ನೀರಜ್ ಚೋಪ್ರಾರಿಂದ ಜಾವೆಲಿನ್ ಎಸೆತ ಮತ್ತು ಶ್ರೀಜೇಶ್ರಿಂದ ಹಾಕಿ ಆಡುವುದನ್ನು ಅಮಿತಾಬ್ ಕೆಬಿಸಿ ಸೆಟ್ನಲ್ಲಿ ಕಲಿತರು!
ಆಡಿಯನ್ಸ್ ತಮ್ಮ ತಮ್ಮ ಸ್ಥಳಗಳಲ್ಲಿ ಕೂತ ನಂತರ ಇವರಿಬ್ಬರ ಕಡೆ ತಿರುಗಿ, ‘ನಾನೊಂದು ಪ್ರಶ್ನೆ ಕೇಳ್ಲಾ? ನಿಮ್ಮ ಪದಕಗಳನ್ನು ನಾನೊಮ್ಮೆ ಮುಟ್ಲಾ?’ ಅನ್ನುತ್ತಾರೆ ಬಿಗ್ ಬಿ.
ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ವಿಶೇಷತೆಯೇ ಅದು. ಮಕ್ಕಳೊಂದಿಗೆ ಮಗುವಾಗ್ತಾರೆ, ಹಿರಿಯರೊಂದಿಗೆ ಮಾತಾಡುವಾಗ ಅವರಿಂದ ತಮಗೆ ಸಿಗುತ್ತಿರುವ ಗೌರವದ ಎರಡು ಪಟ್ಟನ್ನು ಹಿಂತಿರುಗಿಸುತ್ತಾರೆ. ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದ ಹೋಸ್ಟ್ ಆಗಿ ಅವರು ತಮ್ಮ ಬದುಕಿನ ಎಲ್ಲ ಮಜಲುಗಳನ್ನು ಅವಕಾಶ ಸಿಕ್ಕಾಗಲೆಲ್ಲ ಹಂಚಿಕೊಳ್ಳುತ್ತಾರೆ. ಟೋಕಿಯೋ ಒಲಂಪಿಕ್ಸ್ ನಲ್ಲಿ ಬಾರತಕ್ಕೆ ಮೊಟ್ಟ ಮೊದಲ ಬಾರಿಗೆ ಟ್ರ್ಯಾಕ್ ಅಂಡ್ ಫೀಲ್ಡ್ ಸ್ಪರ್ಧೆಗಳಲ್ಲಿ ಪದಕವೊಂದನ್ನು (ಅದೂ ಚಿನ್ನದ ಪದಕ) ಗೆದ್ದ ನೀರಜ್ ಚೋಪ್ರಾ ಮತ್ತು 41 ವರ್ಷಗಳ ನಂತರ ಹಾಕಿಯಲ್ಲಿ ಪದಕ ಗೆದ್ದ ಭಾರತೀಯ ಹಾಕಿ ಟೀಮಿನ ಸದಸ್ಯರಲ್ಲಿ ಒಬ್ಬರಾಗಿರುವ ಪಿ ಆರ್ ಶ್ರೀಜೇಶ್ ಅವರು ಇಷ್ಟರಲ್ಲೇ ಕೆಬಿಸಿಯ ಎಪಿಸೋಡ್ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎಪಿಸೋಡ್ ನ ಪ್ರೊಮೋ ನಮಗೆ ಲಭ್ಯವಾಗಿದ್ದು ಕ್ರೀಡಾಪಟುಗಳೊಂದಿಗೆ ಬಿಗ್ ಬಿ ತಮ್ಮ ಎಂದಿನ ಮನರಂಜನಾತ್ಮಕ ಶೈಲಿಯಲ್ಲಿ ಮಾತಾಡಿದ್ದಾರೆ.
View this post on Instagram
‘ಹಿಂದೂಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳ ನಡುವೆ ಅಮಿತಾಬ್ ಅವರು ಚೋಪ್ರಾ ಮತ್ತು ಶ್ರೀಜೇಶ್ ಅವರನ್ನು ಬರಮಾಡಿಕೊಳ್ಳುತ್ತಿರುವುದು ಪ್ರೊಮೋನಲ್ಲಿದೆ. ಸ್ಟುಡಿಯೋ ಒಳಗೆ ಬಂದ ಕೂಡಲೇ ಶ್ರೀಜೇಶ, ಸೂಪರ್ ಸ್ಟಾರ್ ಕಾಲಿಗೆ ಬಿದ್ದು ನಮಸ್ಕರಿಸಿ ಬಳಿಕ ಆಡಿಯನ್ಸ್ ನಲ್ಲಿ ಕೂತಿರುವವರಿಗೆ ವಿಶ್ ಮಾಡುತ್ತಾರೆ. ಚೋಪ್ರಾ ಹಾಕಿ ಆಟಗಾರರನನ್ನು ಅನುಕರಿಸುತ್ತಾರೆ.
ಆಡಿಯನ್ಸ್ ತಮ್ಮ ತಮ್ಮ ಸ್ಥಳಗಳಲ್ಲಿ ಕೂತ ನಂತರ ಇವರಿಬ್ಬರ ಕಡೆ ತಿರುಗಿ, ‘ನಾನೊಂದು ಪ್ರಶ್ನೆ ಕೇಳ್ಲಾ? ನಿಮ್ಮ ಪದಕಗಳನ್ನು ನಾನೊಮ್ಮೆ ಮುಟ್ಲಾ?’ ಅನ್ನುತ್ತಾರೆ. ಕೂಡಲೇ ಅವರಿಬ್ಬರು ತಮ್ಮ ಕೊರಳಲ್ಲಿದ್ದ ಪದಕಗಳನ್ನು ಅಮಿತಾಬ್ ಗೆ ಕೊಡುತ್ತಾರೆ.
‘ದಯವಿಟ್ಟು ತೆಗೀಬೇಡಿ, ನಾನು ಅವುಗಳನ್ನು ಧರಿಸುವುದಿಲ್ಲ,’ ಎಂದು ಹೇಳಿದಾಗ ಆಡಿಯನ್ಸ್ ನಲ್ಲಿದ್ದವರು ನಗಲಾರಂಭಿಸುತ್ತಾರೆ. ಆದಾದ ಮೇಲೆ ಬಿಗ್ ಬಿ ಪದಕಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು, ‘ಅರೇ, ಇವು ತುಂಬಾ ಭಾರವಾಗಿವೆ,’ ಎನ್ನುತ್ತಾರೆ.
‘ನನ್ನ ಬದುಕಿನಲ್ಲಿ ಇವುಗಳನ್ನು ಧರಿಸುವ ಭಾಗ್ಯವಂತೂ ಇಲ್ಲ, ಅವುಗಳನ್ನು ಒಮ್ಮೆ ಮುಟ್ಟಿದೆನಲ್ಲ, ಅಷ್ಟು ಸಾಕು ನನಗೆ,’ ಎಂದು ಅಮಿತಾಬ್ ಹೇಳುತ್ತಾರೆ. ಇದಕ್ಕಿಂತ ಮೊದಲು ಬಿಡುಗಡೆಯಾಗಿರುವ ಪ್ರೋಮೋನಲ್ಲಿ ಒಲಂಪಿಯನ್ಗಳೊಂದಿಗೆ ಅಮಿತಾಬ್ ವಿನೋದವಾಗಿ ಮಾತಾಡಿದ್ದು ಕಂಡಿದೆ. ಕೆಬಿಸಿಯ ಪ್ರಶ್ನೆಗಳ ಹೊರತಾಗಿ ಅವರ ತಮ್ಮ ಸಿನಿಮಾಗಳ ಜನಪ್ರಿಯ ಡೈಲಾಗ್ಗಳನ್ನು ಹೇಳಿ ಅವುಗಳನ್ನು ಹರ್ಯಾಣ್ವಿ ಭಾಷೆಗೆ ತರ್ಜುಮೆ ಮಾಡುವಂತೆ ಚೋಪ್ರಾಗೆ ಹೇಳಿದ್ದಾರೆ.
ಅಮಿತಾಬ್ ಅವರ ಸಿಲ್ ಸಿಲಾ ಚಿತ್ರದ ‘ಮೈ ಔರ್ ಮೇರಿ ತನ್ಹಾಯೀ ಅಕ್ಸರ್ ಯೆ ಬಾತೆ ಕರ್ತೆ ಹೈ,’ ಡೈಲಾಗನ್ನು ಚೋಪ್ರಾ ತರ್ಜುಮೆ ಮಾಡಿ, ಬಿಗ್ ಬಿ ಅವರ ‘ಜಂಜೀರ್’ ಚಿತ್ರದ ‘ಯೆ ತುಮ್ಹಾರೆ ಬಾಪ್ ಕಾ ಘರ್ ನಹೀಂ ಹೈ,’ ಡೈಲಾಗನ್ನು ಹರ್ಯಾಣ್ವಿ ಬಾಷೆಯಲ್ಲಿ ಹೇಗೆ ಹೇಳಬೇಕು ಅನ್ನೋದನ್ನ ಹೇಳಿಕೊಟ್ಟಿದ್ದಾರೆ.
ಸೋನಿ ಚ್ಯಾನೆಲ್ ಮೂಲಗಳ ಪ್ರಕಾರ ಅಮಿತಾಬ್ ಅವರು ಜಾವೆಲಿನ್ ಎಸೆಯುವ ಬೇಸಿಕ್ ವಿವರಗಳನ್ನು ಚೋಪ್ರಾ ಅವರಿಗೆ ಕೇಳಿ ತಿಳಿದೊಕೊಂಡರಂತೆ ಮತ್ತು ಶ್ರೀಜೇಶ್ ಜೊತೆ ಸೆಟ್ನಲ್ಲೇ ಹಾಕಿ ಆಡಿ ಒಂದು ಗೋಲು ಸಹ ಬಾರಿಸಿದರಂತೆ!
ಇದನ್ನೂ ಓದಿ: ₹ 16 ಕೋಟಿ ಮೌಲ್ಯದ ಲಸಿಕೆ ಅಗತ್ಯವಿದ್ದ ಮಗುವಿಗೆ ಸಹಾಯ ಮಾಡುವುದಾಗಿ ಕೆಬಿಸಿ ವೇದಿಕೆಯಲ್ಲೇ ಘೋಷಿಸಿದ ಅಮಿತಾಭ್
Published On - 12:42 am, Fri, 17 September 21