‘ಜೈ ಶ್ರೀರಾಮ್’: ರಾಮನ ಬಗ್ಗೆ ವಿವಾದಾತ್ಮಕ ಡೈಲಾಗ್; ತಮ್ಮ ಸಿನಿಮಾ ಬಗ್ಗೆ ಮಾತನಾಡಿದ ನಯನತಾರಾ
‘ಅನ್ನಪೂರ್ಣಿ’ ಚಿತ್ರವನ್ನು ಒಟಿಟಿಯಿಂದ ತೆಗೆದು ಹಾಕಲಾಗಿದೆ. ಈ ಕುರಿತು ನಯನತಾರಾ ಮಾತನಾಡಿದ್ದಾರೆ. ‘ಜೈ ಶ್ರೀರಾಮ್’ ಎಂದು ಪೋಸ್ಟ್ ಆರಂಭಿಸಿರುವ ಅವರು ತಮ್ಮ ಅಭಿಪ್ರಾಯದ ಹೇಳಿದ್ದಾರೆ.
ಇತ್ತೀಚೆಗೆ ‘ಅನ್ನಪೂರ್ಣಿ’ ಸಿನಿಮಾ (Annapoorni Movie) ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆದ ಬಳಿಕ ಸಿನಿಮಾದ ಒಂದು ದೃಶ್ಯ ಸಾಕಷ್ಟು ಕಾಂಟ್ರವರ್ಸಿ ಉಂಟು ಮಾಡಿತ್ತು. ‘ರಾಮನೂ ಮಾಂಸಾಹಾರ ಸೇವನೆ ಮಾಡಿದ್ದ’ ಎಂಬ ಹೇಳಿಕೆ ಚರ್ಚೆ ಹುಟ್ಟುಹಾಕಿತ್ತು. ಈ ಚಿತ್ರವನ್ನು ಒಟಿಟಿಯಿಂದ ತೆಗೆದು ಹಾಕಲಾಗಿದೆ. ಈ ಕುರಿತು ನಯನತಾರಾ ಅವರು ಮಾತನಾಡಿದ್ದಾರೆ. ‘ಜೈ ಶ್ರೀರಾಮ್’ ಎಂದು ಪೋಸ್ಟ್ ಆರಂಭಿಸಿರುವ ಅವರು ತಮ್ಮ ಅಭಿಪ್ರಾಯದ ಬಗ್ಗೆ ಬರೆದುಕೊಂಡಿದ್ದಾರೆ.
‘ನಾನು ಭಾರವಾದ ಹೃದಯದಿಂದ ಮತ್ತು ಸತ್ಯದ ಆಧಾರದ ಮೇಲೆ ಈ ಬರಹ ಬರೆಯುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ನಮ್ಮ ಅನ್ನಪೂರ್ಣಿ ಚಿತ್ರ ಮಾಡಿದ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲರನ್ನು ಉದ್ದೇಶಿಸಿ ನನ್ನ ಅಭಿಪ್ರಾಯ ಹಂಚಿಕೊಳ್ಳಲು ಬಯಸುತ್ತೇನೆ. ಸಿನಿಮಾ ಮಾಡುವುದು ಎಂದರೆ ಕೇವಲ ಆರ್ಥಿಕ ಲಾಭಕ್ಕೆ ಮಾತ್ರವಲ್ಲದೆ ಒಂದು ಸಂದೇಶ ತಿಳಿಸುವ ಉದ್ದೇಶವೂ ಇರುತ್ತದೆ. ಅನ್ನಪೂರ್ಣಿಯ ಬಗ್ಗೆ ನಾನು ಹೇಳುವುದೇನೆಂದರೆ, ಈ ಸಿನಿಮಾನ ಮುಗ್ಧ ಮನಸ್ಸಿನಿಂದ ಮಾಡಲಾಗಿದೆ. ನಮ್ಮ ಜೀವನದಲ್ಲಿ ಏನು ನಡೆಯುತ್ತಿದೆಯೋ ಅದನ್ನೇ ತೋರಿಸುವುದು ಈ ಸಿನಿಮಾ ಉದ್ದೇಶ’ ಎಂದು ಬರಹ ಆರಂಭಿಸಿದ್ದಾರೆ ನಯನತಾರಾ.
‘ಸಕಾರಾತ್ಮಕ ಸಂದೇಶವನ್ನು ರವಾನಿಸುವ ನಮ್ಮ ಪ್ರಾಮಾಣಿಕ ಪ್ರಯತ್ನದಲ್ಲಿ ಗೊತ್ತಿಲ್ಲದೆ ನಾವು ನಿಮ್ಮ ಭಾವನೆಗಳನ್ನು ನೋಯಿಸಿದ್ದೇವೆ. ಸೆನ್ಸಾರ್ ಆದ ನಮ್ಮ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗಿ ಒಟಿಟಿಯಲ್ಲಿ ಬಿಡುಗಡೆ ಆಯಿತು. ಅದನ್ನು OTTಯಿಂದ ತೆಗೆದು ಹಾಕುತ್ತಾರೆ ಎಂದು ನಾವು ಅಂದುಕೊಂಡಿರಲಿಲ್ಲ. ಯಾರ ಭಾವನೆ ಅಥವಾ ನಂಬಿಕೆಗೆ ಧಕ್ಕೆ ತರುವುದು ನನ್ನ ತಂಡದ ಉದ್ದೇಶ ಆಗಿರಲಿಲ್ಲ. ನಾನು ದೇವರಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿರುವ ಮತ್ತು ದೇಶಾದ್ಯಂತ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ವ್ಯಕ್ತಿ. ನಿಮ್ಮ ಭಾವನೆಗಳಿಗೆ ನೋವುಂಟು ಮಾಡಿದ ಎಲ್ಲ ಜನರಲ್ಲಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ’ ಎಂದಿದ್ದಾರೆ ಅವರು.
View this post on Instagram
ಇದನ್ನೂ ಓದಿ: ‘ಅನ್ನಪೂರ್ಣಿ’ ವಿವಾದ, ನಯನತಾರಾ ಬೆಂಬಲಕ್ಕೆ ವೆಟ್ರಿಮಾರನ್
‘ಅನ್ನಪೂರ್ಣಿ ಸಿನಿಮಾ ಮಾಡಿದ್ದರ ಹಿಂದಿನ ಉದ್ದೇಶವು ಜನರನ್ನು ಮೇಲಕ್ಕೆತ್ತುವುದು ಮತ್ತು ಪ್ರೇರೇಪಿಸುವುದು, ನೋಯಿಸುವುದಲ್ಲ. ಕಳೆದ ಎರಡು ದಶಕಗಳಿಂದ ಚಲನಚಿತ್ರೋದ್ಯಮದಲ್ಲಿ ಇರುವ ನಾನು ಒಂದು ಉದ್ದೇಶ ಇಟ್ಟುಕೊಂಡಿದ್ದೇನೆ. ಪರಸ್ಪರ ಕಲಿಯುವುದು ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸುವುದು’ ಎಂದು ನಯನತಾರಾ ಪತ್ರ ಪೂರ್ಣಗೊಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:33 am, Fri, 19 January 24