ಚಿರಂಜೀವಿಯ ಕೊಲೆಗೆ ನಡೆದಿತ್ತು ಪ್ರಯತ್ನ, ಬದುಕುಳಿದಿದ್ದು ಹೇಗೆ?
Megastar Chiranjeevi: ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬ ಇಂದು (ಆಗಸ್ಟ್ 22). ಚಿರಂಜೀವಿ ಅವರಿಗಾಗಿ ಪ್ರಾರ್ಥನೆ ಮಾಡುವ ಕೋಟ್ಯಂತರ ಮಂದಿ ಅಭಿಮಾನಿಗಳಿದ್ದಾರೆ. ಆದರೆ ಕೆಲ ವರ್ಷಗಳ ಹಿಂದೆ ಚಿರಂಜೀವಿ ಅವರನ್ನು ಕೊಲ್ಲುವ ಪ್ರಯತ್ನ ನಡೆದಿತ್ತು. ಆದರೆ ಅಂದು ಚಿರಂಜೀವಿ ಉಳಿದಿದ್ದು ಆಶ್ಚರ್ಯ. ಏನದು ಘಟನೆ? ಚಿರಂಜೀವಿ ಅವರನ್ನು ಕೊಲ್ಲುವ ಪ್ರಯತ್ನ ಮಾಡಿದ್ದು ಯಾರು? ಇಲ್ಲಿದೆ ಪೂರ್ಣ ಮಾಹಿತಿ...

ಮೆಗಾಸ್ಟಾರ್ ಚಿರಂಜೀವಿಯವರ ನಿಜ ಹೆಸರು ಶಿವಶಂಕರ ವರಪ್ರಸಾದ್. ಚಿರಂಜೀವಿ ಅವರ ತಾಯಿಯವರು ಮಗನಿಗೆ ಚಿರಂಜೀವಿ ಎಂದು ಹೆಸರು ನೀಡಿದರಂತೆ. ಆಂಜನೇಯ ಸ್ವಾಮಿಯ ಹೆಸರಿದು, ಅದರರ್ಥ ಸಾವಿಲ್ಲದವ. ಇಂದು (ಆಗಸ್ಟ್ 22) ಚಿರಂಜೀವಿ ಹುಟ್ಟುಹಬ್ಬ. ಅಭಿಮಾನಿಗಳೆಲ್ಲ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಆದರೆ ಕೆಲ ವರ್ಷಗಳ ಹಿಂದೆ ಚಿರಂಜೀವಿಯವರನ್ನು ಕೊಲ್ಲುವ ಪ್ರಯತ್ನ ನಡೆದಿತ್ತು. ಆದರೆ ಅದರಿಂದ ಪಾರಾಗಿದ್ದು ಒಂದು ಅಚ್ಚರಿಯೇ.
1979 ರಿಂದಲೇ ಚಿರಂಜೀವಿ ಸ್ಟಾರ್ ಆಗಿ ಬೆಳೆಯಲು ಆರಂಭಿಸಿದರು. 80 ರ ದಶಕದಲ್ಲಿ ಪ್ರತಿ ವರ್ಷಕ್ಕೆ 15-16 ಸಿನಿಮಾಗಳಲ್ಲಿ ಚಿರಂಜೀವಿ ನಟಿಸುತ್ತಿದ್ದರು. ಅತ್ಯಂತ ವೇಗವಾಗಿ ಅವರು ತೆಲುಗು ಚಿತ್ರರಂಗದ ಹೊಸ ಸ್ಟಾರ್ ನಟರಾದರು. 80ರ ದಶಕದ ಅಂತ್ಯದ ವೇಳೆಗೆಲ್ಲ ಚಿರಂಜೀವಿ ಸೂಪರ್ ಸ್ಟಾರ್ ಆಗಿಬಿಟ್ಟಿದ್ದರು. ಅವರ ಅಭಿಮಾನಿ ಸಂಘಗಳು ಆಗಿನ ಅವಿಭಜಿತ ಆಂಧ್ರ ಪ್ರದೇಶ ಹಳ್ಳಿ-ಹಳ್ಳಿಯಲ್ಲೂ ಉದಯಿಸಲು ಪ್ರಾರಂಭಿಸಿದ್ದವು.
ಚಿರಂಜೀವಿ ಸಹ ಅಭಿಮಾನಿಗಳೊಟ್ಟಿಗೆ ಬಲು ಆತ್ಮೀಯರಾಗಿರುತ್ತಿದ್ದರು. ಇದೇ ಕಾರಣಕ್ಕೆ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಒಮ್ಮೆ 1988 ರಲ್ಲಿ ‘ಮರಣ ಮೃದಂಗಂ’ ಸಿನಿಮಾದ ಶೂಟಿಂಗ್ ವೇಳೆ ಅವರಿಗೆ ಪರಿಚಯವಿದ್ದ ಅಭಿಮಾನಿಯೊಬ್ಬ ಶೂಟಿಂಗ್ಗೆ ಬಂದು, ತನ್ನ ಹುಟ್ಟುಹಬ್ಬ ಇಂದು ನಿಮ್ಮೊಟ್ಟಿಗೆ ಕೇಕ್ ಕತ್ತರಿಸಲು ಬಂದಿದ್ದೇನೆ ಎಂದ. ಸರಿಯೆಂದು ಚಿರಂಜೀವಿ ಸಹ ಆತನ ಜೊತೆ ನಿಂತು ಕೇಕ್ ಕತ್ತರಿಸಿದರು. ಆ ಕೇಕ್ ಅನ್ನು ಅಭಿಮಾನಿ, ಚಿರಂಜೀವಿಗೆ ತಿನ್ನಿಸಲು ಯತ್ನಿಸಿದ. ಆದರೆ ಹೊರಗಿನ ಆಹಾರ ತಿನ್ನದ ಚಿರಂಜೀವಿ ಅದನ್ನು ನಯವಾಗಿ ನಿರಾಕರಿಸಿದರು. ಆದರೆ ಆ ಅಭಿಮಾನಿ ಬಲವಂತವಾಗಿ ಕೇಕ್ ಅನ್ನು ಚಿರಂಜೀವಿ ಬಾಯಿಗೆ ಇಡಲು ಪ್ರಯತ್ನಿಸಿದ.
ಇದನ್ನೂ ಓದಿ:ಚಿರಂಜೀವಿ ಹುಟ್ಟುಹಬ್ಬ, ಎರಡು ಸಿನಿಮಾ ಟೀಸರ್ ಬಿಡುಗಡೆ ಯಾವವು?
ಇದನ್ನು ಕಂಡ ಯೂನಿಟ್ನವರು ಆತನನ್ನು ತಡೆದರು. ಅದಾದ ಬಳಿಕ ಆ ಅಭಿಮಾನಿ ಅಲ್ಲಿಂದ ಹಠಾತ್ತನೆ ಓಡಿ ಹೋದ. ಚಿರಂಜೀವಿಗೆ ಏನೋ ಅನುಮಾನ ಬಂದು ಹೋಗಿ ಬಾಯಿ ತೊಳೆದುಕೊಂಡರು. ಹಲ್ಲುಜ್ಜಿಕೊಂಡು ಶೂಟಿಂಗ್ಗೆ ರೆಡಿಯಾದರು. ಆದರೆ ಮೇಕಪ್ ಮಾಡಿಸಿಕೊಳ್ಳುವಾಗ ಚಿರಂಜೀವಿ ತುಟಿಯಲ್ಲಿ ಉರಿತ ಕಂಡು ಬಂತು. ಅವರ ತುಟಿಯ ಬಣ್ಣ ನೀಲಿ ಆಗಲು ಪ್ರಾರಂಭವಾಯ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಅಲ್ಲಿಂದ ಮತ್ತೊಂದು ದೊಡ್ಡ ಆಸ್ಪತ್ರೆಗೆ ದಾಖಲಿಸಲಾಯ್ತು. ಅಲ್ಲಿ ಐಸಿಯುನಲ್ಲಿ ಚಿರಂಜೀವಿ ಅವರಿಗೆ ಚಿಕಿತ್ಸೆ ನೀಡಲಾಯ್ತು. ಆಗಿನ ಕಾಲಕ್ಕೆ ಇದು ಬಹಳ ದೊಡ್ಡ ಸುದ್ದಿಯಾಯ್ತು.
ಚಿರಂಜೀವಿಗೆ ವಿಷವಿಟ್ಟಿದ್ದ ಆ ಯುವಕನ್ನು ಚಿರಂಜೀವಿಯ ಆಗಿನ ಮ್ಯಾನೇಜರ್ ಏನೋ ಮಾಡಿ ಪತ್ತೆ ಮಾಡಿದರು. ಬಳಿಕ ಆತನ ಬಳಿ ಹೀಗೇಕೆ ಮಾಡಿದೆ ಎಂದು ಕೇಳಿದಾಗ. ಚಿರಂಜೀವಿ ಅವರು ಇತ್ತೀಚೆಗೆ ನನ್ನೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ, ಅವರಿಗೆ ಹೆಚ್ಚು ಅಭಿಮಾನಿಗಳಾಗಿದ್ದಾರೆ. ಅವರು ನನಗೆ ಹೆಚ್ಚಿನ ಸಮಯ ನೀಡುತ್ತಿಲ್ಲ. ಅವರೊಟ್ಟಿಗೆ ನನ್ನನ್ನು ಬಿಟ್ಟು ಇನ್ಯಾರೂ ಆತ್ಮೀಯವಾಗಿರಬಾರದು ಹಾಗಾಗಿ ಕೇರಳಕ್ಕೆ ಹೋಗಿ ಅಲ್ಲಿ ಮಾಟ ಮಾಡಿಸಿ ಅಲ್ಲಿಂದ ತಂದ ವಿಷಯವನ್ನು ಕೇಕ್ಗೆ ಹಾಕಿ ತಿನ್ನಿಸಿದ್ದೆ ಎಂದು ಹೇಳಿದನಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




