ಇದೇ ಮೊದಲ ಬಾರಿಗೆ ಬೆಂಗಳೂರಲ್ಲಿ ಫಿಲ್ಮ್ಫೇರ್ ಸಂಭ್ರಮ; ಶುಭ ಕೋರಿದ ಪೂಜಾ ಹೆಗ್ಡೆ, ಹರ್ಷಿಕಾ, ಪ್ರಿಯಾಂಕಾ
Filmfare Awards: 2022ರ ಮಾರ್ಚ್ನಲ್ಲಿ 67ನೇ ಫಿಲ್ಮ್ಫೇರ್ ಸೌತ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ಪ್ರತಿಷ್ಠಿತ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿರುವುದು ವಿಶೇಷ.
ಫಿಲ್ಮ್ಫೇರ್ ಪ್ರಶಸ್ತಿ (Filmfare Awards) ಎಂದರೆ ಕಣ್ಣರಳಿಸಿ ನೋಡುತ್ತದೆ ಚಿತ್ರರಂಗ. ಕಳೆದ 66 ವರ್ಷಗಳಿಂದ ಈ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಒಮ್ಮೆಯೂ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಆಗಿಲ್ಲ. ಇದೇ ಮೊದಲ ಬಾರಿಗೆ ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ‘ಫಿಲ್ಮ್ಫೇರ್ ಅವಾರ್ಡ್ಸ್ ಸೌತ್’ (Filmfare Awards South) ಸಮಾರಂಭವನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಜವಾಬ್ದಾರಿಯನ್ನು ಕಮರ್ ಫಿಲ್ಮ್ ಫ್ಯಾಕ್ಟರಿ (Kamar Film Factory) ಸಂಸ್ಥೆ ಹೊತ್ತುಕೊಂಡಿದೆ. ಆ ಕುರಿತು ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಹುಭಾಷಾ ನಟಿ ಪೂಜಾ ಹೆಗ್ಡೆ (Pooja Hegde) ಮುಖ್ಯ ಅತಿಥಿ ಆಗಿ ಆಗಮಿಸಿದ್ದರು. ಕನ್ನಡದ ಅನುಭವಿ ಕಲಾವಿದೆ ತಾರಾ ಅನುರಾಧ, ನಟಿ ಪ್ರಿಯಾಂಕಾ ಉಪೇಂದ್ರ, ಹರ್ಷಿಕಾ ಪೂಣಚ್ಚ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
ಫಿಲ್ಮ್ಫೇರ್ ಸಮಾರಂಭ ತುಂಬ ಅದ್ದೂರಿಯಾಗಿ ನಡೆಯುತ್ತದೆ. ಎಲ್ಲ ಭಾಷೆಯ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗುತ್ತಾರೆ. ಇಂಥ ಸಮಾರಂಭವನ್ನು ಆಯೋಜನೆ ಮಾಡುವುದು ಸುಲಭವಲ್ಲ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಈ ಅವಾರ್ಡ್ ಫಂಕ್ಷನ್ ಮಾಡುತ್ತಿರುವುದಕ್ಕೆ ಕಮರ್ ಅವರಿಗೆ ಹೆಮ್ಮೆ ಇದೆ. ಹಿಂದೆಂದಿಗಿಂತಲೂ ಅತ್ಯುತ್ತಮವಾಗಿ ಕಾರ್ಯಕ್ರಮ ಆಯೋಜನೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ‘ಕಳೆದ ಎಲ್ಲ ವರ್ಷಗಳಿಗಿಂತಲೂ ಚೆನ್ನಾಗಿ ನಾನು ಈ ಸಮಾರಂಭವನ್ನು ಈ ಬಾರಿ ಬೆಂಗಳೂರಿನಲ್ಲಿ ಮಾಡಿ ತೋರಿಸುತ್ತೇನೆ. ಬಾಲಿವುಡ್ ಮಂದಿಗೆ ಇದು ನನ್ನ ಸವಾಲು. ಇದು ನಮಗೆ ಸಿಕ್ಕಿರುವ ದೊಡ್ಡ ಅವಕಾಶ’ ಎಂದು ಕಮರ್ ಹೇಳಿದ್ದಾರೆ.
ನಟಿ ತಾರಾ ಅನುರಾಧ ಅವರು ಶುಭಕೋರಿದ್ದಾರೆ. ‘ಫಿಲ್ಮ್ಫೇರ್ ಎಂದರೆ ಎಲ್ಲ ಭಾಷೆಯ ಚಿತ್ರರಂಗದವರು ಸೇರಿ ಆಚರಿಸುವ ಹಬ್ಬ. ಅದನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸುತ್ತಿರುವುದು ಖುಷಿಯ ವಿಚಾರ. ಇದಕ್ಕಾಗಿ ಕಮರ್ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮತ್ತೆ ಮತ್ತೆ ಈ ಕಾರ್ಯಕ್ರಮ ಬೆಂಗಳೂರಿನಲ್ಲೇ ಆಯೋಜನೆಗೊಳ್ಳುವಂತೆ ಆಗಲಿ’ ಎಂದು ತಾರಾ ಅನುರಾಧ ಹೇಳಿದರು.
ಪೂಜಾ ಹೆಗ್ಡೆ ಅವರಿಗೆ ಫಿಲ್ಮ್ಫೇರ್ ಎಂದರೆ ಚಿಕ್ಕ ವಯಸ್ಸಿನಿಂದಲೂ ಏನೂ ಒಂಥರ ಸಂಭ್ರಮ. ‘ಚಿಕ್ಕವಳಿದ್ದಾಗ ನಾನು ಫಿಲ್ಮ್ಫೇರ್ ಕಾರ್ಯಕ್ರಮ ನೋಡಲು ಫ್ಯಾಮಿಲಿ ಜತೆ ಹೋಗಿದ್ದೆ. ಆದರೆ ನಮ್ಮ ಬಳಿ ಪಾಸ್ ಇರಲಿಲ್ಲ. ನನ್ನ ಸ್ನೇಹಿತರ ಪೋಷಕರ ಜತೆ ನುಸುಳಿಕೊಂಡು ಹೋಗಿ, ಅವರ ತೊಡೆ ಮೇಲೆ ಕುಳಿತು ನಾನು ಫಿಲ್ಮ್ಫೇರ್ ಸಮಾರಂಭ ನೋಡಿದ್ದೆ. ಇಂದು ನಾನು ಫಿಲ್ಮ್ಫೇರ್ ಕಾರ್ಯಕ್ರಮದ ಭಾಗವಾಗುತ್ತೇನೆ ಎಂದು ಕನಸಿನಲ್ಲಿಯೂ ಆಗ ಊಹಿಸಿರಲಿಲ್ಲ. ಇದರಲ್ಲಿ ಭಾಗಿ ಆಗುತ್ತಿರುವುದು ಖುಷಿ ನೀಡಿದೆ. ಬೆಂಗಳೂರಿನಲ್ಲಿ ನಡೆಯಲಿರುವುದು ಇನ್ನೂ ಸಂತಸದ ವಿಚಾರ. ನಾನು ಕರ್ನಾಟಕ ಮೂಲದವಳು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ’ ಎಂದರು ಪೂಜಾ ಹೆಗ್ಡೆ.
ಇದನ್ನೂ ಓದಿ:
‘ರಾಧೆ ಶ್ಯಾಮ್’ ಚಿತ್ರದ ಕಥೆ ಲೀಕ್; ಪ್ರಭಾಸ್-ಪೂಜಾ ಹೆಗ್ಡೆ ಸಿನಿಮಾದ ಈ ಹಾಡಿನಲ್ಲಿ ಅಡಗಿದೆ ಸ್ಟೋರಿ
ಇನ್ನೂ ನಿಂತಿಲ್ಲ ಶಿವಣ್ಣನ ಕಣ್ಣೀರು; ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿರುವ ಮುತ್ತಣ್ಣ
Published On - 9:09 am, Mon, 6 December 21