರಾಜ್ಕುಮಾರ್ಗೆ ಜೋಡಿಯಾಗಿ ನಟಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಇದು ಕೇವಲ ಮರ ಸುತ್ತುವಂತಹ ಪಾತ್ರವಲ್ಲ. ಎರಡು ಶೇಡ್ ಇರುವಂತಹ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಒಂದು ದೃಶ್ಯದಲ್ಲಿ ತುಂಬ ಸಾಫ್ಟ್ ಆಗಿ ಕಾಣುವ ಅವರು ಮರು ಕ್ಷಣವೇ ಚಂಡಿ ಚಾಮುಂಡಿಯಂತೆ ಅಬ್ಬರಿಸುವ ಮಹಿಳೆಯಾಗಿ ನಟಿಸಿದ್ದಾರೆ. ಅವರ ನಟನೆಗೆ ಹೆಚ್ಚು ಅವಕಾಶ ಸಿಕ್ಕಿದೆ.
ಇದನ್ನೂ ಓದಿ: Vedha: ‘ವೇದ’ ಕುರಿತು ಇಂಚಿಂಚೂ ಮಾಹಿತಿ ಹಂಚಿಕೊಂಡ ಶಿವಣ್ಣ; ಇಲ್ಲಿದೆ ಟಿವಿ9 ಸ್ಪೆಷಲ್ ಸಂದರ್ಶನ
ಹೆಣ್ಣು ಮಕ್ಕಳ ವಿರುದ್ಧ ಆದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಕಥೆ ‘ವೇದ’ ಚಿತ್ರದಲ್ಲಿದೆ. ಅನ್ಯಾಯ ಆದ ಕ್ಷಣವೇ ಮಹಿಳೆಯರು ಸಿಡಿದು ನಿಲ್ಲಬೇಕು ಎಂಬ ಸಂದೇಶ ಈ ಚಿತ್ರದಲ್ಲಿದೆ. ಹಾಗಂತ ಅದನ್ನು ಕೇವಲ ಹೀರೋ ಬಾಯಲ್ಲಿ ಉಪದೇಶ ಹೇಳಿಸಿ ನಿರ್ದೇಶಕರು ಸುಮ್ಮನಾಗಿಲ್ಲ. ಸೂಕ್ತ ಸನ್ನಿವೇಶಗಳಲ್ಲಿ ಮಹಿಳಾ ಪಾತ್ರಗಳು ಕೂಡ ಆಯುಧವನ್ನು ಕೈಗೆತ್ತಿಕೊಳ್ಳುವಂತಹ ದೃಶ್ಯಗಳು ಈ ಚಿತ್ರದಲ್ಲಿವೆ. ಅಂಥ ಸನ್ನಿವೇಶಗಳಲ್ಲೆಲ್ಲ ಶಿವರಾಜ್ಕುಮಾರ್ ಅವರ ಹೀರೋಯಿಸಂ ಹಿನ್ನೆಲೆಗೆ ಸರಿದು, ಮಹಿಳೆಯರ ಪಾತ್ರಗಳು ಮುನ್ನೆಲೆಗೆ ಬಂದಿವೆ. ಅಷ್ಟರಮಟ್ಟಿಗೆ ಶಿವರಾಜ್ಕುಮಾರ್ ಅವರು ಕಥೆಗೆ ಶರಣಾಗಿದ್ದಾರೆ.
ನಟಿ ಅದಿತಿ ಸಾಗರ್ ಅವರು ಕಥಾನಾಯಕನ ಮಗಳ ಪಾತ್ರದಲ್ಲಿ ಸಖತ್ ಸ್ಕೋರ್ ಮಾಡಿದ್ದಾರೆ. ಹೆಚ್ಚಿನ ಡೈಲಾಗ್ ಇಲ್ಲದಿದ್ದರೂ ಆ್ಯಕ್ಷನ್ ಮತ್ತು ಅಭಿನಯದ ಮೂಲಕ ಅವರು ಗಮನ ಸೆಳೆದಿದ್ದಾರೆ. ತಲಾ ಒಂದು ದೃಶ್ಯದಲ್ಲಿ ಗಾನವಿ ಲಕ್ಷ್ಮಣ್ ಮತ್ತು ಶ್ವೇತಾ ಚಂಗಪ್ಪ ಕೂಡ ಫೈಟಿಂಗ್ ಮಾಡುವ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದ್ದಾರೆ. ಒಂದಷ್ಟು ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಉಮಾಶ್ರೀ ಅವರು ನಗಿಸುವ ಪ್ರಯತ್ನ ಮಾಡಿದ್ದಾರೆ. ಕಥೆಗೆ ಟ್ವಿಸ್ಟ್ ನೀಡುವಂತಹ ಪಾತ್ರದಲ್ಲಿ ರಘು ಶಿವಮೊಗ್ಗ ನಟಿಸಿದ್ದಾರೆ.
ಇದನ್ನೂ ಓದಿ: Vedha Twitter Review: ‘ಒಂದೊಳ್ಳೆಯ ಸಿನಿಮಾ’; ಶಿವರಾಜ್ಕುಮಾರ್ ನಟನೆಯ ‘ವೇದ’ ಚಿತ್ರಕ್ಕೆ ಫ್ಯಾನ್ಸ್ ಮೆಚ್ಚುಗೆ
ಮೊದಲೇ ಹೇಳಿದಂತೆ ಇದು ಮಾಮೂಲಿ ಸೇಡಿನ ಕಥೆ. ಅದನ್ನು ಎರಡು ಪ್ರಮುಖ ಕಾಲಘಟ್ಟದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಆರಂಭದಿಂದ ಪ್ರೀ-ಕ್ಲೈಮ್ಯಾಕ್ಸ್ ತನಕವೂ ಹೀರೋ ಸೇಡು ತೀರಿಸಿಕೊಳ್ಳುತ್ತಲೇ ಸಾಗುತ್ತಾನೆ. ಆದ್ರೆ ಅವನ ಸೇಡಿಗೆ ಕಾರಣ ಏನು ಎಂಬ ಫ್ಲ್ಯಾಶ್ ಬ್ಯಾಕ್ ತೆರೆದುಕೊಳ್ಳುವುದು ಕೊನೆಯಲ್ಲಿ ಮಾತ್ರ. ಅಲ್ಲಿಯವರೆಗೂ ಯಾವುದೇ ಸುಳಿವು ಇಲ್ಲದೇ ಬರೀ ಹೊಡಿಬಡಿ ದೃಶ್ಯಗಳನ್ನು ನೋಡಬೇಕು ಪ್ರೇಕ್ಷಕ. ಆರಂಭದ ಹಲವು ದೃಶ್ಯಗಳು ಕಥಾನಾಯಕನ ಇಂಟ್ರಡಕ್ಷನ್ಗೆ ಮೀಸಲು ಆದಂತಿವೆ. ಇಂಥ ಕಡೆಗಳಲ್ಲಿ ಸ್ವಲ್ಪ ಚುರುಕುತನದ ಅಗತ್ಯವಿತ್ತು ಎನಿಸುತ್ತದೆ.
‘ವೇದ’ ಚಿತ್ರದ ಬಹುತೇಕ ದೃಶ್ಯಗಳನ್ನು ಡಾರ್ಕ್ ಶೇಡ್ನಲ್ಲಿ ಕಟ್ಟಿಕೊಡಲು ಹರ್ಷ ಪ್ರಯತ್ನಿಸಿದ್ದಾರೆ. ಅವರ ಕಾನ್ಸೆಪ್ಟ್ಗೆ ಸ್ವಾಮಿ ಜೆ. ಗೌಡ ಛಾಯಾಗ್ರಹಣ ಪೂರಕವಾಗಿದೆ. 1965 ಮತ್ತು 1985ರ ಕಾಲಘಟ್ಟವನ್ನು ತೋರಿಸಲು ನಿರ್ದೇಶಕರು ಹಲವು ಸೆಟ್ಗಳ ಮೊರೆ ಹೋಗಿದ್ದಾರೆ. ಕಲಾ ನಿರ್ದೇಶಕ ರವಿ ಸಂತೆಹಕ್ಲು ಅವರ ಕೆಲಸ ಎದ್ದು ಕಾಣಿಸಿದೆ. ಹಿನ್ನೆಲೆ ಸಂಗೀತದಲ್ಲಿ ಅರ್ಜುನ್ ಜನ್ಯ ಅಬ್ಬರಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:47 am, Fri, 23 December 22