ಮುರಳೀಧರನ್ ಸಿನಿಮಾದಿಂದ ವಿಜಯ್ ಸೇತುಪತಿ ಹೊರಹೋಗಿದ್ದೇಕೆ?

Muttiah Muralitharan: ಮುತ್ತಯ್ಯ ಮುರಳೀಧರನ್ ಜೀವನ ಆಧರಿತ '800' ಸಿನಿಮಾ ಅಕ್ಟೋಬರ್ 6ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ವಿಜಯ್ ಸೇತುಪತಿ ಮುರಳೀಧರನ್ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ ಅವರು ಸಿನಿಮಾದಿಂದ ಹೊರನಡೆದರು, ಕಾರಣವನ್ನು ಮುರಳೀಧರನ್ ತಿಳಿಸಿದ್ದಾರೆ.

ಮುರಳೀಧರನ್ ಸಿನಿಮಾದಿಂದ ವಿಜಯ್ ಸೇತುಪತಿ ಹೊರಹೋಗಿದ್ದೇಕೆ?
Follow us
ಮಂಜುನಾಥ ಸಿ.
|

Updated on: Sep 27, 2023 | 9:49 PM

ವಿಶ್ವಕ್ರಿಕೆಟ್​ನ ಶ್ರೇಷ್ಠ ಆಫ್​ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ (muttiah muralitharan) ಜೀವನ ಆಧರಿಸಿದ ‘800’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರವನ್ನು ಭಾರತದಲ್ಲಿ ಅದ್ಧೂರಿಯಾಗಿ ಮುರಳೀಧರನ್ ಮಾಡುತ್ತಿದ್ದಾರೆ. ಹೈದರಾಬಾದ್, ಮುಂಬೈ ಇನ್ನೂ ಹಲವು ನಗರಗಳಿಗೆ ಸಂಚರಿಸಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಮುರಳೀಧರನ್ ಪಾತ್ರದಲ್ಲಿ ಮಾಧುರ್ ಮಿತ್ತಲ್ ನಟಿಸಿದ್ದಾರೆ. ಅಸಲಿಗೆ ಮುರಳೀಧರನ್ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸಬೇಕಿತ್ತು. ಆದರೆ ವಿಜಯ್ ಏಕೆ ಸಿನಿಮಾದಿಂದ ಹೊರಗುಳಿದರು? ಮುರಳೀಧರನ್ ಅವರೇ ವಿವರಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮುರಳೀಧರನ್ ಈ ಬಗ್ಗೆ ಮಾತನಾಡಿದ್ದು, ”ಐಪಿಎಲ್ ಸಮಯದಲ್ಲಿ ನಾವು ತಂಗಿದ್ದ ಹೋಟೆಲ್​ನಲ್ಲಿಯೇ ವಿಜಯ್ ಸೇತುಪತಿ ತಂಗಿರುವುದಾಗಿ ನಮ್ಮ ನಿರ್ದೇಶಕ ಹೇಳಿದರು. ನಾವು ಅವರನ್ನು ಭೇಟಿ ಮಾಡೋಣ, ನಾನು ಮಾತನಾಡುತ್ತೇನೆ ಅಂದರು. ಆಗಿನ್ನೂ ಸಿನಿಮಾ ಚಿತ್ರಕತೆ ಹಂತದಲ್ಲಿತ್ತು. ಕ್ರಿಕೆಟ್​ ಬಗ್ಗೆ ಒಲವಿರುವ ವಿಜಯ್ ಸೇತುಪತಿ ನನ್ನ ಅಭಿಮಾನಿಯೇ ಆಗಿರುವ ಕಾರಣ ಅವರು ಭೇಟಿ ಮಾಡಲು ಒಪ್ಪಿದರು. ಐದು ದಿನದ ಬಳಿಕ ಹೋಟೆಲ್​ನಲ್ಲಿಯೇ ಚಿತ್ರಕತೆ ಹೇಳಲು ಸಮಯ ನಿಗದಿಯಾಯ್ತು. ಅಂತೆಯೇ ಚಿತ್ರಕತೆ ಕೇಳಿದ ವಿಜಯ್ ಸೇತುಪತಿ ಬಹಳ ಆಸಕ್ತಿ ತೋರಿದರು. ಇದೊಂದು ಅಪೂರ್ವವಾದ ಅವಕಾಶ ನನಗೆ ಕಳೆದುಕೊಳ್ಳಲು ಇಷ್ಟವಿಲ್ಲ ಎಂದರು. ಬಳಿಕ ನಿರ್ಮಾಪಕರೂ ಸಿಕ್ಕಿದರು. ಸಿನಿಮಾ ಶುರು ಮಾಡುವ ಯೋಜನೆ ಆಯಿತು” ಎಂದು ಮುರಳೀ ನೆನಪು ಮಾಡಿಕೊಂಡರು.

ಇದನ್ನೂ ಓದಿ:ಮುತ್ತಯ್ಯ ಮುರಳೀಧರನ್​ ಬಯೋಪಿಕ್​ ‘800’ ಟ್ರೇಲರ್​ ಬಿಡುಗಡೆಗೆ ಸಚಿನ್​ ತೆಂಡೂಲ್ಕರ್​ ಅತಿಥಿ

”ಸುದ್ದಿ ಬಹಿರಂಗವಾದಾಗ ಕೆಲವು ರಾಜಕಾರಣಿಗಳು, ವಿಜಯ್ ಸೇತುಪತಿ ಮುರಳೀಧರನ್ ಪಾತ್ರವಹಿಸುವುದನ್ನು ಆಕ್ಷೇಪಿಸಿದರು. ಬೆದರಿಕೆ ಸಹ ಒಡ್ಡಿದರು. ವಿಜಯ್ ಸೇತುಪತಿ ಕುಟುಂಬದ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಬರೆಯಲಾಯ್ತು. ಅದು ನನಗೆ ಸಹಿಸಲಾಗಲಿಲ್ಲ. ನನ್ನಿಂದ ವಿಜಯ್ ಸೇತುಪತಿ ವೃತ್ತಿಗೆ ಸಮಸ್ಯೆ ಆಗುತ್ತದೆ ಎನಿಸಿತು. ಬಳಿಕ ನಾನೇ ವಿಜಯ್​ರಿಗೆ ನೀವು ನಟಿಸುವುದು ಬೇಡ ಎಂದೆ” ಎಂದಿದ್ದಾರೆ ಮುರಳೀ.

”ಆ ಬಳಿಕ ನಿರ್ದೇಶಕರು ಮಧುರ್ ಮಿತ್ತಲ್ ಅನ್ನು ನನ್ನ ಪಾತ್ರಕ್ಕೆ ಅಂತಿಮಗೊಳಿಸಿದರು. ‘ಸ್ಲಂ ಡಾಗ್ ಮಿಲೇನಿಯರ್’ ಸಿನಿಮಾದಲ್ಲಿ ಮಧುರ್ ಅದ್ಭುತವಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿಯೂ ಸಹ ಮಧುರ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಬಹಳ ಶ್ರಮ ಪಟ್ಟು ಪಾತ್ರ ನಿರ್ವಹಿಸಿದ್ದಾರೆ” ಎಂದಿದ್ದಾರೆ ಮುರಳೀಧರನ್.

ಮುರಳೀಧರ್, ಶ್ರೀಲಂಕಾ ತಮಿಳನ್ ಆಗಿದ್ದಾರೆ. ಹಾಗಿದ್ದರೂ ಸಹ ಅವರು ಶ್ರೀಲಂಕಾದ ತಮಿಳರ ಹೋರಾಟಕ್ಕೆ ಬೆಂಬಲ ನೀಡಲಿಲ್ಲ ಎಂದು ತಮಿಳರು ಬಹಳ ವರ್ಷಗಳಿಂದ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಆದರೆ ಭಾಷೆ, ನೆಲ ಅಥವಾ ಯಾವುದೇ ರಾಜಕೀಯದಿಂದ ದೂರವಿರುವ ಮುರಳೀಧರನ್, ಶ್ರೀಲಂಕಾದಲ್ಲಿ ತಮ್ಮ ಪಾಡಿಗೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ತಮ್ಮ ಪಾಡಿಗೆ ತಾವಿದ್ದಾರೆ. ಅವರ ಜೀವನ ಆಧರಿತ ‘800’ ಸಿನಿಮಾವು ಅಕ್ಟೋಬರ್ 6 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ