ವರ್ಷಗಳಿಂದ ಮುಚ್ಚಿದ್ದ ದೇವಸ್ಥಾನ ತೆರೆಸಿದ ನಟ ನಿಖಿಲ್, ಗ್ರಾಮಸ್ಥರಿಂದ ಪುಷ್ಪವೃಷ್ಠಿ
‘ಕಾರ್ತಿಕೇಯ’, ‘ಕಾರ್ತಿಕೇಯ 2’ ಸಿನಿಮಾಗಳಲ್ಲಿ ನಟಿಸಿರುವ ತೆಲುಗಿನ ನಟ ನಿಖಿಲ್ ಇತ್ತೀಚೆಗೆ ಮಾಡಿರುವ ಕಾರ್ಯವೊಂದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ.
‘ಕಾರ್ತಿಕೇಯ 2’, ‘18 ಪೇಜಸ್’ ಸಿನಿಮಾಗಳ ಮೂಲಕ ಹಿಟ್ ನೀಡಿರುವ ನಿಖಿಲ್ ಸಿದ್ಧಾರ್ಥ್ (Nikhil Siddharth), ಪೌರಾಣಿಕ, ಐತಿಹಾಸಿಕ ಸಿನಿಮಾಗಳ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದು, ಅಂಥಹುದೇ ಸಿನಿಮಾಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಇದೀಗ ನಟ ನಿಖಿಲ್ ಮಾಡಿರುವ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ತಮ್ಮ ‘ಕಾರ್ತಿಕೇಯ’ ಸಿನಿಮಾದಲ್ಲಿ ಮಾಡಿರುವಂತೆಯೇ ಮುಚ್ಚಿದ ದೇವಾಲಯವೊಂದನ್ನು ತೆರೆಯುವ ಕಾರ್ಯವನ್ನು ನಟ ನಿಖಿಲ್ ಮಾಡಿದ್ದಾರೆ.
ಆಂಧ್ರ ಪ್ರದೇಶದ ಭಾಪಟ್ಲ ಜಿಲ್ಲೆಯ ಚಿರಾಲದ ಬಳಿಯ ಗ್ರಾಮದಲ್ಲಿ ವರ್ಷಗಳಿಂದಲೂ ದೇವಾಲಯವೊಂದು ಬಾಗಿಲು ಹಾಕಿತ್ತು. ಈ ದೇವಾಲಯವನ್ನು ಮತ್ತೆ ತೆರೆಯುವ ಕಾರ್ಯವನ್ನು ನಿಖಿಲ್ ಮಾಡಿರುವುದಲ್ಲದೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಮಾಡಿಸಿದ್ದಾರೆ. ದೇವಾಲಯವನ್ನು ಮತ್ತೆ ತೆರೆದ ನಿಖಿಲ್ ಮೇಲೆ ಆ ಊರಿನ ಗ್ರಾಮಸ್ಥರು ಹೂವು ಸುರಿದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ವಿಡಿಯೋ ಹಂಚಿಕೊಂಡಿರುವ ನಿಖಿಲ್, ‘ಊರಿನ ಗ್ರಾಮಸ್ಥರಿಗೆ ಶಿಕ್ಷೆಯಾಗಿ ಊರಿನ ದೇವಾಲಯವನ್ನು ಮುಚ್ಚಲಾಗಿತ್ತು. ನಾವು ಕಳೆದ ತಿಂಗಳು ದೇವಾಲಯ ತೆರೆದು ಜೀರ್ಣೋದ್ಧಾರ ಮಾಡಿಸಿದೆವು. ಈಗ ಮತ್ತೆ ಅಲ್ಲಿಗೆ ಭೇಟಿ ನೀಡಿದಾಗ ಗ್ರಾಮಸ್ಥರ ಸಂತಸ ನೋಡಿ ಖುಷಿಯಾಯ್ತು’ ಎಂದಿದ್ದಾರೆ. ವಿಡಿಯೋನಲ್ಲಿ ಗ್ರಾಮದ ಮಹಿಳೆಯರು ನಿಖಿಲ್ ನಡೆಯುತ್ತಿರುವ ಹಾದಿಗೆ ಹೂವು ಹಾಸಿ ಸ್ವಾಗತ ಕೋರುತ್ತಿರುವ ದೃಶ್ಯವಿದೆ.
ಇದನ್ನೂ ಓದಿ:ಪ್ರಜ್ವಲ್ ರೇವಣ್ಣರನ್ನು ಸಂಪರ್ಕಿಸಿಲ್ಲ ಮತ್ತು ಅವರು ನನ್ನ ಸಂಪರ್ಕದಲ್ಲಿಲ್ಲ: ನಿಖಿಲ್ ಕುಮಾರಸ್ವಾಮಿ
ನಿಖಿಲ್ರ ಹತ್ತಿರದ ಸಂಬಂಧಿ ಮುದ್ದುಲುರಿ ಮಾಲ ಕೊಂಡಯ್ಯ ಅವರು ಚಿರಾಲ ಕ್ಷೇತ್ರದಲ್ಲಿ ಟಿಡಿಪಿ ಪಕ್ಷದ ಅಭ್ಯರ್ಥಿಯಾಗಿ ಟಿಡಿಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಅವರಿಗೆ ಟಿಕೆಟ್ ಕೊಡಿಸುವಲ್ಲಿ ನಿಖಿಲ್ ಪ್ರಯತ್ನವೂ ಇತ್ತು. ಕೊಂಡಯ್ಯ ಪರವಾಗಿ ನಿಖಿಲ್ ಚುನಾವಣೆಯಲ್ಲಿ ಸಕ್ರಿಯವಾಗಿ ಪ್ರಚಾರವನ್ನೂ ಸಹ ಮಾಡಿದ್ದರು. ಇದೀಗ ನಿನ್ನೆ ಬಂದ ಫಲಿತಾಂಶದಲ್ಲಿ ಕೊಂಡಯ್ಯ ಗೆದ್ದಿದ್ದಾರೆ. ನಿಖಿಲ್ ಸಹ ಮುಂದಿನ ದಿನಗಳಲ್ಲಿ ಚುನಾವಣಾ ರಾಜಕೀಯಕ್ಕೆ ಎಂಟ್ರಿ ನೀಡುವ ಸೂಚನೆಯನ್ನೂ ಸಹ ನೀಡಿದ್ದಾರೆ.
ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ನಿಖಿಲ್, 2006 ರಲ್ಲಿ ‘ಹೈದರಾಬಾದ್ ನವಾಬ್ಸ್’ ಸಿನಿಮಾ ಮೂಲಕ ನಾಯಕ ನಟನಾದರು. ಅದಾದ ಬಳಿಕ ನಿಖಿಲ್ಗೆ ಹೆಸರು ತಂದುಕೊಟ್ಟ ಸಿನಿಮಾ ‘ಹ್ಯಾಪಿಡೇಸ್’. ಅದಾದ ಬಳಿಕ ಹಲವು ಸಿನಿಮಾಗಳಲ್ಲಿ ನಿಖಿಲ್ ನಾಯಕ ನಟನಾಗಿ ನಟಿಸಿದರು. ‘ಸ್ವಾಮಿ ರಾರಾ’ ಹಾಗೂ ‘ಕಾರ್ತಿಕೇಯ’ ಸಿನಿಮಾಗಳು ದೊಡ್ಡ ಹಿಟ್ ಆದವು. ಕಾಮಿಡಿ ಆಕ್ಷನ್ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಿದ್ದ ನಿಖಿಲ್, ‘ಕಾರ್ತಿಕೇಯ 2’ ಸಿನಿಮಾ ಹಿಟ್ ಆದ ಬಳಿಕ ಧಾರ್ಮಿಕ, ಪೌರಾಣಿಕ, ಐತಿಹಾಸಿಕ ಸಿನಿಮಾಗಳ ಕಡೆಗೆ ಹೊರಳಿದ್ದಾರೆ. ಇದೀಗ ‘ಸ್ವಯಂಭು’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ‘ಇಂಡಿಯನ್ ಹೌಸ್’ ಹೆಸರಿನ ಸ್ವಾತಂತ್ರ್ಯ ಹೋರಾಟದ ಕತೆಯುಳ್ಳ ಸಿನಿಮಾದಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ