ಮಿಲಿಟರಿಯಲ್ಲಿ 21 ವರ್ಷ ಕೆಲಸ; ಈಗ ಸ್ಟಾರ್​ ಸಿನಿಮಾದಲ್ಲಿ ವಿಲನ್​: ಅಪರೂಪದ ಪ್ರತಿಭೆ ನಿತಿನ್​

Akhanda Movie: ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ’ ಚಿತ್ರ ಡಿ.2ರಂದು ತೆರೆಕಾಣಲಿದೆ. ಈ ಚಿತ್ರದಲ್ಲಿ ನಿತಿನ್​ ಮೆಹ್ತಾ ಅವರಿಗೆ ವಿಶೇಷ ಗೆಟಪ್​ ಇದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ.

ಮಿಲಿಟರಿಯಲ್ಲಿ 21 ವರ್ಷ ಕೆಲಸ; ಈಗ ಸ್ಟಾರ್​ ಸಿನಿಮಾದಲ್ಲಿ ವಿಲನ್​: ಅಪರೂಪದ ಪ್ರತಿಭೆ ನಿತಿನ್​
ನಿತಿನ್ ಮೆಹ್ತಾ

ಬಣ್ಣದ ಲೋಕದ ಸೆಳೆತಕ್ಕೆ ಇರುವ ಶಕ್ತಿ ದೊಡ್ಡದು. ಎಲ್ಲ ಕ್ಷೇತ್ರದವರನ್ನೂ ಸಿನಿಮಾರಂಗ ತನ್ನತ್ತ ಸೆಳೆದುಕೊಳ್ಳುತ್ತದೆ. ಅದಕ್ಕೆ ಹೊಸ ಉದಾಹರಣೆ ‘ಅಖಂಡ’ ಸಿನಿಮಾದಲ್ಲಿದೆ. ಖ್ಯಾತ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅಭಿನಯದ ಈ ಚಿತ್ರದಲ್ಲಿ ಹೊಸ ಪ್ರತಿಭೆ ನಿತಿನ್​ ಮೆಹ್ತಾ ಅಭಿನಯಿಸಿದ್ದಾರೆ. ಕೆಲವೇ ದಿನಗಳ ಹಿಂದೆ ‘ಅಖಂಡ’ ಚಿತ್ರದ (Akhanda Movie) ಟ್ರೇಲರ್​ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ಅದರಲ್ಲಿ ನಿತಿನ್​ ಮೆಹ್ತಾ(Nitin Mehta)  ಅವರನ್ನು ಕಂಡು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಯಾರು ಈ ನಟ ಎಂದು ಸಿನಿಪ್ರಿಯರೆಲ್ಲ ಮಾತನಾಡಿಕೊಳ್ಳುತ್ತಿದ್ದಾರೆ. ನಿತಿನ್​ ಮೆಹ್ತಾ ಅವರ ಇತಿಹಾಸ ಏನು ಎಂಬುದನ್ನು ಕೆದಕುತ್ತ ಹೋದರೆ ಒಂದು ಕ್ಷಣ ನಿಜಕ್ಕೂ ಅಚ್ಚರಿ ಎನಿಸುತ್ತದೆ. ಹಲವರಿಗೆ ಸ್ಫೂರ್ತಿ ತುಂಬುವಂತಹ ವ್ಯಕ್ತಿತ್ವ ಅವರದ್ದಾಗಿದೆ. ಭಾರತೀಯ ಸೇನೆಯಲ್ಲಿ (Indian Army) 21 ವರ್ಷಗಳ ಕಾಲ ಅವರು ಸೇವೆ ಸಲ್ಲಿಸಿದ್ದಾರೆ!

ಹೌದು, ನಿತಿನ್​ ಮೆಹ್ತಾ ಅವರು ಬರೋಬ್ಬರಿ 21 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ್ದಾರೆ. ಬಳಿಕ ಅವರು ಮಾಡೆಲಿಂಗ್​ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಈಗ ಅವರಿಗೆ 50 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ದೇಹವನ್ನು ಕಟ್ಟುಮಸ್ತಾಗಿ ಇಟ್ಟುಕೊಂಡಿದ್ದಾರೆ. ಹದಿಹರೆಯದವರೂ ನಾಚುವಂತೆ ಫಿಟ್ನೆಸ್​ ಕಾಪಾಡಿಕೊಂಡಿದ್ದಾರೆ.

ಮಾಡೆಲಿಂಗ್​ ಲೋಕದಲ್ಲಿ ನಿತಿನ್​ ಮೆಹ್ತಾ ಅವರಿಗೆ ಸಖತ್​ ಬೇಡಿಕೆ ಇದೆ. ಈ ರೀತಿ ಫ್ಯಾಷನ್​ ಜಗತ್ತಿನಲ್ಲಿ ಮಿಂಚಬೇಕು ಎಂಬುದು ಅವರ ಬಹುಕಾಲದ ಕನಸಾಗಿತ್ತು. ಮಿಲಿಟರಿ ಕೆಲಸದಿಂದ ನಿವೃತ್ತಿ ಪಡೆದ ಬಳಿಕ ಅವರು ಪೂರ್ಣಾವಧಿ ಮಾಡೆಲ್​ ಆಗಿಯೇ ಗುರುತಿಸಿಕೊಂಡಿದ್ದಾರೆ. ಈಗ ಅವರಿಗೆ ಸಿನಿಮಾಗಳಿಂದಲೂ ಆಫರ್​ ಬರುತ್ತಿದೆ. ಟಾಲಿವುಡ್​ನಲ್ಲಿ ಅವರು ಮಿಂಚಲಿದ್ದಾರೆ.

ಈ ವರ್ಷದ ಬಹುನಿರೀಕ್ಷಿತ ​ಚಿತ್ರಗಳ ಪಟ್ಟಿಯಲ್ಲಿ ‘ಅಖಂಡ’ ಕೂಡ ಮುಂಚೂಣಿಯಲ್ಲಿದೆ. ಡಿ.2ರಂದು ಈ ಸಿನಿಮಾ ತೆರೆಕಾಣಲಿದೆ. ವಿಶೇಷ ಗೆಟಪ್​ನಲ್ಲಿ ನಿತಿನ್​ ಮೆಹ್ತಾ ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ. ಅವರನ್ನು ಈ ಗೆಟಪ್​ನಲ್ಲಿ ಒಮ್ಮೆಲೆ ನೋಡಿದರೆ ನಿರ್ದೇಶಕ ತ್ರಿವಿಕ್ರಮ್​ ಶ್ರೀನಿವಾಸ್​ ರೀತಿ ಕಾಣಿಸುತ್ತಾರೆ ಎಂದು ಕೂಡ ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ‘ಅಖಂಡ’ ತೆರೆಕಂಡ ಬಳಿಕ ನಿತಿನ್​ ಮೆಹ್ತಾ ಅವರಿಗೆ ಇತರೆ ಭಾಷೆಯ ಚಿತ್ರರಂಗದಲ್ಲೂ ಬೇಡಿಕೆ ಹೆಚ್ಚುವುದು ಖಚಿತ ಎನ್ನಲಾಗುತ್ತಿದೆ.

‘ಅಖಂಡ’ ಚಿತ್ರಕ್ಕೆ ಬೊಯಾಪಾಟಿ ಶ್ರೀನು ನಿರ್ದೇಶನ ಮಾಡಿದ್ದಾರೆ. ಪ್ರಗ್ಯಾ ಜೈಸ್ವಾಲ್​, ಜಗಪತಿ ಬಾಬು ಮುಂತಾದವರು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿ. ರಾಮ್​ ಪ್ರಸಾದ್​ ಛಾಯಾಗ್ರಹಣ, ಎಸ್​. ಥಮನ್​ ಸಂಗೀತ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:

ರಾಜಕಾರಣಿಗಳಿಂದ ಮಹಿಳೆಯರಿಗೆ ಅವಮಾನ; ಜ್ಯೂ. ಎನ್​ಟಿಆರ್​ ನೀಡಿದ ಎಚ್ಚರಿಕೆ ಸಂದೇಶದ ವಿಡಿಯೋ ಇಲ್ಲಿದೆ

ಪುನೀತ್​ ಅಂತಿಮ ದರ್ಶನ ಪಡೆದು ತೆರಳಿದ್ದ ನಟ ನಂದಮೂರಿ ಬಾಲಕೃಷ್ಣ ಆಸ್ಪತ್ರೆಗೆ ದಾಖಲು; ಅಂಥದ್ದೇನಾಯ್ತು?

Click on your DTH Provider to Add TV9 Kannada