ಚಿತ್ರಮಂದಿರದಲ್ಲಿ ಸಿನಿಮಾ ನೋಡುತ್ತಲೇ ಪ್ರಾಣ ಬಿಟ್ಟ ಸ್ಟಾರ್ ನಟನ ಅಭಿಮಾನಿ; ಸಡನ್ ಸಾವಿಗೆ ಕಾರಣ ಏನು?
Balayya Fan Death: ‘ಅಖಂಡ’ ಸಿನಿಮಾವನ್ನು ಎಂಜಾಯ್ ಮಾಡುತ್ತಿರುವಾಗಲೇ ನಂದಮೂರಿ ಬಾಲಕೃಷ್ಣ ಅವರ ಅಭಿಮಾನಿಗೆ ಬ್ರೇನ್ ಸ್ಟ್ರೋನ್ ಆಯಿತು. ಆಸ್ಪತ್ರೆ ತಲುಪುವ ಮುನ್ನವೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಟಾಲಿವುಡ್ (Tollywood) ಸ್ಟಾರ್ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅಭಿನಯದ ಹೊಸ ಚಿತ್ರ ‘ಅಖಂಡ’ (Akhanda Movie) ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಬೊಯಪಾಟಿ ಶ್ರೀನು ನಿರ್ದೇಶನ ಮಾಡಿದ್ದಾರೆ. ಬಹುತೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ‘ಅಖಂಡ’ ಚಿತ್ರಕ್ಕೆ ಭರ್ಜರಿ ಕಮಾಯಿ ಆಗುತ್ತಿರುವುದು ಇಡೀ ತಂಡಕ್ಕೆ ಖುಷಿ ನೀಡಿದೆ. ಬಾಲಯ್ಯ ನಟನೆಯ ಈ ಹಿಂದಿನ ಸಿನಿಮಾಗಳಿಗಿಂತಲೂ ‘ಅಖಂಡ’ ಹೆಚ್ಚು ಅಬ್ಬರಿಸುತ್ತಿದೆ. ಈ ಸಂತಸದ ಸಮಾಚಾರದ ನಡುವೆ ಒಂದು ಕಹಿ ಘಟನೆ ನಡೆದಿದೆ. ‘ಅಖಂಡ’ ಚಿತ್ರವನ್ನು ನೋಡುತ್ತಿರುವಾಗಲೇ ನಂದಮೂರಿ ಬಾಲಕೃಷ್ಣ ಅವರ ಅಭಿಮಾನಿಯೊಬ್ಬರು ಥಿಯೇಟರ್ನಲ್ಲೇ ಪ್ರಾಣ ಬಿಟ್ಟಿದ್ದಾರೆ. ಹಾಗಾಗಿ ಸೂತಕದ ಛಾಯೆ ಎದುರಾಗಿದೆ. ಈ ಘಟನೆಯಿಂದಾಗಿ ಬಾಲಯ್ಯ ಅಭಿಮಾನಿ ಬಳಗಕ್ಕೆ ನೋವಾಗಿದೆ. ಚಿತ್ರದ ಯಶಸ್ಸಿನ ನಡುವೆ ಇಂಥ ದುರ್ಘಟನೆ ನಡೆದಿರುವುದು ಬೇಸರದ ಸಂಗತಿ.
ನಂದಮೂರಿ ಬಾಲಕೃಷ್ಣ ಅವರ ಅಭಿಮಾನಿ ರಾಮಕೃಷ್ಣ ಅವರು ಇತ್ತೀಚೆಗೆ ‘ಅಖಂಡ’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ತೆರಳಿದ್ದರು. ಸಿನಿಮಾ ಎಂಜಾಯ್ ಮಾಡುತ್ತಿರುವಾಗಲೇ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿದೆ. ಪರಿಣಾಮವಾಗಿ ಅವರು ಅಲ್ಲೇ ಕುಸಿದು ಬಿದ್ದರು. ಶೀಘ್ರವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆ ತಲುಪುವ ಮುನ್ನವೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.
ರಾಮಕೃಷ್ಣ ಕೇವಲ ನಂದಮೂರಿ ಬಾಲಕೃಷ್ಣ ಅವರ ಅಭಿಮಾನಿಯಷ್ಟೇ ಆಗಿರಲಿಲ್ಲ. ಸಿನಿಮಾ ಪ್ರದರ್ಶನಕನಾಗಿಯೂ ಗುರುತಿಸಿಕೊಂಡಿದ್ದರು. ಚಿತ್ರಮಂದಿರಗಳ ಮಾಲೀಕರಾಗಿದ್ದ ಅವರು ಪೂರ್ವ ಗೋದಾವರಿ ಜಿಲ್ಲೆಯ ಸಿನಿಮಾ ಪ್ರದರ್ಶಕರ ಒಕ್ಕೂಟದ ಅಧ್ಯಕ್ಷ ಕೂಡ ಆಗಿದ್ದರು. ಅವರ ನಿಧನಕ್ಕೆ ಎಲ್ಲರೂ ಸಂತಾಪ ಸೂಚಿಸಿದ್ದಾರೆ.
ಮತ್ತೊಂದು ದುರಂತ ಘಟನೆ ಸ್ವಲ್ಪದಲ್ಲೇ ಮಿಸ್ ಆಗಿದೆ. ‘ಅಖಂಡ’ ಸಿನಿಮಾ ಪ್ರದರ್ಶನ ಆಗುತ್ತಿದ್ದ ವೇಳೆ ಚಿತ್ರಮಂದಿರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶ್ರೀಕಾಕುಳಮ್ನಲ್ಲಿರುವ ರವಿಶಂಕರ್ ಚಿತ್ರಮಂದಿರದ ಪರದೆ ಹಿಂಬಾಗದಲ್ಲಿ ಇರುವ ಸ್ಪೀಕರ್ಗೆ ಬೆಂಕಿ ಹೊತ್ತಿಕೊಂಡಿತ್ತು. ಅದನ್ನು ಗಮನಿಸಿದ ಪ್ರೇಕ್ಷಕರು ಮತ್ತು ಥಿಯೇಟರ್ ಸಿಬ್ಬಂದಿ ಗಾಬರಿಯಾದರು. ಅಪಾಯದ ಮುನ್ಸೂಚನೆ ಅರಿತ ಎಲ್ಲರೂ ಚಿತ್ರಮಂದಿರದಿಂದ ಹೊರಹೋಗಲು ಅವಸರ ಮಾಡಿದರು. ಅದೃಷ್ಟವಶಾತ್ ಬೆಂಕಿಯನ್ನು ಕೂಡಲೇ ನಂದಿಸಲಾಯಿತು. ಅದರಿಂದ ಯಾವುದೇ ಪ್ರಾಣ ಹಾನಿ ಆಗಿಲ್ಲ. ಒಟ್ಟಿನಲ್ಲಿ ‘ಅಖಂಡ’ ಚಿತ್ರಕ್ಕೆ ಜನರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿರುವ ನಡುವೆಯೇ ಇಂಥ ಘಟನೆಗಳು ವರದಿ ಆಗುತ್ತಿರುವುದು ಚಿತ್ರತಂಡಕ್ಕೆ ಬೇಸರ ಮೂಡಿಸಿದೆ. ಈ ಸಿನಿಮಾದಲ್ಲಿ ಪ್ರಗ್ಯಾ ಜೈಸ್ವಾಲ್, ಜಗಪತಿ ಬಾಬು ಮುಂತಾದವರು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿ. ರಾಮ್ ಪ್ರಸಾದ್ ಛಾಯಾಗ್ರಹಣ, ಎಸ್. ಥಮನ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ:
ಮಿಲಿಟರಿಯಲ್ಲಿ 21 ವರ್ಷ ಕೆಲಸ; ಈಗ ಸ್ಟಾರ್ ಸಿನಿಮಾದಲ್ಲಿ ವಿಲನ್: ಅಪರೂಪದ ಪ್ರತಿಭೆ ನಿತಿನ್
ಇನ್ನೂ ನಿಂತಿಲ್ಲ ಶಿವಣ್ಣನ ಕಣ್ಣೀರು; ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿರುವ ಮುತ್ತಣ್ಣ
Published On - 8:09 am, Mon, 6 December 21