ಅಲ್ಲು ಅರ್ಜುನ್ ವಿರುದ್ಧ ಚಿರಂಜೀವಿ ಸಹೋದರ ಟ್ವೀಟ್?
ಪವನ್ ಕಲ್ಯಾಣ್ ಎದುರಾಳಿ ಪಕ್ಷವಾದ ವೈಸಿಪಿಯ ಅಭ್ಯರ್ಥಿ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದ ಅಲ್ಲು ಅರ್ಜುನ್ ಬಗ್ಗೆ ಪರೋಕ್ಷವಾಗಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ‘ನಮ್ಮೊಡನಿದ್ದು ವಿರೋಧಿಗಳಿಗೆ ಬೆಂಬಲಿಸುವವನು, ನಮ್ಮವನಾದರೂ ಪರಕೀಯನೆ’ ಎಂದಿದ್ದಾರೆ ನಾಗಬಾಬು.

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಮತದಾನ ನಿನ್ನೆ (ಮೇ 13) ನಡೆದಿದೆ. ಈ ಬಾರಿ ಚುನಾವಣೆಯ ಪ್ರಮುಖ ಕೇಂದ್ರ ಬಿಂದು ಪವನ್ ಕಲ್ಯಾಣ್ (Pawan Kalyan). ಪೀಠಾಪುರಂ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಪವನ್ ಕಲ್ಯಾಣ್ಗೆ ಸಹೋದರ ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಚಿತ್ರರಂಗದ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಟ ರಾಮ್ ಚರಣ್ ಸ್ವತಃ ಕ್ಷೇತ್ರಕ್ಕೆ ಹೋಗಿ ಪವನ್ ಕಲ್ಯಾಣ್ ಪರವಾಗಿ ಪ್ರಚಾರ ಮಾಡಿದ್ದರು. ಹಲವು ನಟ-ನಟಿಯರು ಸಹ ಪವನ್ ಕಲ್ಯಾಣ್ ಪರವಾಗಿ ಪ್ರಚಾರ ಮಾಡಿದ್ದರು. ಆದರೆ ಮೆಗಾಸ್ಟಾರ್ ಕುಟುಂಬಕ್ಕೆ ಸೇರಿದ ಅಲ್ಲು ಅರ್ಜುನ್ ಮಾತ್ರ ಪವನ್ ಕಲ್ಯಾಣ್ ಎದುರಾಳಿ ಪಕ್ಷವಾದ ವೈಸಿಪಿಯ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಿದ್ದರು. ಇದು ಮೆಗಾಸ್ಟಾರ್ ಅಭಿಮಾನಿಗಳು ಹಾಗೂ ಪವನ್ರ ಜನಸೇನಾ ಪಕ್ಷದ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು.
ಇದೀಗ ಪವನ್ ಕಲ್ಯಾಣ್ ಹಾಗೂ ಚಿರಂಜೀವಿಯ ಸಹೋದರ ನಟ, ನಿರ್ಮಾಪಕ ನಾಗಬಾಬು ಟ್ವೀಟ್ ಒಂದನ್ನು ಮಾಡಿದ್ದು, ಪರೋಕ್ಷವಾಗಿ ಅಲ್ಲು ಅರ್ಜುನ್ ವಿರುದ್ಧ ಗುಡುಗಿದ್ದಾರೆ. ‘ನಮ್ಮೊಡನೇ ಇದ್ದು ವಿರೋಧಿಗಳ ಪರವಾಗಿ ಕೆಲಸ ಮಾಡುವವನು ನಮ್ಮವನಾದರೂ ಪರಕೀಯನೆ. ನಮ್ಮೊಡನೆ ನಿಲ್ಲುವವನು ಬೇರೆಯವನಾದರೂ ನಮ್ಮವನೇ’ ಎಂದಿದ್ದಾರೆ ನಾಗಬಾಬು. ಅಲ್ಲು ಅರ್ಜುನ್, ವೈಸಿಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದಕ್ಕೆ ನಾಗಬಾಬು ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ:ಗೆಳೆಯನಿಗೆ ಬೆಂಬಲ ಕೊಡಲು ಹೋಗಿದ್ದ ಅಲ್ಲು ಅರ್ಜುನ್ ವಿರುದ್ಧ ದೂರು
ಅಲ್ಲು ಅರ್ಜುನ್, ತಮ್ಮ ಗೆಳೆಯ ಶಿಲ್ಪಾ ರವಿಚಂದ್ರ ರೆಡ್ಡಿಗೆ ಬೆಂಬಲ ಸೂಚಿಸಿದ್ದರು. ಶಿಲ್ಪಾ ರವಿಚಂದ್ರ ರೆಡ್ಡಿ ವೈಸಿಪಿ ಪಕ್ಷದ ಅಭ್ಯರ್ಥಿಯಾಗಿದ್ದು ನ್ಯಾಂದೇಲ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಶಿಲ್ಪಾ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಅಲ್ಲು ಅರ್ಜುನ್, ತಮ್ಮ ಗೆಳೆಯನ ಕೈ ಹಿಡಿದು ಮೇಲೆತ್ತಿ, ಅವರಿಗೆ ಮತ ಹಾಕಿ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದರು. ಈ ಸಮಯದಲ್ಲಿ ಅಲ್ಲು ಅರ್ಜುನ್ ನೋಡಲು ಭಾರಿ ಸಂಖ್ಯೆಯ ಜನ ಸೇರಿದ್ದರು. ಯಾವುದೇ ಅನುಮತಿ ಪಡೆಯದೇ ಜನ ಸೇರಿಸಿದ್ದ ಕಾರಣಕ್ಕೆ ಅಭ್ಯರ್ಥಿ ಶಿಲ್ಪಾ ರವಿಚಂದ್ರ ರೆಡ್ಡಿ ಹಾಗೂ ಅಲ್ಲು ಅರ್ಜುನ್ ವಿರುದ್ಧ ದೂರು ಸಹ ದಾಖಲಾಗಿದೆ.
ಅಲ್ಲು ಅರ್ಜುನ್, ಮೆಗಾಸ್ಟಾರ್ ಕುಟುಂಬದ ಸದಸ್ಯ. ಪವನ್ ಕಲ್ಯಾಣ್ ಹಾಗೂ ಚಿರಂಜೀವಿ ಮುನಿಸಿಕೊಂಡಿದ್ದ ಸಮಯದಲ್ಲಿ ಅಲ್ಲು ಅರ್ಜುನ್ ನೇರವಾಗಿ ಚಿರಂಜೀವಿಗೆ ಬೆಂಬಲ ಸೂಚಿಸಿದ್ದರು. ಆ ನಂತರ ಎಲ್ಲ ಸರಿಹೋಯ್ತಾದರೂ ಚಿರಂಜೀವಿ ಕುಟುಂಬದ ಕೆಲವರೊಟ್ಟಿಗೆ ಅಲ್ಲು ಅರ್ಜುನ್ ಸಂಬಂಧ ಸರಿಯಿಲ್ಲವೆಂದೇ ಹೇಳಲಾಗಿತ್ತು. ಇದೀಗ ನಾಗಬಾಬು, ಟ್ವೀಟ್ ಮಾಡುವ ಮೂಲಕ ಅಲ್ಲು ಅರ್ಜುನ್, ‘ನಮ್ಮವನಾಗಿದ್ದರೂ ನಮ್ಮವನಲ್ಲ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




